Advertisement

RAM; ಲೌಕಿಕ ಜನಮನದ ಅಧಿನಾಯಕ ಶ್ರೀರಾಮಚಂದ್ರ

11:55 PM Jan 03, 2024 | Team Udayavani |

ಶ್ರೀರಾಮನ ಆದರ್ಶಗಳನ್ನು ಪಾಲಿಸೋಣ ಎಂಬ ಶಬ್ದಪುಂಜ ಜಗದಗಲ ಭಾಷಣ, ಘೋಷಣೆ, ಪುರಾಣ ವಾಚನಗಳಲ್ಲಿ ಪುಟಿಯುತ್ತಿದೆ. ಈ ಕಾಲಘಟ್ಟದಲ್ಲಿ ಯುಗಯುಗಾಂತರಗಳಿಂದ ಘನೀಕೃತಗೊಂಡ ಅನುಕರಣೀಯ ಅರ್ಜಿಸಿಕೊಳ್ಳಬೇಕಾಗಿದೆ. ಹಿಂದೂ ಜನಮನ ಸಾಗರದಲ್ಲಿ ಅವಿಚ್ಛಿನ್ನವಾಗಿ ಸಹಸ್ರಾರು ವರ್ಷಗಳ ಪರಂಪರೆಯಲ್ಲಿ ಪ್ರಭು ಶ್ರೀರಾಮಚಂದ್ರ ಏಕಕಾಲದಲ್ಲಿ ಎರಡು ಭಾವತರಂಗಗಳಲ್ಲಿ ಅವಿರ್ಭವಿಸಿದ್ದಾನೆ. ಮಹಾವಿಷ್ಣುವಿನ ಏಳನೇ ಅವತಾರವೆನಿಸಿದ ಶ್ರೀರಾಮ ದೇವರಿಗೆ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ದೇಗುಲಗಳಲ್ಲಿ ಪೂಜೆ ನಡೆಯುತ್ತಿದೆ. ಇನ್ನೊಂದೆಡೆ, ಇಕ್ವಾಕ್ಷು ಕುಲ ಸಂಭೂತನಾಗಿ ದಶರಥ ಸುತನೆನಿಸಿ, ರಘುವಂಶ ಕುಲೋದ್ಭವನೆನಿಸಿ, ಆದರ್ಶದ ಖನಿ ಎನಿಸಿದ ಪ್ರಭು ಶ್ರೀರಾಮಚಂದ್ರ ಸಂಪೂಜ್ಯ ಎನಿಸಿದ್ದಾನೆ. ಇದೀಗ ವಿಶ್ವದ ಪ್ರಚಲಿತ ಇತಿಹಾಸದ ಅತ್ಯದ್ಭುತ ಎನಿಸುವ ತೆರದಲ್ಲಿ ಅಯೋಧ್ಯೆಯ ಪಾವನ ಜನ್ಮಭೂಮಿ ಯಲ್ಲಿ ವಿನೂತನ ಶ್ರೀರಾಮ ದೇಗುಲ ಭವ್ಯ ಎನ್ನುವ ಪದಕ್ಕೆ ಅನ್ವರ್ಥವೆನಿಸಿ ಶುಭಾರಂಭಗೊಳ್ಳುತ್ತಿದೆ; ನೂತನ ರಾಮ ಶಕೆಯ ಅಧ್ಯಾಯ ತೆರೆದುಕೊಳ್ಳುತ್ತಿದೆ.
ಈ ಶುಭ ಸಂದರ್ಭದಲ್ಲಿ ಆದರ್ಶ ಪುರುಷ ಶ್ರೀರಾಮ ಎನ್ನುವ ಅಂಕಿತದ ಒಳಪದರವನ್ನು ಯಥಾರ್ಥತೆಯ ತಳಹದಿಯಲ್ಲಿ ಶ್ರೀಸಾಮಾನ್ಯರ ಚಿತ್ತಭಿತ್ತಿ¤ಗೆ ಸಮೀಕರಿಸಿ ವಿಶದೀಕರಿಸಿಬಹುದಾಗಿದೆ. ವಾಲ್ಮೀಕಿ ಮಹರ್ಷಿಗಳ ಕುಂಚದಿಂದ ಚಿತ್ರಿಸಲ್ಪಟ್ಟ ಶ್ರೀರಾಮಚಂದ್ರನ ಮುತ್ತಿನಂತಹ ಆದರ್ಶಗಳನ್ನು ಆರಿಸಿ, ಈ ತೆರನಾಗಿ ಪೋಣಿಸಬಹು ದೆನಿಸುತ್ತದೆ.

