ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಮನ ವಿಶೇಷ ಸ್ಮರಣೆ ಸೇವಾ ಕಾರ್ಯ ನಿರಂತರ ನಡೆಯಬೇಕು ಎಂಬ ಆಶಯದಲ್ಲಿ ಅಧಿಕ ಮಾಸದಲ್ಲಿ ದಶಕೋಟಿ ಸಾಮೂಹಿಕ ರಾಮ ಜಪ ಯಜ್ಞ ನಡೆಸುವಂತೆ ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದರು.
ಶ್ರೀಗಳ ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ 880 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳ 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ರಾಮ ಜಪ ಮಾಡಿದ್ದಾರೆ. ಶಾಲೆ, ಕಾಲೇಜು ಮಾತ್ರವಲ್ಲದೆ ವಿವಿಧ ಸಂಘ ಗಳು, ಸಂಘ ಪರಿವಾರದ ಸಂಘಟನೆ ಗಳು, ಬಾಲ ಗೋಕುಲ, ಭಜನಾ ಮಂದಿರಗಳಲ್ಲಿ ಜಪಯಜ್ಞ ನಡೆಯುತ್ತಿವೆ.
ಅಧಿಕ ಶ್ರಾವಣ ಮಾಸ ನೆಪ ವಾಗಿಟ್ಟು ಕೊಂಡು ಅಯೋಧ್ಯೆ ಮಂದಿರ ನಿರ್ಮಾಣದ ಹೊತ್ತಿನಲ್ಲಿ ಮಕ್ಕಳಿಂದ ಆರಂಭಿಸಿ ಹಿರಿಯರ ವರೆಗೆ ರಾಮನ ಸ್ಮರಣೆ ಮಾಡಲು ಎಲ್ಲರ ಒಳಿತಿಗಾಗಿ ದಶಕೋಟಿ ರಾಮಯಜ್ಞಕ್ಕೆ ಕರೆ ನೀಡಿದ್ದೆವು. ಇದಕ್ಕೆ ನೂರಾರು ಶಿಕ್ಷಣ ಸಂಸ್ಥೆಗಳು ಹಾಗೂ ಅನೇಕ ಸಂಘ – ಸಂಸ್ಥೆಗಳು ಸ್ಪಂದಿಸಿರುವುದು ಸಂತಸ ತಂದಿದೆ. ಸಾಧ್ಯವಿದ್ದರೆ ಪ್ರತೀ ಶಾಲೆಯಲ್ಲಿ ನಿತ್ಯದ ಪ್ರಾರ್ಥನೆ ಜತೆಗೆ ಕನಿಷ್ಠ
ಹತ್ತು ಬಾರಿಯಾದರೂ ರಾಮನ ಸ್ಮರಣೆ ಮಾಡಲು ಪ್ರಯತ್ನಿಸಬೇಕು. ಈ ವರೆಗೆ ಜಪಯಜ್ಞದಲ್ಲಿ ತೊಡಗಿಸಿಕೊಳ್ಳದ ಶಾಲೆಗಳಲ್ಲಿಯೂ ಈ ಅಭಿಯಾನ ನಡೆಯುವಂತಾಗಲಿ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.