Advertisement

ಕಾಯಕ ಶ್ರದ್ಧೆ, ಸೇವಾ ಮನೋಭಾವದ ಸಾಕಾರ ಮೂರ್ತಿಯಾಗಿದ್ದ ಜೋಯಿಸರು

01:52 AM Feb 17, 2021 | Team Udayavani |

ರಾಮಾಜೋಯಿಸರು ಬಡತನ ಕುಟುಂಬದಲ್ಲಿ ಜನಿಸಿದರು. ಶಿವಮೊಗ್ಗದಲ್ಲಿಯೇ ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದರು. ಆ ಸಂದರ್ಭದಲ್ಲಿಯೇ ಅವರು ಆರ್‌ಎಸ್‌ಎಸ್‌ನಿಂದ ಆಕರ್ಷಿತರಾದರು. ಸಂಘದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬಹಳ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ, ವಿದ್ಯಾರ್ಥಿ ದಿಸೆಯಲ್ಲಿಯೇ ಒಳ್ಳೆಯ ಹೆಸರು ಮಾಡಿದವರು. ಮುಂದೆ ವಕೀಲಿ ಪದವಿ ಪಡೆದ ಅನಂತರ ರಟ್ಟಿ ಅಯ್ಯಂಗಾರ ಎನ್ನುವವರ ಬಳಿ ಶಿಷ್ಯರಾಗಿ ಬೆಂಗಳೂರಿ ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು.

Advertisement

ಆರ್‌ಎಸ್‌ಎಸ್‌ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ ರಾಮಾ ಜೋಯಿಸರು, ಜನ ಸಂಘದ ಜತೆಗೆ ಸಂಬಂಧ ಬೆಳೆಸಿಕೊಂಡಿದ್ದರು. ಅಖೀಲ ಭಾರತೀಯ ನಾಯಕರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಜತೆ ರಾಮಾ ಜೋಯಿಸರ ಒಡನಾಟ ಉತ್ತಮ ವಾಗಿತ್ತು. ಜನ ಸಂಘದಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. 1972ರಲ್ಲಿ ಶಿವಮೊಗ್ಗದಲ್ಲಿ ನಡೆದ 10ನೇ ಪ್ರಾಂತೀಯ ಅಧಿವೇಶನಕ್ಕೆ ರಾಮಾಜೋಯಿಸರು ಹಾಗೂ ನಾನು ವಾಜಪೇಯಿ ಅವರನ್ನು ಕರೆದು ಕೊಂಡು ಬರಲು ಹೋಗಿದ್ದೆವು. ಆ ಸಂದರ್ಭದಲ್ಲಿ ಅಟಲ್‌ ಅವರು “ಜೋಯಿಸರು ಕರೆದ ಮೇಲೆ ಇಲ್ಲ ಅನ್ನಲು ಹೇಗೆ ಬರುತ್ತದೆ?’ ಎಂದು ನಗುತ್ತಾ ಹೇಳಿ ಶಿವಮೊಗ್ಗದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂದರೆ ಆ ಸಂದರ್ಭದಲ್ಲಿಯೇ ರಾಷ್ಟ್ರ ಮಟ್ಟದ ನಾಯಕರೊಂದಿಗೆ ರಾಮಾ ಜೋಯಿಸರ ಸಂಪರ್ಕ ಇತ್ತು.ಆರ್‌ಎಸ್‌ಎಸ್‌ ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಾಲ್ಕರ್‌ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಅಖೀಲ ಭಾರತೀಯ ಉಪಾಧ್ಯಕ್ಷರಾಗಿ ಜೋಯಿಸರು ಕೆಲಸ ಮಾಡಿದ್ದರು. ಅಲ್ಲದೇ ಭಾರತೀಯ ವಿಕಾಸ್‌ ಪರಿಷತ್ತಿನ ಅಧ್ಯಕ್ಷ ರಾಗಿಯೂ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡಿದ್ದರು.

1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಗಿದ್ದ ಸಂದರ್ಭ. ಆಗ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಅವರಿಬ್ಬರ ಪರವಾಗಿವಾದ ಮಾಡಲು ರಾಮಾಜೋಯಿಸರು ಪಿಐಎಲ್‌ ಹಾಕಿದ್ದರು. ಹೀಗೆ ಒಂದು ದಿನ ರಾಮಾಜೋಯಿಸರು ವಾದ ಮಂಡಿಸಿ ತಮ್ಮ ಮನೆಗೆ ಹೋದಾಗ ಪೊಲೀಸರು ಬಂಧಿಸಿದರು! ಹೀಗಾಗಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರೂ ಕೂಡ ಅಟಲ್‌ ಜಿ ಜತೆಗೇ ಜೈಲಿನಲ್ಲಿದ್ದರು.

