Advertisement

Ram Mandir: ಡಿಕೆಶಿ ತೋಟದಲ್ಲಿ ಬೆಳೆದಿದ್ದಾ: ಎಚ್‌ಡಿಕೆ ಪ್ರಶ್ನೆ

12:44 AM Jan 09, 2024 | Team Udayavani |

ಬೆಂಗಳೂರು: “ನಮ್ಮ ