Advertisement

ಡಿಸೆಂಬರ್‌ನಿಂದ ರಾಮಮಂದಿರ

06:00 AM Nov 04, 2018 | Team Udayavani |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತ ಕುತೂಹಲ ಹಾಗೂ ಒತ್ತಡ ಹೆಚ್ಚುತ್ತಿರುವ ನಡುವೆ ದಿಲ್ಲಿಯಲ್ಲಿ ನಡೆಯುತ್ತಿರುವ ಧರ್ಮಾದೇಶ ಕಾರ್ಯಕ್ರಮದಲ್ಲೂ ಇದೇ ವಿಚಾರ ಚರ್ಚೆಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವನ್ನು ಡಿಸೆಂಬರ್‌ನಲ್ಲಿ ಆರಂಭಿಸುತ್ತೇವೆ ಎಂದು ವಿಹಿಂಪ ಹಿರಿಯ ನಾಯಕ ರಾಮ್‌ ವಿಲಾಸ್‌ ವೇದಾಂತಿ ಘೋಷಿಸಿದ್ದಾರೆ.

Advertisement

ಅಖೀಲ ಭಾರತೀಯ ಸಂತ ಸಮಿತಿಯು ಆಯೋಜಿಸಿರುವ ಎರಡು ದಿನಗಳ ಧರ್ಮಾ ದೇಶ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ನೂರಾರು ಸಂತರು ಭಾಗವಹಿಸಿದ್ದಾರೆ. ಶನಿವಾರ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಾಂತಿ, ಕಾನೂನು ಮೂಲಕ ಅಥವಾ ಅಧ್ಯಾದೇಶದ ಮೂಲಕ ರಾಮಮಂದಿರ ನಿರ್ಮಾಣ ಮಾಡ ಬೇಕಿಲ್ಲ. ಎಲ್ಲರ ಸಮ್ಮತಿಯಿಂದಲೇ ಅದನ್ನು ನಿರ್ಮಿಸುತ್ತೇವೆ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ, ಲಕ್ನೋದಲ್ಲಿ ಮಸೀದಿ ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ವೇದಾಂತಿ ಹೇಳಿದ್ದು, ಇದಕ್ಕೆ ಹಲವು ಸಂತರು ದನಿಗೂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಚಿವರು ಹಾಗೂ ಸಂಸದರೆಲ್ಲರಿಗೂ ಮಂದಿರ ನಿರ್ಮಾಣ ವಾಗಬೇಕು ಎಂಬ ಬಯಕೆಯಿದೆ. ಆದರೆ ಶಾಸನ ತಂದು ನಿರ್ಮಿಸಿದರೆ ಹಿಂಸಾಚಾರ ನಡೆಯಬಹುದು. 
ಅದು ಬೇಡ. ಶಾಂತಿಯಿಂದ ಮಂದಿರ ನಿರ್ಮಿಸಬೇಕಿದೆ ಎಂದಿದ್ದಾರೆ. ಧರ್ಮಾದೇಶ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯ ನೂರಾರು ಸಂತರು ಭಾಗವಹಿಸಿದ್ದು, ರಾಮಮಂದಿರ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.

ಜನಾಭಿಪ್ರಾಯ ಸಂಗ್ರಹಿಸಿ
ಇನ್ನೊಂದೆಡೆ, ರಾಮಮಂದಿರ ನಿರ್ಮಾಣಕ್ಕೆ ಅಧ್ಯಾದೇಶ ಹೊರಡಿಸುವುದು ಅಥವಾ ವಿವಾದಿತ ಭೂಮಿ ಸ್ವಾಧೀನ ಸಾಧುವಲ್ಲ. ನಿರ್ಮಾಣ ಮಾಡಬೇಕೇ ಬೇಡವೇ ಎಂದು ಜನಾಭಿಪ್ರಾಯ ಸಂಗ್ರಹಿಸಿ ಎಂದು ಭರಿಪ ಬಹುಜನ ಮಹಾಸಂಘದ ಮುಖ್ಯಸ್ಥ ಪ್ರಕಾಶ್‌ ಅಂಬೇಡ್ಕರ್‌ ಹೇಳಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಕರೆ ನೀಡಲು ಆರೆಸ್ಸೆಸ್‌ ಆಗಲಿ, ಮೋಹನ್‌ ಭಾಗವತ್‌ ಆಗಲೀ ಯಾರು ಎಂದು ಅವರು ಕಿಡಿಕಾರಿದ್ದಾರೆ.

