ಹೌದು ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ನೂತನ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಶುಭದಿನದಂದು ನಾವು ನಮ್ಮ ಮಗುವಿಗೆ ಜನ್ಮ ನೀಡಲು ಬಯಸುತ್ತೇವೆ, ನಮಗೆ ಹೆರಿಗೆ ಮಾಡಿಸಿ ಎಂದು ಉತ್ತರಪ್ರದೇಶದ ಕಾನ್ಪುರದ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರು ವೈದ್ಯರಲ್ಲಿ ಮನವಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯುವ ಶುಭ ಮುಹೂರ್ತದಲ್ಲಿಯೇ ತಮಗೆ ಸಿಸೇರಿಯನ್ ನಡೆಸುವಂತೆಯೂ ಅವರು ವೈದ್ಯರ ಬಳಿ ಬೇಡಿಕೆ ಇರಿಸಿದ್ದಾರೆ. ಅತ್ಯಂತ ಪುಣ್ಯ, ಶುಭಪ್ರದ ಮತ್ತು ಅದೃಷ್ಟದಾಯಕ ಮುಹೂರ್ತ ಇದಾಗಿದ್ದು, ಈ ಸಮಯದಲ್ಲಿ ಮಗು ಜನಿಸಿದಲ್ಲಿ ನಮ್ಮ ಮಗು ಕೂಡ ಶ್ರೀರಾಮನಂತೆ ಸದ್ಗುಣ ಸಂಪನ್ನನಾಗುವುದು ನಿಶ್ಚಿತ ಎಂಬ ವಿಶ್ವಾಸ ಗರ್ಭಿಣಿಯರು, ಮತ್ತವರ ಕುಟುಂಬ ವರ್ಗದವರದ್ದಾಗಿದೆ.
Advertisement
“ಸುಮಾರು 14ರಿಂದ 15 ಕುಟುಂಬದವರು ನಮ್ಮ ಬಳಿ ಈ ಕೋರಿಕೆಯನ್ನು ಇಟ್ಟಿದ್ದಾರೆ. ಆದರೆ ಅವರ ಮನವಿಯಂತೆ ನಾರ್ಮಲ್ ಡೆಲಿವರಿ ಮಾಡಿಸುವುದು ಕಷ್ಟ ಸಾಧ್ಯ. ಹೆರಿಗೆ ದಿನಾಂಕದ ಬಗ್ಗೆ ಎಷ್ಟೇ ಅರಿವನ್ನು ಮೂಡಿಸಿದರೂ, ಈ ದಿನದಂದೇ ಹೆರಿಗೆ ಮಾಡಿಸುವಂತೆ ಬೇಡಿಕೆ ಬರುತ್ತಲೇ ಇದೆ. ಪ್ರತೀ ದಿನ ಆಸ್ಪತ್ರೆಯಲ್ಲಿ 12-14 ಸಿಸೇರಿಯನ್ ನಡೆಸಲಾಗುತ್ತಿದ್ದರೆ, ಜ. 22ರಂದು ಅಂದಾಜು 30 ಸಿಸೇರಿಯನ್‌ಗಳು ನಡೆಯುವ ಸಾಧ್ಯತೆಯಿದೆ’ ಎಂದು ಕಾನ್ಪುರದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ.
“ಜ.22ರಂದು ರಾಮಲಲ್ಲಾನ ಪ್ರತಿಷ್ಠಾಪನೆಯಾಗಲಿದೆ. ಅದೇ ದಿನದಂದು ಹೆರಿಗೆಯಾದರೆ ಪವಿತ್ರ ದಿನದಂದೇ ನಮ್ಮ ಮಗುವೂ ಈ ಜಗತ್ತಿಗೆ ಪ್ರವೇಶಿಸಿದಂತಾಗುತ್ತದೆ’ ಎಂದು ಗರ್ಭಿಣಿಯರು ಹೇಳಿದ್ದಾರೆ. ಇನ್ನು ಕೆಲವರು ಗಂಡು ಮಗು ಜನಿಸಿದರೆ ರಾಮ ಎಂದು ಹಾಗೂ ಹೆಣ್ಣು ಮಗು ಜನಿಸಿದರೆ ಸೀತಾ ಎಂದು ನಾಮಕರಣ ಮಾಡುವುದಾಗಿಯೂ ಹೇಳಿದ್ದಾರೆ. ದೇಶದ ವಿವಿಧೆಡೆಗಳಲ್ಲಿ ಇಂತಹುದೇ ಬೇಡಿಕೆ !
ದೇಶದ ವಿವಿಧೆಡೆಗಳಲ್ಲಿಯೂ ಇಂತಹುದೇ ಮನವಿಗಳನ್ನು ಗರ್ಭಿಣಿಯರು ಮತ್ತವರ ಕುಟುಂಬದವರು ವೈದ್ಯರ ಬಳಿ ಮಾಡಿಕೊಳ್ಳತೊಡಗಿದ್ದು, ಜ.22ರಂದೇ ಹೆರಿಗೆ ಮಾಡಿಸಿ ಎಂದು ದುಂಬಾಲು ಬೀಳತೊಡಗಿದ್ದಾರೆ. ಬೆಂಗಳೂರಿನಲ್ಲಿಯೂ ಇಂತಹುದೇ ಮನವಿಗಳು ಗರ್ಭಿಣಿಯರಿಂದ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸಲ್ಲಿಕೆಯಾಗಿವೆ. ಸಾಮಾಜಿಕ ಜಾಲ ತಾಣಗಳಲ್ಲಿಯೂ ಈ ವಿಷಯ ಈಗ ಭಾರೀ ಟ್ರೆಂಡಿಂಗ್‌ನಲ್ಲಿದೆ.