ಚಂಡೀಗಢ : ಹದಿನೈದು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಹತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ “ಜೈಲಿನಲ್ಲಿ ನನಗೆ ನೆರವಾಗಲು ದತ್ತು ಪುತ್ರಿ ಹನಿಪ್ರೀತ್ ಗೆ ನನ್ನೊಂದಿಗೆ ಇರಲು ಅನುಮತಿ ನೀಡಬೇಕು’ ಎಂದು ಮಾಡಿಕೊಂಡಿದ್ದ ಮನವಿಯನ್ನು ಸಿಬಿಐ ಕೋರ್ಟ್ ತಿರಸ್ಕರಿಸಿದೆ.
ಹನಿಪ್ರೀತ್ ಕೂಡ ತನ್ನ ವಕೀಲರ ಮೂಲಕ “ನನಗೆ ನನ್ನ ತಂದೆಯೊಂದಿಗೆ ಜೈಲಿನಲ್ಲಿರಲು ಅನುಮತಿ ನೀಡಬೇಕು’ ಎಂದು ಕೋರಿ ಮನವಿ ಸಲ್ಲಿಸಿದ್ದಳು. ಆ ಮನವಿಯನ್ನು ಕೂಡ ಕೋರ್ಟ್ ತಿರಸ್ಕರಿಸಿದೆ. 2009ರಲ್ಲಿ ಡೇರಾ ಮುಖ್ಯಸ್ಥ ಹನಿಪ್ರೀತ್ ಳನ್ನು ದತ್ತು ಸ್ವೀಕರಿಸಿದ್ದ .
“ಈ ರೀತಿಯ ಮನವಿಯನ್ನು ನ್ಯಾಯಾಲಯ ಪುರಸ್ಕರಿಸುವಂತಿಲ್ಲ; ಸರಕಾರ ಅಥವಾ ಬಂಧಿಖಾನೆ ಆಡಳಿತೆಯು ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ’ ಎಂದು ಕೋರ್ಟ್ ಹೇಳಿತು.
ಹಾಗಿದ್ದರೂ ಹನಿಪ್ರೀತ್ ಮತ್ತು ಸ್ವತಃ ಗುರ್ಮೀತ್ , “ಜೈಲಿನಲ್ಲಿ ತಮಗೆ ಜತೆಯಾಗಿರುವುದಕ್ಕೆ ನ್ಯಾಯಾಲಯ ಅನುಮತಿ ನೀಡಿದೆ’ ಎಂದು ಜೈಲು ಅಧಿಕಾರಿಗಳಲ್ಲಿ ಸುಳ್ಳು ಹೇಳಿದ್ದರು.
ಕೈದಿಯ ಜತೆಗೆ ಮಹಿಳೆ ಇರಲು ಬಂಧೀಖಾನೆಯ ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಜೈಲು ಅಧಿಕಾರಿಗಳು ಖಂಡತುಂಡವಾಗಿ ಹೇಳಿದಾಗ, ಡೇರಾ ಮುಖ್ಯಸ್ಥ, “ನನ್ನ ಆದೇಶವನ್ನು ನೀವು ಪಾಲಿಸದಿದ್ದರೆ ನಾನು ನಿಮ್ಮನ್ನು ಸಸ್ಪೆಂಡ್ ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ ! ಸ್ಥಳದಿಂದ ಹೊರಡುವ ಮುನ್ನ ಹನಿಪ್ರೀತ್ ದಿಲ್ಲಿ ಮತ್ತು ಚಂಡೀಗಢಕ್ಕೆ ಕೆಲವು ಫೋನ್ ಕರೆಗಳನ್ನು ಮಾಡಿದಳಾದರೂ ಪ್ರಯೋಜನವಾಗಲಿಲ್ಲ.
ಗುರ್ಮೀತ್ ಗೆ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ಸಿಬಿಐ ನ್ಯಾಯಾಧೀಶರು ಪ್ರಕಟಿಸಿದ ಬಳಿಕ ಸೇನಾ ಹೆಲಿಕಾಪ್ಟರ್‌ನಲ್ಲಿ ಆತನ ಜತೆಗೆ ಹೋದಾಕೆ ಯಾರು ಎಂಬುದು ಅನೇಕರಿಗೆ ಯಕ್ಷ ಪ್ರಶ್ನೆಯಾಗಿತ್ತು. ಆಕೆ ಗುರ್‌ಮೀತ್ ರಾಮ್ ರಹೀಮ್ 2009ರಲ್ಲಿ ದತ್ತು ಪಡೆದ ಪುತ್ರಿ ಹನಿಪ್ರೀತ್ ಎಂದು ಅನಂತರ ಎಲ್ಲರಿಗೂ ಗೊತ್ತಾಯಿತು.
ಅಂದ ಹಾಗೆ ಡೇರಾ ಮುಖ್ಯಸ್ಥ ಗುರ್ಮೀತ್ ಗೆ ಮೈಗ್ರೇನ್ ಕಾಯಿದೆ ಇದೆ; ತೀವ್ರವಾದ ಬೆನ್ನ ನೋವಿದೆ; ಎಲ್ಲ ಬಗೆಯ ಕಾಯಿಲೆಗಳನ್ನು ಹೆಚ್ಚಿಸಬಲ್ಲ ಡಯಾಬಿಟೀಸ್ ಬೇರೆ ಇದೆ. ಹಾಗಾಗಿ “ನನಗೆ ಜೈಲಿನಲ್ಲಿ ನೆರವಾಗಲು ನನ್ನ ಮುದ್ದಿನ ಮಗಳು ಹನಿಪ್ರೀತ್ ಗೆ ನನ್ನೊಂದಿಗಿರಲು ಅನುಮತಿ ನೀಡಬೇಕು’ ಎಂದು ರಾಮ್ ರಹೀಮ್ ಕೋರಿದ್ದ. ಆದರೆ ಆ ಕೋರಿಕೆ ಫಲಕಾರಿಯಾಗಲಿಲ್ಲ.