Advertisement

1) ಮಾತೃಭೂಮಿಯ ಮೇಲಿನ ಅಪಾರ ಪ್ರೇಮ, ಗೌರವ:- ಸ್ವರ್ಣ ಲಂಕೆಯನ್ನು ಕೈವಶ ಮಾಡಿಕೊಂಡಾಗ ಅದರ ಬಗೆಗೆ ಕಿಂಚಿತ್ತೂ ವ್ಯಾಮೋಹಕ್ಕೆ ಒಳಗಾಗದೆ, ಮರಳಿ ಸ್ವರ್ಗ ಸಮಾನವಾದ ತಾಯ್ನೆಲ ಅಯೋಧ್ಯೆಗೆ ಮರಳಲು ಸಿದ್ಧನಾದ ಮನಃಸ್ಥಿತಿ ಸಾರ್ವಕಾಲಿಕವಾಗಿ ಮಾತೃಭೂಮಿಯ ಮೇಲ್ಮೆ„ಗೆ ಜ್ವಲಂತ ಸಾಕ್ಷಿ ಎನಿಸುತ್ತದೆ. ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶವಂ… ಎಂಬ ಆದಿಕವಿ ಪಂಪನ ನುಡಿಯ ನೆನಪಾಗುತ್ತದೆ.

2)ಪಿತೃವಾಕ್ಯ ಪರಿಪಾಲನೆ:- ತನಗೆ ನೇರನುಡಿ ನೀಡದಿದ್ದರೂ, ತಂದೆ ದಶರಥ ಮಹಾರಾಜ ತನ್ನ ಕಿರಿಯ ಮಡದಿಗೆ ಕೈಕೇಯಿಗೆ ನೀಡಿದ ವಚನ ಭಂಗವಾಗಬಾರದೆಂಬ, ಅಮೋಘ ಪಿತೃವಾಕ್ಯ ಪರಿಪಾಲನಾ ದೀಕ್ಷೆ ಶ್ರೀರಾಮನ ಔನ್ನತ್ಯಕ್ಕೊಂದು ಜ್ವಲಂತ ಸಾಕ್ಷಿ.

3)ತ್ಯಾಗ:- ಈ ನೆಲ ತ್ಯಾಗಭೂಮಿ; ಭೋಗಭೂಮಿಯಲ್ಲ, ಇದೇ ಭಾರತದ ಶ್ರೇಷ್ಠ ಪರಂಪರೆ ಎಂಬ ಸ್ವಾಮಿ ವಿವೇಕಾನಂದರ ನುಡಿ ಒಂದಿದೆ. ಆ ತ್ರೇತಾಯುಗದ ದಿನದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಸಂಭ್ರಮದ ಸೂರ್ಯೋದಯಕ್ಕೆ ಸಮಗ್ರ ಅಯೋಧ್ಯೆಯೇ ಕಾತರಿಸುತ್ತಿದ್ದಾಗಲೇ ಎಲ್ಲ ನಿಟ್ಟಿನಲ್ಲಿಯೂ ಹಿರಿತನ, ದೊರೆತನಕ್ಕೆ ಭಾಧ್ಯಸ್ಥ ಎನಿಸಿದರೂ, ಮರು ಮಾತಿರಿಸಿದೆ, ನಾರಿಮಡಿಯುಟ್ಟು ಅರಣ್ಯಕ್ಕೆ ತೆರಳುವ ಶ್ರೀರಾಮನ ಎತ್ತರ, ಬಿತ್ತರ ವರ್ಣನಾತೀತ.
4)ಭ್ರಾತೃ ಪ್ರೇಮ:- ರಾಮಾಯಣದಲ್ಲಿ ಎದ್ದು ತೋರುವ ಅನು ಭೂತಿ ಎಂದರೆ ಅಣ್ಣ ತಮ್ಮಂದಿರ ಮಧ್ಯೆ ರಾಜ್ಯಕ್ಕಾಗಿ ಪರಸ್ಪರ ಕಚ್ಚಾಟ, ಹಿಂಸೆ, ಪ್ರಾಣಕ್ಕೇ ಸಂಚಕಾರ ತಂದೊಡ್ಡುವಿಕೆಯೇ ಇಲ್ಲದಿರುವಿಕೆ ಬದಲಾಗಿ ಹಿರಿಯಣ್ಣನಿರದ ಅಯೋಧ್ಯೆಗೆ ಕಾಲಿರಿಸುವುದಿಲ್ಲ ಎಂದು ಕಂಬನಿ ಸುರಿಸಿದ ಭರತನಿಗೆ ಸಂತೈಸಿ ತನ್ನ ಪಾದುಕೆಯನ್ನು ನೀಡುವಿಕೆ ಅಗಾಧ ಭ್ರಾತೃ ಪ್ರೇಮದ ಕುರುಹು. ಅದೇ ರೀತಿ ತಮ್ಮ ಲಕ್ಷ್ಮಣನ ಸಾಂಗತ್ಯ ಪರಸ್ಪರ ಅಣ್ಣ   ತಮ್ಮಂದಿರ ಬಗೆಗೆ ಸಾರ್ವಕಾಲಿಕ ಆದರ್ಶ.

