Advertisement

ರಾಷ್ಟ್ರಪತಿ ಭವನಕ್ಕೆ ಕೋವಿಂದ್‌: 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ

04:30 AM Jul 26, 2017 | Karthik A |

ಹೊಸದಿಲ್ಲಿ/ಕೋಲ್ಕತಾ: ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ ಎಂದು ಹೇಳಿರುವ ನೂತನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ದುರ್ಬಲ ವರ್ಗದವರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದಿದ್ದಾರೆ. ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

Advertisement

ಉನ್ನತ ಹುದ್ದೆಯನ್ನು ಅತ್ಯಂತ ವಿನೀತಭಾವದಿಂದ ಸ್ವೀಕರಿಸುವುದಾಗಿ ಹೇಳಿದ ನೂತನ ರಾಷ್ಟ್ರಪತಿ ದೇಶ ಸಾಧಿಸಿದ ಆರ್ಥಿಕ ಬೆಳವಣಿಗೆ ನಿಜಕ್ಕೂ ಉತ್ತಮ ಸಾಧನೆಯಾಗಿದೆ ಎಂದು ಬಣ್ಣಿಸಿದರು. ಏಕತೆ ಎನ್ನುವುದು ದೇಶದ ವೈವಿಧ್ಯತೆಯ  ಪ್ರತೀಕ ಎಂದು ಅವರು ಬಣ್ಣಿಸಿದರು. ವಿವಿಧತೆಯಲ್ಲಿನ ಏಕತೆ ಎನ್ನುವುದೇ ನಮ್ಮ ಶಕ್ತಿಯ ದ್ಯೋತಕ ಎಂದು ಕೊಂಡಾಡಿದರು.

ಎಲ್ಲರ ಪಾತ್ರವೂ ಇದೆ: ಕೇವಲ ಸರಕಾರಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಕೋವಿಂದ್‌ ಹೇಳಿದ್ದಾರೆ. ರಾಷ್ಟ್ರ ನಿರ್ಮಾಣವೆಂದರೆ ಅದೊಂದು ಹೆಮ್ಮೆ ಎಂದು ಪ್ರತಿಪಾದಿಸಿದ್ದಾರೆ. ‘ರೈತರು, ವೈದ್ಯರು, ದಾದಿಯರು, ಅಧ್ಯಾಪಕರು, ಸೇನಾಪಡೆಗಳು, ಉದ್ಯೋಗಿಗಳು, ಬುಡಕಟ್ಟು ವರ್ಗದವರು, ಮಹಿಳೆಯರು, ಸಾಮಾನ್ಯ ಜನರು ಕೂಡ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ‘ಸ್ಟಾರ್ಟ್‌ ಅಪ್‌ ಮೂಲಕ ಉದ್ಯೋಗ ನೀಡಲು ಆರಂಭಿಸಿದ ಯುವ ಉದ್ಯಮಿ ಕೂಡ ದೇಶ ಕಟ್ಟುವಿಕೆಯಲ್ಲಿ ತೊಡಗಿಸುತ್ತಾನೆ’ ಎಂದರು ನೂತನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌. ‘ವಿವಿಧ ರಾಜ್ಯಗಳು, ಪ್ರದೇಶಗಳು, ಭಾಷೆಗಳು, ಸಂಸ್ಕೃತಿ ಗಳು, ಜೀವನ ಕ್ರಮವೇ ಭಾರತ. ನಾವು ವಿವಿಧತೆಯನ್ನು ಹೊಂದಿದ್ದರೂ ಏಕತೆಯನ್ನು ಹೊಂದಿದ್ದೇವೆ’ ಎಂದರು ನೂತನ ರಾಷ್ಟ್ರಪತಿ. ರಾಷ್ಟ್ರವಾಗಿ ದೇಶ ಹಲವು ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿ ಪ್ರಶಂಸನೀಯವಾದದ್ದು. ಆದರೂ ಹಲವು ಕ್ಷೇತ್ರಗಳಲ್ಲಿ ಸಾಧಿಸಬೇಕಾಗಿರುವುದು ಇನ್ನೂ ಇದೆ. ಅದಕ್ಕಾಗಿ ಮತ್ತಷ್ಟು ಶ್ರಮಪಡಬೇಕು’ ಎಂದರು.

