ನವದೆಹಲಿ: ಭಗವಾನ್ ಶ್ರೀ ರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡುವ ಹೊಣೆಯನ್ನು ಹೊತ್ತಿರುವ ರಾಮ ಮಂದಿರ ನಿರ್ಮಾಣ ಸಮಿತಿಯ ಸದಸ್ಯರ ಪ್ರಥಮ ಸಭೆ ಇಂದು ನವದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿ ನಡೆಯಿತು.
ಹಿರಿಯ ವಕೀಲ ಕೆ. ಪರಾಶರನ್ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಮಂಡಳಿಯ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಮಹಾಂತ ನೃತ್ಯಗೋಪಾಲ ದಾಸ್ ಅವರನ್ನು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಚಂಪತ್ ರೈ ಅವರನ್ನು ಕಾರ್ಯದರ್ಶಿಯನ್ನಾಗಿಯೂ ಗೋವಿಂದ್ ಗಿರಿ ಅವರನ್ನು ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಇಂದಿನ ಪ್ರಥಮ ಸಭೆಯಲ್ಲಿ ರಾಮ ಮಂದಿರ ನಿರ್ಮಾಣ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಊಹಿಸಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಸಮಿತಿಯು ‘ನಿರ್ಮಾಣ ಸಮಿತಿ’ಯೊಂದನ್ನು ರಚಿಸಿದ್ದು ಇದರ ಮುಖ್ಯಸ್ಥರಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಹಾಗೂ ನರೇಂದ್ ಮೋದಿ ಅವರ ಈ ಹಿಂದಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ನೃಪೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.
ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಈ ಇತ್ತೀಚೆಗಷ್ಟೇ ಈ ಸಮಿತಿಯನ್ನು ನೆಮಕ ಮಾಡಿತ್ತು.