Advertisement
ದೇಶದಲ್ಲಿ ಇದೀಗ ರಾಮಮಂದಿರದ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ನಡುವೆಯೇ ರಾಮನಗರ ಜಿಲ್ಲೆಯಲ್ಲೂ ಮಂದಿರ ಪಾಲಿಟಿಕ್ಸ್ ಪ್ರಾರಂಭಗೊಂಡಿದೆ. ದೇಶದಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿದಿರುವ ಕಾಂಗ್ರೆಸ್ ಪಕ್ಷದ ಇಲ್ಲಿ ಜಿಲ್ಲೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡುತ್ತಿದ್ದು, ಇದು ರಾಜಕೀಯವಾಗಿ ಸಾಕಷ್ಟು ಸಂಚಲನ ಮೂಡಿಸಿದೆ.
Related Articles
Advertisement
ರಾಮಭಕ್ತರ ಸೆಳೆಯುವ ತಂತ್ರವೇ?: ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಅಂತರ ಕಾಯ್ದು ಕೊಂಡಿರುವ ಕಾಂಗ್ರೆಸ್ ರಾಮನಗರದಲ್ಲಿ ಮಾತ್ರ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಉತ್ಸಾಹ ತೋರುತ್ತಿದೆ. ಇದರ ಹಿಂದೆ ರಾಮಭಕ್ತರ ಮತಗಳು ಬಿಜೆಪಿಗೆ ಟ್ರಂಪ್‌ಕಾರ್ಡ್ ಆಗದಂತೆ ತಡೆಯುವ ತಂತ್ರಗಾರಿಕೆ ಅಡಕವಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಬಿಜೆಪಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಮನೆಗೆ ಹಂಚುವ ಕಾರ್ಯಕ್ರಮದ ಮೂಲಕ ರಾಮಭಕ್ತರ ಮನಗೆಲ್ಲುವ ತಂತ್ರವನ್ನು ಸದ್ದಿಲ್ಲದೆ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಾಮಾಸ್ತ್ರವನ್ನು ಪ್ರಯೋಗಿಸಿದೆ.
ಕನಕೋತ್ಸವ ಮಾದರಿಯಲ್ಲಿ ರಾಮೋತ್ಸವ: ಇನ್ನೂ ಒಂದು ಹೆಜ್ಜೆ ಮುಂದೆ ಇರಿಸಲು ಸಿದ್ಧವಾಗಿರುವ ಕೈಪಾಳಯ ಫೆಬ್ರವರಿ ತಿಂಗಳಲ್ಲಿ ಕನಕಪುರದಲ್ಲಿ ಪ್ರತಿವರ್ಷ ಕನಕೋತ್ಸವ ನಡೆಸುವ ಮಾದರಿಯಲ್ಲಿ ರಾಮನಗರದಲ್ಲಿ 3 ದಿನಗಳ ಕಾಲ ರಾಮೋತ್ಸವ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಈ ಮೂಲಕ ಜಿಲ್ಲೆಯ ಜನರಲ್ಲಿ ಕಾಂಗ್ರೆಸ್ ರಾಮನಪರ ಇದೆ ಎಂಬ ಸಂದೇಶವನ್ನು ರವಾನಿಸುವ ಮೂಲಕ ರಾಮಭಕ್ತರ ಮತಗಳು ಬಿಜೆಪಿ ಪಾಲಾಗುವುದನ್ನು ತಪ್ಪಿಸುವ ತಂತ್ರಗಾರಿಗೆ ಅಳವಡಿಸಿಕೊಂಡಿದೆ. ಒಟ್ಟಾರೆ ಬಿಜೆಪಿ ಪ್ರಯೋಗಿಸಿದ್ದ ರಾಮಬಾಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗುರಿತಪ್ಪಿತ್ತು. ಇದೀಗ ಕಾಂಗ್ರೆಸ್ ಇದೇ ಬಾಣವನ್ನು ಪ್ರಯೋಗಿಸುತ್ತಿದ್ದು, ಇದು ರಾಮಭಕ್ತರ ಮನೆಗಲ್ಲುವಲ್ಲಿ ಸಹಕಾರಿಯಾದೀತೆ ಎಂದು ಕಾದುನೋಡಬೇಕಿದೆ.
ದೇವರು ಧರ್ಮದ ಹೆಸರಿನಲ್ಲಿ ನಮ್ಮ ಪಕ್ಷ ಎಂದೂ ರಾಜಕೀಯ ಮಾಡುವುದಿಲ್ಲ. ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಈಭಾಗದ ಭಕ್ತರ ಆಸೆ, ಅದನ್ನು ಈಡೇರಿಸುವುದಾಗಿ ನಾವು ಮಾತು ಕೊಟ್ಟಿದ್ದೆವು. ಅದನ್ನು ಕಾರ್ಯಗತ ಗೊಳಿಸಲು ಮುಂದಾಗಿದ್ದೆವು. ಚುನಾವಣೆ ಸಮೀಪ ಬಂದಾಗ ರಾಮಮಂದಿರ ಕಟ್ಟುತ್ತೇವೆ ಎನ್ನುವ ಕಾಂಗ್ರೆಸ್ ಶಾಸಕರು, ಸಂಸದರು, ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣವನ್ನು ಯಾಕೆ ಹಿಂದಕ್ಕೆ ಪಡೆದರು. ● ಎಂ.ಎನ್.ಆನಂದಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ
ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಏನು ಮಾಡಿದ್ದರೋ ಗೊತ್ತಿಲ್ಲ. ಆ ಜಾಗ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ್ದು, ಮುಜರಾಯಿ ಇಲಾಖೆಗೆ ಎಷ್ಟು ಜಾಗ ಸಿಗುತ್ತದೆ ಎಂಬುದನ್ನು ಸರ್ವೇಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದು, ಮಾಹಿತಿ ದೊರೆತ ತಕ್ಷಣ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ರಾಮಮಂದಿರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ● ಡಿ.ಕೆ.ಸುರೇಶ್, ಸಂಸದ.
ರಾಮ ಯಾವೊಂದು ಪಕ್ಷದ ಆಸ್ತಿಯಲ್ಲ, ಶಾಸಕ ಇಕ್ಬಾಲ್ ಹುಸೇನ್ ಮತ್ತು ಸಂಸದ ಡಿ.ಕೆ. ಸುರೇಶ್ ರಾಮದೇವರ ಬೆಟ್ಟದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ 20 ಎಕರೆ ಜಾಗ ಗುರುತಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚೆಮಾಡಿದ್ದು, ಚರ್ಚೆ ಸಮಯದಲ್ಲಿ ನಾನೂ ಜತೆಯಲ್ಲಿದ್ದೆ. ರಾಮನಗರದಲ್ಲಿ ರಾಮಮಂದಿರವನ್ನು ನಮ್ಮ ಸರ್ಕಾರ ನಿರ್ಮಾಣ ಮಾಡಲಿದೆ. ● ಎಚ್ .ಸಿ.ಬಾಲಕೃಷ್ಣ, ಶಾಸಕ, ಮಾಗಡಿ.
ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಈ ಸಂಬಂಧ ಪ್ರವಾಸೋದ್ಯಮ ಸಚಿವರ ಜತೆ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು. ● ಇಕ್ಬಾಲ್ ಹುಸೇನ್, ರಾಮನಗರ ಶಾಸಕ
– ಸು.ನಾ.ನಂದಕುಮಾರ್