ರಾಮನಗರ: ಜಿಲ್ಲಾದ್ಯಂತ ಶ್ರೀ ರಾಮ ನವಮಿಯನ್ನು ಶ್ರದ್ಧಾಭಕ್ತಿಯೊಂದಿಗೆ
ಸಂಭ್ರಮದಿಂದ ಆಚರಣೆ ಮಾಡಲಾಯಿತು.
ರಾಮನಗರದ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇಗುಲ, ಶ್ರೀರಾಮಗಿರಿ ಬೆಟ್ಟದ ಮೇಲಿರುವ ಶ್ರೀರಾಮ ದೇಗುಲ, ಬಿಡದಿಯ ಶ್ರೀರಾಮ ಮಂದಿರ, ಮಂಚನಾಯ್ಕನಹಳ್ಳಿ ಬಳಿಯ ಶ್ರೀಕೋತಿ ಆಂಜನೇಯ ಸ್ವಾಮಿ ದೇವಾಲಯ, ಚನ್ನಪಟ್ಟಣ ಪಟ್ಟಣದ ಶ್ರೀಕೋಂದಂಡರಾಮ ಸ್ವಾಮಿ ದೇವಾಲಯ, ಎಲೆಕೇರಿ ರಾಮ ಮಂದಿರ, ದೊಡ್ಡ ಮಳೂರು ಅಪ್ರಮೇಯಸ್ವಾಮಿ ದೇವಾಲಯ, ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, ಕನಕಪುರದ ಕೋದಂಡ ರಾಮ ದೇವಾಲಯ, ಕಿಲ್ಲೆ ರಂಗನಾಥ ಸ್ವಾಮಿ ದೇವಾಲಯ, ಹಾರೋಹಳ್ಳಿ, ಸಾತನೂರುಗಳಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಗಳು, ಮಾಗಡಿ ಪಟ್ಟಣದ ಶ್ರೀರಾಮ ಮಂದಿರ, ಕಲ್ಲೂರು ಆಂಜನೇಯ ಸ್ವಾಮಿ ದೇವಾಲಯ, ಸೋಲೂರು, ಕುದೂರು, ತಿಪ್ಪಸಂದ್ರ ಗ್ರಾಮಗಳಲ್ಲಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ, ಮೆರವಣಿಗೆ, ಪ್ರಸಾದ
ವಿತರಣೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ರಾಮ, ಸೀತಾ, ಲಕ್ಷ್ಮಣರ ದರ್ಶನ: ರಾಮನಗರದಲ್ಲಿ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರು ಶ್ರೀ ರಾಮ, ಸೀತಾ, ಲಕ್ಷ್ಮಣರ ದರ್ಶನ ಪಡೆದುಕೊಂಡರು. ಸನಿಹದಲ್ಲೇ ಇರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದ ಭಕ್ತರು ಶ್ರೀರಾಮನ ಬಂಟ ಹನುಮಂತನಿಗೂ ತಮ್ಮ ಭಕ್ತಿ ಸಮರ್ಪಿಸಿಕೊಂಡರು.
ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಶ್ರೀ ಆಂಜನೇಸ್ವಾಮಿ ದೇವಾಲಯಗಳು, ವಿಷ್ಣು ದೇವಾಲಯಗಳಿದ್ದು, ಅಲ್ಲೆಲ್ಲ ಶ್ರೀ ರಾಮ ನವಮಿಯನ್ನು ಅತ್ಯಂತ ಭಕ್ತಿಯಿಂದ ಆಚರಿಸಲಾಯಿಸತು. ರಾಮ ನವಮಿ ಆಚರಣೆಯಲ್ಲಿ ವಿಶೇಷವಾಗಿಕೋಸಂಬರಿ, ರಸಾಯನ, ಪಾನಕ ಮತ್ತುನೀರು ಮಜ್ಜಿಗೆ ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು. ಎಲ್ಲಾ ದೇವಾಲಯಗಳಲ್ಲೂ ಭಕ್ತರ ತಂಡಗಳು, ಸ್ವಯಂ ಸೇವಾ ಸಂಘಟನೆಗಳು ಅರವಟ್ಟಿಗೆಗಳನ್ನು ಸ್ಥಾಪಿಸಿದ್ದರು. ನೀರು ಮಜ್ಜಿಗೆ, ಪಾನಕ ಭಕ್ತರ ಬಾಯಾರಿಕೆಯನ್ನು ತಣಿಸಿತು. ಶ್ರೀರಾಮ ನವಮಿಯ ಅಂಗವಾಗಿ ಭಕ್ತರ ತಂಡಗಳು ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾಮನಗರದಲ್ಲಿ ಶ್ರೀರಾಮ ಸಂಗೀತೋತ್ಸವ ನಡೆಯಿತು