ಚಾಮರಾಜನಗರ: ಅಯೋಧ್ಯೆಯಲ್ಲಿ ಬಾಲ ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸ ಲಾಯಿತು. ರಾಮಮಂದಿರಗಳಲ್ಲಿ ನವಗ್ರಹ ಹೋಮ, ರಾಮ ತಾರಕ ಹೋಮ ನಡೆಯಿತು.
ವಿವಿಧೆಡೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನಗರದ ಚಾಮರಾಜೇಶ್ವರ ದೇವಾಲಯದ ಮುಂದೆ ದೊಡ್ಡದಾದ ಶ್ರೀರಾಮ ಚಂದ್ರನ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು ದೇವಾಲಯದಲ್ಲಿ ವಿಶೇಷ ಪೂಜಾದಿಗಳನ್ನು ನೆರವೇರಿಸಲಾಯಿತು. ಹಾಗೆಯೇ ವೀರಭದ್ರೇಶ್ವರ, ಭುಜಂಗೇಶ್ವರ, ಕಾಳಿಕಾಂಬಾ, ಹರಳುಕೋಟೆ ಆಂಜನೇಯ, ಜನಾರ್ದನಸ್ವಾಮಿ ಮತ್ತಿತರ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆರವೇರಿದವು.
ಪ್ರಸಾದ ವಿನಿಯೋಗ: ನಗರದ ಅಗ್ರಹಾರ ಬೀದಿಯಲ್ಲಿರುವ ಪಟ್ಟಾಭಿರಾಮಮಂದಿರದಲ್ಲಿ ಗಣಪತಿ, ಗಾಯತ್ರಿ, ರಾಮನಿಗೆ ಫಲಪಂಚಾಮೃತ ಅಭಿಷೇಕ ಗಣಪತಿ, ಹೋಮ, ನವಗ್ರಹ ಹೋಮ, ರಾಮತಾರಕ ಹೋಮ ಹಾಗೂ ಪವಮಾನ ಹೋಮವನ್ನು ನಡೆಸಲಾಯಿತು. ರಾಮತಾರಕ ಮಂತ್ರ ಪಠಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ಪಟ್ಟಾಭಿ ರಾಮಚಂದ್ರಸ್ವಾಮಿಗೆ ಮಹಾಭಿಷೇಕ: ನಗರದ ಶಂಕರಪುರ ರಾಮಮಂದಿರದಲ್ಲಿ ಚಂದ್ರ ಶೇಖರ ಭಾರತಿ ಟ್ರಸ್ಟ್ ವತಿಯಿಂದ ಸಂಕಲ್ಪ, ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರ ನಾಮ ಪಾರಾಯಣ, ಪಟ್ಟಾಭಿ ರಾಮಚಂದ್ರಸ್ವಾಮಿಗೆ ಮಹಾಭಿಷೇಕ, ಶ್ರೀರಾಮ ತಾರಕ ಮಹಾಮಂತ್ರ ಜಪ ಸಾಂಗತಾ ಯಜ್ಞ, ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿ ನಡೆಸಲಾಯಿತು.
ಉತ್ಸವ ಮೂರ್ತಿ ಮೆರವಣಿಗೆ: ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ವಾದಿ ರಾಜನಗರದಲ್ಲಿರುವ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುರಾಘವೇಂದ್ರ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಚಾಮರಾಜೇಶ್ವರ ದೇವಾಲಯದ ಆವರಣ ದಲ್ಲಿ ಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಸಂಬಂಧಿಸಿದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. 150ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆ ಯಲ್ಲಿ ಭಾಗವಹಿಸಿ ಚಿತ್ರಗಳನ್ನು ಬಿಡಿಸಿದರು.
ನಗರದ ಚಾಮರಾಜೇಶ್ವರ ದೇವಾಲಯ, ಶಂಕರಪುರ ರಾಮಮಂದಿರ ಮತ್ತಿತರ ಸ್ಥಳಗಳಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನೇರಪ್ರಸಾರ ವೀಕ್ಷಿಸಲು ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ನಗರದ ರಾಮಶೇಷ ಪಾಠಶಾಲೆ, ಪರಿ ಮಳ ರಾಮವಿದ್ಯಾ ಮಂದಿರದಲ್ಲಿ ಸೋಮವಾರ ಸಂಜೆ ದೀಪೋತ್ಸವ ಕಾರ್ಯಕ್ರಮ ನಡೆಯಿತು.