ಚಂಢೀಗಢ: ವಿವಾದಿತ ಧರ್ಮಗುರು ಮತ್ತು ಡೇರಾ ಸಚ್ಛಾ ಸೌಧಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಅವರ ಬಂಧನದ ಬಳಿಕ ಪಂಚಕುಲಾದಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಮ್ ರಹೀಂ ಸಿಂಗ್ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಗೆ ಇಲ್ಲಿನ ನ್ಯಾಯಾಲವು ಜಾಮೀನು ಮಂಜೂರು ಮಾಡಿದೆ.
ಹನಿಪ್ರೀತ್ ಅವರ ವಿಚಾರಣೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಿತು ಹಾಗೂ ಈ ಪ್ರಕರಣದ ಇನ್ನಿತರ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತನ್ನ ಮುಂದಿನ ವಿಚಾರಣೆಯನ್ನು ನವಂಬರ್ 20ರಂದು ನಡೆಸಲಿದೆ.
ಅತ್ಯಾಚಾರ ಪ್ರಕರಣ ಸಾಬೀತುಗೊಂಡ ಹಿನ್ನಲೆಯಲ್ಲಿ ಡೇರಾ ಸಚ್ಛಾ ಸೌಧ ಮುಖ್ಯಸ್ಥ ರಾಮ್ ರಹೀಂ ಸಿಂಗ್ ನನ್ನು ಪೊಲೀಸರು ಬಂಧಿಸಿದ ಬಳಿಕ ಪಂಚಕುಲಾದಲ್ಲಿ 2017ರ ಆಗಸ್ಟ್ 28ರಂದು ಸಂಭವಿಸಿದ್ದ ಹಿಂಸಾಚಾರದಲ್ಲಿ 30 ಜನ ಅಸುನೀಗಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.
ನವಂಬರ್ 02ರಂದು ನ್ಯಾಯಾಲಯವು ಹನಿಪ್ರೀತ್ ಮತ್ತು ಇತರೇ 35 ಆರೋಪಿಗಳ ವಿರುದ್ಧದ ಗಂಬೀರ ಶಾಂತಿಭಂಗ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಪ್ರೀತ್ ಮತ್ತು ಇತರೇ ಡೇರಾ ಸೌಧದ ಅನುಯಾಯಿಗಳ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಜಯ್ ಸಂಧೀರ್ ಅವರಿಂದ ಪ್ರಕರಣ ದಾಖಲುಗೊಂಡಿದೆ.
ರಾಮ್ ರಹೀಂ ಪೊಲೀಸ್ ವಶವಾದ ನಂತರ ಪಂಚಕುಲಾದಲ್ಲಿ ಹಿಂಸಾಚಾರ ನಡೆಸಲು ಹನಿಪ್ರೀತ್ ಮತ್ತು ಇತರೇ ಡೇರಾ ಅನುಯಾಯಿಗಳು ಸಂಚೊಂದನ್ನು ರೂಪಿಸಿದ್ದರು ಎಂಬ ಆರೋಪದಡಿಯಲ್ಲಿ ಪಂಚಕುಲಾ ಪೊಲೀಸರು ಇವರೆಲ್ಲರ ಮೇಲೆ ಶಾಂತಿ ಭಂಗ ಮತ್ತು ಕ್ರಿಮಿನಲ್ ಸಂಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.