5) ಜಾತಿ ತಾರತಮ್ಯತೆಯ ಸೀಮೋಲ್ಲಂಘನೆ: ಭಕ್ತಿಯ ಕಡಲಲ್ಲಿ ಸದಾ ಮಿಂದು ಕಾನನದಲ್ಲಿ ಕಾಯುತ್ತಲೇ ಕುಳಿತು, ಕಳಿತ ಬುಗುರಿಯನ್ನೇ ತನ್ನ ಸ್ವಾಮಿಗೆ ಅರ್ಪಿಸಬೇಕೆಂದು, ಒಂದಿನಿತು ಕಚ್ಚಿ ಸ್ವಾದಿಷ್ಟತೆಯನ್ನು ಸವಿದ ಬಳಿಕವೇ ಬೇಡರ ಶಬರಿ ನೀಡಿದ ಫ‌ಲವನ್ನು ಸಂತಸದಿಂದ ಸ್ವೀಕರಿಸಿದ ಶ್ರೀರಾಮನ ಚಿತ್ತವೃತ್ತಿ ಅಮೋಘ. ಅದೇ ರೀತಿ ನದಿ ದಾಟಿಸಿದ ಅಂಬಿಗ ಗುಹನನ್ನು ಆದರದಿಂದ ಕಂಡ ರಾಮದೃಷ್ಟಿ ಅನಿರ್ವಚನೀಯ.

Advertisement

6)ಮಿತ ಸೇವೆಗೂ ಅಪರಿಮಿತ ಶ್ಲಾಘನೆ:- ಬಲಾಡ್ಯ ಕಪಿಗಳ ಮಧ್ಯೆ ನುಸುಳಿಕೊಂಡು ಮೈಗಂಟಿದ ಹಿಡಿ ಮರಳನ್ನು ರಾಮಸೇತುವೆ ನಿರ್ಮಾಣಕ್ಕೆಂದು ಮೈಕೊಡಹಿದ ಅಳಿಲ ಸೇವೆಯನ್ನೂ ಗುರುತಿಸುವ ಹೃದಯ ವೈಶಾಲ್ಯ ಅನುಕರಣೀಯ.

7) ಸಹಚರರಲ್ಲಿ ಅಗಾಧ ಪ್ರೀತಿ- ನಂಬಿಕೆ:- ಸೀತಾನ್ವೇಷಣೆಯ ಪಣ ತೊಟ್ಟು ಶ್ರೀರಾಮ ಭಕ್ತಿಯಲ್ಲೇ ಅಪರಿಮಿತ ಶಕ್ತಿ, ತೇಜವನ್ನು ಅರಳಿಸಿ ಸ್ವಾಮಿ ನಿಷ್ಠೆ ತೋರಿದ ವೀರಾಂಜನೇಯನ ಹೃದಯದಲ್ಲೇ ನೆಲೆಸಿದ ಪ್ರಭು ಶ್ರೀರಾಮಚಂದ್ರನ ನಂಬಿಕೆ, ಪ್ರೀತಿ ಕಡಲಿಗಿಂತ ಹಿರಿದು. ಅದೇ ರೀತಿ ತನಗಾಗಿ ಪ್ರಾಣ ಪಕ್ಷಿಯನ್ನೇ ಅರ್ಪಿಸಿದ ಜಟಾಯುವಿನಲ್ಲಿ ತೋರಿದ ಕರುಣೆ, ಉಪ ಕಾರ ಸ್ಮರಣೆ ಶ್ರೀರಾಮನ ಮೇರು ಜೀವನದ ಜ್ವಲಂತ ಶಿಖರಗಳು.