ಕಾನೂನು ತರುವ ಸಾಧ್ಯತೆ
ಕೋರ್ಟ್‌ ತೀರ್ಪುಗಳಿಗೆ ವಿರುದ್ಧ ಹಿಂದೆಯೂ ಕಾನೂನು ರೂಪಿಸಿರುವುದರಿಂದ ಕೇಂದ್ರ ಸರಕಾರ ರಾಮಮಂದಿರ ವಿಚಾರದಲ್ಲಿ ಅಧ್ಯಾದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ| ಮೂ| ಜೆ. ಚಲಮೇಶ್ವರ ಹೇಳಿದ್ದಾರೆ. ಈ ಹೇಳಿಕೆಯನ್ನು ಅವರು ನೀಡಿದ್ದು ಕಾಂಗ್ರೆಸ್‌ನ ಅಂಗಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಎಂಬುದು ಅಚ್ಚರಿ. ಮುಂಬಯಿಯಲ್ಲಿ ಆಲ್‌ ಇಂಡಿಯಾ ಪ್ರೊಫೆಶನಲ್ಸ್‌ ಕಾಂಗ್ರೆಸ್‌ ಸಂಸ್ಥೆ ನ್ಯಾ| ಚಲಮೇಶ್ವರ ಜತೆಗೆ ಸಂವಾದ ಏರ್ಪಡಿಸಿತ್ತು. ಸರಕಾರ ಈ ವಿಚಾರಕ್ಕೆ ಸಂಬಂಧಿಸಿ ಕಾನೂನು ರೂಪಿಸಬಹುದು. ಅದು ಹಾಗೆ ಮಾಡುತ್ತದೆಯೇ ಇಲ್ಲವೇ ಎಂಬುದು ಬೇರೆ ವಿಚಾರ. ಆದರೆ ಇದು ಸಾಧ್ಯವಿದೆ ಎಂದಷ್ಟೇ ಹೇಳಬಲ್ಲೆ. ಈ ಹಿಂದೆ ಕಾವೇರಿ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ಕರ್ನಾಟಕ ವಿಧಾನಸಭೆಯಲ್ಲಿ ಕಾನೂನು ರೂಪಿಸಲಾಗಿತ್ತು. ರಾಜಸ್ಥಾನ, ಪಂಜಾಬ್‌ ಹಾಗೂ ಹರಿಯಾಣಗಳಲ್ಲೂ ಜಲ ವಿವಾದಕ್ಕೆ ಸಂಬಂಧಿಸಿ ಕಾನೂನು ರೂಪಿಸಲಾಗಿತ್ತು ಎಂದಿದ್ದಾರೆ.

Advertisement

ಬಿಜೆಪಿಗೆ ಯಾವತ್ತೂ 
ರಾಮಮಂದಿರ ಚುನಾವಣೆ ವಿಷಯವಲ್ಲ, ಅದು ನಂಬಿಕೆ ಹಾಗೂ ಶ್ರದ್ಧೆಯ ವಿಷಯ. ಈ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಬೇಕೇ ಬೇಡವೇ ಎಂಬ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲಿ.
 ಪ್ರಕಾಶ್‌ ಜಾಬ್ಡೇಕರ್‌, ಕೇಂದ್ರ ಸಚಿವ

ಕೇಂದ್ರ ಸರಕಾರ ತನ್ನ ವೈಫ‌ಲ್ಯಗಳನ್ನು ಮುಚ್ಚಿಕೊಳ್ಳಲು ರಾಮಮಂದಿರ ವಿಷಯ ಪ್ರಸ್ತಾವಿಸುತ್ತಿದೆ ಹಾಗೂ ಪ್ರತಿಮೆಗಳನ್ನು ನಿರ್ಮಿಸುತ್ತಿದೆ. ಇದು ರೋಮನ್‌ ಕಾಲದ ಸ್ಥಿತಿಯನ್ನು ನಮಗೆ ನೆನಪಿಸುತ್ತದೆ. ಪ್ರತಿಮೆಗಳು ಕೇವಲ ಕಣ್ಣಿಗೆ ಮಣ್ಣೆರಚುವ ತಂತ್ರಗಳು. ಕಳೆದ ನಾಲ್ಕೂವರೆ ವರ್ಷಗಳಿಂದ ಜನರು ಸಂಕಷ್ಟ  ಅನುಭವಿಸುತ್ತಿದ್ದಾರೆ.
 ಶಶಿ ತರೂರ್‌, ಕಾಂಗ್ರೆಸ್‌ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next