ವಸುದೈವ ಕುಟುಂಬಕಂ: ಸಾಧನೆ ಎನ್ನುವುದು ನಮಗಾಗಿ ಮಾತ್ರವಲ್ಲ. ಭಾರತವು ಯುಗಯುಗಗಳಿಂದಲೂ ವಸುದೈವ ಕುಟುಂಬಕಂ (ವಿಶ್ವವೇ ಒಂದು ಕುಟುಂಬ) ಎಂಬ ನಿಯಮ ಪಾಲಿಸುತ್ತಾ ಬಂದಿದೆ. ಬುದ್ಧ ಜನಿಸಿರುವ ನಾಡಾಗಿರುವ ಭಾರತ ವಿಶ್ವದ ಇತರ ಭಾಗಗಳಿಗೆ ಶಾಂತಿ ಮತ್ತು ನೆಮ್ಮದಿ, ಸಮಾನತೆ ಪಸರಿಸುವ ಸ್ಥಳವಾಗಬೇಕು ಎಂದರು. ದೀನ್‌ದಯಾಳ್‌ ಉಪಾಧ್ಯಾಯ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪ್ರತಿಪಾದಿಸಿದಂತೆ ಉತ್ತಮ ಅರ್ಥವ್ಯವಸ್ಥೆ ಹೊಂದಿರುವ ದೇಶ ನಮ್ಮದಾಗಬೇಕು. ಅದಕ್ಕಾಗಿ ಉತ್ತಮ ವಿದ್ಯಾಭ್ಯಾಸ ಹೊಂದಿರುವ ಮತ್ತು ಸಭ್ಯರಿರುವ ದೇಶವೂ ಆಗಬೇಕು ಎಂದರು ಕೋವಿಂದ್‌.

2022ರ ವೇಳೆ ದೇಶ 75ನೇ ಸ್ವಾತಂತ್ರ್ಯ ದಿನ ಆಚರಿಸುವ ಸಂದರ್ಭಕ್ಕೆ ಸರಿಯಾಗಿ ಇನ್ನೂ ಹೆಚ್ಚಿನ ಸಾಧನೆ ಅಗತ್ಯ ಎಂದು ನೆನಪಿಸಿದರು ಕೋವಿಂದ್‌. ‘ದೇಶದ ತುಳಿತಕ್ಕೆ ಒಳಗಾಗಿರುವ ಮತ್ತು ದುರ್ಬಲ ವರ್ಗದ ಕುಟುಂಬದ ವ್ಯಕ್ತಿ ಮತ್ತು ಕೊನೆಯ ಗ್ರಾಮದಲ್ಲಿರುವ ಹೆಣ್ಣು ಮಗುವಿಗೆ ಸರಿಯಾದ ರೀತಿಯಲ್ಲಿ ಬೆಳವಣಿಗೆಯ ಅವಕಾಶ ಸಿಗುವಂತಾಗಬೇಕು. ಅವರಿಗಾಗಿ ಕ್ಷಿಪ್ರಗತಿಯಲ್ಲಿ ನ್ಯಾಯ ಸಿಗುವಂಥ ವ್ಯವಸ್ಥೆ ಜಾರಿಯಾಗಬೇಕು’. ‘ನಮ್ಮ ಕನಸುಗಳನ್ನು ಹೊಂದಿರುವ ಭಾರತ ನಮ್ಮದಾಗಿರಬೇಕು. ಅದರಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು. ಇದುವೇ 21ನೇ ಶತಮಾನದ ಭಾರತವಾಗಬೇಕು’ ಎಂದರು. ಹಿಂದಿನ ರಾಷ್ಟ್ರಪತಿಗಳ ಕೊಡುಗೆಯನ್ನು ಅವರು ಸ್ಮರಿಸಿದರು. 

Advertisement

ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರ ನಿರ್ಮಾತೃ. ಯೋಧರು ಗಡಿ ರಕ್ಷಿಸಿದರೆ, ಪೊಲೀಸರು ದೇಶ ಕಾಯುತ್ತಾರೆ. ಸಾಮಾನ್ಯ ಮಹಿಳೆಯೊಬ್ಬಳು ಮನೆ ಹಾಗೂ ಉದ್ಯೋಗ ನಿರ್ವಹಣೆಯ ನಡುವೆಯೂ ಮಕ್ಕಳನ್ನು ಮುಂದಿನ ಪ್ರಜೆಗಳನ್ನಾಗಿ ಪೋಷಿಸಿ ದೇಶ ಪೊರೆಯುತ್ತಾಳೆ.
– ರಾಮನಾಥ್‌ ಕೋವಿಂದ್‌, ರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next