8)ಏಕಪತ್ನಿವ್ರತಸ್ಥ: ಶ್ರೀರಾಮ ಚರಿತೆಯಲ್ಲಿ ಸೀತಾಮಾತೆಯ ಜೀವನ, ಸಾಂಗತ್ಯ ಹಾಸುಹೊಕ್ಕಾಗಿ ತುಂಬಿಕೊಳ್ಳುತ್ತದೆ. ಪರಸ್ಪರ ದಾಂಪತ್ಯದಲ್ಲಿ ಸೀತಾರಾಮತ್ವದ ಸತ್ವ ಹಾಗೂ ಸತ್ಯವನ್ನು ಪ್ರಚುರಗೊಳಿಸಿದುದು ಸ್ತುತ್ಯಾರ್ಹ.

9). ಶೌರ್ಯ-ಸ್ಥೈರ್ಯ:- ದಶಕಂಠ, ಕುಂಭಕರ್ಣಾದಿಗಳ ಸಂಹಾರ ಕಾಲ ಶ್ರೀರಾಮ ಧನುಸ್ಸಿನ ಠೇಂಕಾರಕ್ಕೆ ಇಡೀ ಲಂಕೆಯೇ ತಲ್ಲಣ ಗೊಳ್ಳುವ ವರ್ಣನೆ ಒದಗಿ ಬರುತ್ತದೆ. ಅಪಾರ ಶೌರ್ಯ ಅದೇ ರೀತಿ ವ್ಯವಧಾನವೂ ಮೇಳೈಸಿದ ಆಜಾನುಬಾಹು ಶ್ರೀರಾಮಚಂದ್ರನ ಕ್ಷಾತ್ರತೇಜದ ವರ್ಣನೆ ತುಂಬಿ ನಿಲ್ಲುತ್ತದೆ.

10) ರಾಮರಾಜ್ಯ:– ಮಹಾತ್ಮಾ ಗಾಂಧೀಜಿಯ ಸ್ವರಾಜ್ಯ ಕಲ್ಪನೆ ಯಲ್ಲಿ ರಾಮರಾಜ್ಯದ ಅರ್ಥಾತ್‌ ಸುಖೀರಾಜ್ಯ. ಕಲ್ಯಾಣ ರಾಜ್ಯದ ಪರಿಕಲ್ಪನೆ ಹಾಸು ಹೊಕ್ಕಾಗಿ ನಿಂತಿದೆ. ಪ್ರಜಾಭ್ಯುದಯ, ಪ್ರಜಾರಂಜನೆ – ಹೀಗೆ ಜನಮನದ ಆಶಯವೇ ರಾಜಧರ್ಮದ ಹೆಗ್ಗುರುತು ಎಂಬು ದನ್ನು ಜಗಜ್ಜಾಹೀರುಗೊಳಿಸಿದ ಶ್ರೀರಾಮಾಡಳಿತ, ಸಾರ್ವಕಾಲಿಕ ಜನತಂತ್ರೀಯ ಮೌಲ್ಯಗಳದೇ ನೇರ ಪ್ರತಿಫ‌ಲನದಂತಿದೆ.

ಸುಭಿಕ್ಷೆ, ಸುಶಾಸನ, ಪ್ರಜಾಭ್ಯುದಯ, ಧರ್ಮ ಪರಿಪಾಲನೆ ಹಾಗೂ ನ್ಯಾಯ ಈ ಪಂಚತಣ್ತೀಗಳ ಶ್ವೇತ ಛತ್ರದಡಿಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಸಾರ್ಥಕ್ಯ ಪಡೆಯಿತು. ಮಾತ್ರವಲ್ಲ, ಮಾತೃಪ್ರೇಮ, ಗುರುಭಕ್ತಿ ತ್ರೇತಾಯುಗದ ಕಾಲಘಟ್ಟ ದಾಟಿ, ದ್ವಾಪರಯುಗದಲ್ಲಿ ಕಾಲಚಕ್ರ ಹರಿದು ಬಂದು ಸನಾತನ ಹಿಂದೂ ಚೇತನದ ಕಲಿಯುಗದ ಪ್ರಥಮ ಪಾದದಲ್ಲಿಯೂ ರಾಮರಾಜ್ಯದ ಕನಸು ಮತ್ತೆ ಟಿಸಿಲೊಡೆಯುತಿದೆ. ಈ ಶುಭಕಾಲದಲ್ಲಿ ಶುಭದೊಸಗೆ ತುಂಬಿ ಬರಲಿ ಎಂದು ಶುಭ ಹಾರೈಸೋಣ.

ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next