ಹೊಸದಿಲ್ಲಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಫೆ.21ರಿಂದ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು ಎಂದು ಪರಮ ಧರ್ಮ ಸಂಸದ್ ಇಂದು ಬುಧವಾರ ಪ್ರಕಟಿಸಿದೆ.
‘ನಾವು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ; ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗೌರವಿಸುತ್ತೇವೆ; ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಕಾಲ ಈಗ ಕೂಡಿ ಬಂದಿದೆ’ ಎಂದು ಇಂದು ಬುಧವಾರ ಪ್ರಯಾಗ್ ರಾಜ್‌ನಲ್ಲಿ ಕುಂಭ ಮೇಳದ ಸಂದರ್ಭದಲ್ಲಿ ಭೇಟಿಯಾದ ಧಾರ್ಮಿಕ ಸಮೂಹ ಘೋಷಿಸಿದೆ.
‘ನಾವು ನಾಲ್ಕು ಶಿಲೆಗಳನ್ನು ಎತ್ತಿಕೊಂಡು ಅಯೋಧ್ಯೆಗೆ ಹೋಗುತ್ತೇವೆ’ ಎಂದು ಧಾರ್ಮಿಕ ಸಮೂಹದ ಸದಸ್ಯರು ಪ್ರಕಟಿಸಿದರು.
ಕೇಂದ್ರ ಸರಕಾರ ನಿನ್ನೆ ಮಂಗಳವಾರವಷ್ಟೇ ಸುಪ್ರೀಂ ಕೋರ್ಟ್ ಮೆಟ್ಟಲೇರಿ, ವಿವಾದಿತ ಅಯೋಧ್ಯಾ ತಾಣದ ಸುತ್ತಮುತ್ತಲಿನ ಅವಿವಾದಿತ 67 ಎಕರೆ ಖಾಲಿ ಭೂಮಿಯನ್ನು ಅದರ ಮೂಲ ಒಡೆತನ ಹೊಂದಿರುವ ರಾಮ ಜನ್ಮಭೂಮಿ ನ್ಯಾಸಕ್ಕೆ ಮರಳಿಸುವುದಕ್ಕೆ ಅನುಮತಿ ಕೋರಿತ್ತು.
1992ರಲ್ಲಿ ಬಾಬರಿ ಮಸೀದಿಯನ್ನು ಕೆಡಹಿದಾಗ ವಿವಾದಿತ 2.7 ಎಕರೆ ಭೂಮಿ ಸಹಿತ ಒಟ್ಟು 67 ಎಕರೆ ಖಾಲಿ ನಿವೇಶನವನ್ನು ಸರಕಾರ ಅಂದು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಅದರ ಉಸ್ತುವಾರಿಗಾಗಿ ರಾಮ ಜನ್ಮಭೂಮಿ ನ್ಯಾಸ್ ಎಂಬ ಪ್ರತಿಷ್ಠಾನವನ್ನು ರೂಪಿಸಲಾಗಿತ್ತು.