ತುರ್ತು ಪರಿಸ್ಥಿತಿ ಮುಗಿದ ಮೇಲೆ ಜನತಾ ಸರಕಾರ ಬಂದಾಗ ಅವರನ್ನು ಬಿಹಾರ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಯಿತು. ಆ ಸಮಯದಲ್ಲಿ ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಸರಕಾರ ಇತ್ತು. ಒಂದು ಹಂತದಲ್ಲಿ ಲಾಲೂ ಪ್ರಸಾದ್‌ ಅವರಿಗೆ ಗೌರವ ಡಾಕ್ಟರೇಟ್‌ ಕೊಡಬೇಕೆಂದು ಖುದ್ದು ಅಲ್ಲಿನ ಸರಕಾರವೇ ಶಿಫಾರಸು ಮಾಡಿತ್ತು! ಆದರೆ ಎಲ್ಲ ಒತ್ತಡಗಳ ನಡು ವೆಯೂ ರಾಮಾಜೋಯಿಸರು ಈ ಶಿಫಾರಸನ್ನು ತಿರಸ್ಕರಿಸಿಬಿಟ್ಟರು. ಈ ನಡೆ ರಾಮಾಜೋಯಿಸರು ಎಷ್ಟು ಸತ್ಯನಿಷ್ಠರಾಗಿದ್ದರು, ಧೀಮಂತ ವ್ಯಕ್ತಿಯಾಗಿದ್ದರು ಎನ್ನುವುದನ್ನು ಸೂಚಿಸುತ್ತದೆ.

ಅನಂತರ ರಾಮಾಜೋಯಿಸರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲಾಯಿತು. ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಸಂಸತ್ತಿನಲ್ಲಿ ಹಲವು ಬಾಗಿಲುಗಳ ಮೇಲೆ ದೇವನಾಗರಿ ಲಿಪಿಯಲ್ಲಿ ವೇದ, ಉಪನಿಷತ್ತು, ಭಗವದ್ಗೀತೆಯ ಹಲವಾರು ಶ್ಲೋಕಗಳಿವೆ. ಇದನ್ನು ಕಂಡದ್ದೇ ರಾಮಾಜೋಯಿಸರು ಅವುಗಳನ್ನು ಸಂಗ್ರಹಿಸಿ ಕನ್ನಡ ಮತ್ತು ಇಂಗ್ಲೀಷ್ಗೆ ತರ್ಜುಮೆ ಮಾಡಿ ಪುಸ್ತಕ ಮಾಡಿದ್ದರು! ಆ ಪುಸ್ತಕವನ್ನು ನನ್ನ ಕಡೆಯಿಂದ ಬಿಡುಗಡೆ ಮಾಡಿಸಿದರು. ಬಹಳ ಜನರಿಗೆ ಈ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಈ ಪುಸ್ತಕ ಬಂದ ಮೇಲೆಯೇ ಬಹಳ ಜನರು ಆಶ್ಚರ್ಯದಿಂದ ಸಂಸತ್ತಿನ ಬಾಗಿಲುಗಳನ್ನು ನೋಡುವಂತಾಯಿತು. ಹಿಂದೂ ಆಸ್ತಿ ಹಕ್ಕು ಕಾಯ್ದೆ ಜಾರಿಗೆ ಬರಲು ಗುಲ್ಬರ್ಗಾ ಮೂಲದ ಮಿಥಾಲೇಶ್ವರ ಎಂಬ ವ್ಯಕ್ತಿಯೊಬ್ಬರು ಕಾರಣ. ರಾಮಾಜೋಯಿಸರು ಮಿಥಾಲೇಶ್ವರರ ಹಳ್ಳಿಗೆ ಹೋಗಿ ಒಂದು ಸಂಸ್ಥೆ ಕಟ್ಟಿಸಿದ್ದಾರೆ!

Advertisement

ತಮ್ಮ ಬದುಕಿನುದ್ದಕ್ಕೂ ಬಹಳ ಮೌಲ್ಯಾಧಾರಿತ ಜೀವನ ನಡೆಸಿದ ವ್ಯಕ್ತಿ ರಾಮಾಜೋಯಿಸರು. ವಕೀಲರಾಗಿ, ರಾಜ್ಯಪಾಲರಾಗಿ, ರಾಜ್ಯ ಸಭೆ ಸದಸ್ಯರಾಗಿ, ಸಾಕಷ್ಟು ಒಳ್ಳೆಯ ಕೆಲಸ ಮಾಡಿದರು. ಅವರ ಅಗಲಿಕೆ ನಮಗೆಲ್ಲ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ.

– ಡಿ. ಎಚ್‌. ಶಂಕರ ಮೂರ್ತಿ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next