ನವದೆಹಲಿ/ಲಕ್ನೋ: ರಾಮಮಂದಿರ ನಿರ್ಮಾಣಕ್ಕಾಗಿ 2020ರಲ್ಲಿ ಜನವರಿಯ ಮಕರ ಸಂಕ್ರಮಣ ದಿನ ಶಿಲಾನ್ಯಾಸ ಕಾರ್ಯ ನೆರವೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಮೂರು ತಿಂಗಳೊಳಗೆ ಟ್ರಸ್ಟ್ ರಚಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಪ್ರಕಾರ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಿದೆ ಎಂದು ವಿವರಿಸಿದೆ.
2022ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ನಿರೀಕ್ಷಿತ ರೀತಿಯಲ್ಲಿ ಶೀಘ್ರವೇ ಮುಕ್ತಾಯಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.
ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರಾ ಅವರು ತಯಾರಿಸಿರುವ ವಿನ್ಯಾಸದ ಪ್ರಕಾರವೇ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದಂತೆ ಶೀಘ್ರವೇ ರಾಮಮಂದಿರ ಕಾರ್ಯವನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳಬೇಕು ಎಂದು ಭಾನುವಾರ ವಿಶ್ವಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ.
ದೇವಾಲಯಗಳ ಖ್ಯಾತ ವಾಸ್ತುಶಿಲ್ಪಿಯಾಗಿರುವ ಸೋಂಪುರಾ ಅವರಲ್ಲಿ ರಾಮಮಂದಿರದ ವಿನ್ಯಾಸ(ನಕ್ಷೆ) ತಯಾರಿಸಿಕೊಡುವಂತೆ 1989ರಲ್ಲಿ ವಿಎಚ್ ಪಿಯ ಮುಖ್ಯಸ್ಥರಾಗಿದ್ದ ಅಶೋಕ್ ಸಿಂಘಾಲ್ ಕೇಳಿಕೊಂಡಿದ್ದರು. ಅದೇ ಚಿತ್ರ ಇಂದು ಭಕ್ತರು ಸೇರಿದಂತೆ ದೇಶಾದ್ಯಂತ ಹರಿದಾಡುತ್ತಿದೆ.
ಈ ನಿಟ್ಟಿನಲ್ಲಿ ನೂತನವಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ಸೋಂಪುರಾ ಅವರ ವಿನ್ಯಾಸದಂತೆಯೇ ರಚನೆಯಾಗಬೇಕೆಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ವಿಎಚ್ ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿರುವುದಾಗಿ ವರದಿ ಹೇಳಿದೆ.