Advertisement

ಡೇರಾ ಬಾಬಾ ಅರೆಸ್ಟ್, ಭುಗಿಲೆದ್ದ ಹಿಂಸಾಚಾರ; ಸಾವಿನ ಸಂಖ್ಯೆ 32ಕ್ಕೆ

05:56 PM Aug 25, 2017 | Sharanya Alva |

ಸಿರ್ಸಾ: ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು  ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದ ಪರಿಣಾಮ 30ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್, ದೆಹಲಿ, ರಾಜಸ್ಥಾನಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 28ರಂದು ರಾಮ್ ರಹೀಂ ಸಿಂಗ್ ಗೆ ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. 

ಮುನ್ನೆಚ್ಚರಿಕೆಯ ಅಂಗವಾಗಿ ವಿಶೇಷ ಸಿಬಿಐ ನ್ಯಾಯಾಲಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೂಡಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅರೆಸೇನಾಪಡೆ, ಪೊಲೀಸ್ ಪಡೆಯನ್ನೂ ನಿಯೋಜಿಸಲಾಗಿತ್ತು. ಆದರೆ ಕೋರ್ಟ್ ತೀರ್ಪು ಪ್ರಕಟಿಸಿದ ಕೂಡಲೇ ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದಿತು. ತದನಂತರ ಪಂಚಕುಲ, ಬಟಿಂಡಾ, ಫಿರೋಜ್ ಪುರ್ ಮತ್ತು ಮಾನ್ಸಾದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ರೊಚ್ಚಿಗೆದ್ದ ಬೆಂಬಲಿಗರು ಬೆಂಕಿಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿಗೊಳಿಸತೊಡಗಿದ್ದಾರೆ. ಸಿಂಗ್ ಅನುಯಾಯಿಗಳು ಪೊಲೀಸರ ನಡುವೆ ಘರ್ಷಣೆ ಮುಂದುವರಿದಿದೆ. ಘಟನೆಯಲ್ಲಿ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾರು ಮತ್ತು ಅಗ್ನಿಶಾಮಕ ವಾಹನಕ್ಕೆ ಬೆಂಕಿಹಚ್ಚಲಾಗಿದೆ. ಪೊಲೀಸರು ಜಲಫಿರಂಗಿ ಬಳಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next