Advertisement

ಶ್ರೀಧರ ಗಾಣಿಗರಿಗೆ ರಾಮ ಗಾಣಿಗ ಪ್ರಶಸ್ತಿ 

06:00 AM Nov 09, 2018 | |

ಮೈಮನ ತುಂಬಿದ ವೇಷಗಾರಿಕೆ, ಸೊಬಗು, ಸೊಗಸು ತೋರುವ ಹೆಜ್ಜೆಗಾರಿಕೆ ಬೆಡಗು ಬಿನ್ನಾಣದ ಒನಪು ವೈಯಾರಗಳ ಮೈಗೂಡುವಿಕೆಯಿಂದ ಪಾತ್ರದ ಪರಕಾಯ ಪ್ರವೇಶ ಮಾಡಿ ಯಕ್ಷ ಪ್ರೇಮಿಗಳ ಮನಸೂರೆಗೊಂಡ ಕಲಾವಿದರೇ ಉಪ್ಪುಂದ ಶ್ರೀಧರ ಗಾಣಿಗರು. 

Advertisement

ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ಹೆರಂಜಾಲು ಸುಬ್ಬಣ್ಣ ಗಾಣಿಗರಿಂದ ತಾಳ, ಹೆಜ್ಜೆ ಪಾತ್ರಗಳ ಪರಿಚಯ ಹಾಗೂ ಯಕ್ಷಗಾನದ ವಿವಿಧ ಮಜಲುಗಳನ್ನು ಅಭ್ಯಸಿಸಿ 15ರ ವಯಸ್ಸಿನಲ್ಲೇ ರಂಗ ಪ್ರವೇಶ ಮಾಡಿ ಶ್ರದ್ಧೆಯಿಂದ ರಂಗದ ಕಸುಬನ್ನು ಕರಗತ ಮಾಡಿಕೊಂಡರು. ಸೌಕೂರು, ಮಾರಣಕಟ್ಟೆ, ಕಮಲಶಿಲೆ, ಕೋಟ ಅಮೃತೇಶ್ವರಿ ಮೇಳ ಮತ್ತು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಮನಸೂರೆಗೊಂಡಿದ್ದಾರೆ. ಸುಭದ್ರೆ, ಮೀನಾಕ್ಷಿ, ದ್ರೌಪದಿ, ಭ್ರಮರಕುಂತಳೆ, ಯೋಜನಾಗಂಧಿ, ಶ್ರೀದೇವಿ ಮಹಾತ್ಮೆಯ ಶ್ರೀದೇವಿ ಪಾತ್ರ ಸಾಕಷ್ಟು ಪ್ರಚಾರ ನೀಡಿವೆ. ಶ್ರೀಧರ ಗಾಣಿಗರಿಗೆ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ರಿ. ಮೂಡುಕೇರಿ ಬಾರಕೂರು ಇವರು ನವೆಂಬರ್‌ 30ರಂದು ನಡೆಯುವ ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಸುವರ್ಣ ಮಹೋತ್ಸವ ಯಕ್ಷ ನಿಧಿಯಿಂದ ಕೊಡಮಾಡುವ ದಿ| ಹಾರಾಡಿ ರಾಮ ಗಾಣಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.     

ರಘುರಾಮ ಬೈಕಾಡಿ 

Advertisement

Udayavani is now on Telegram. Click here to join our channel and stay updated with the latest news.

Next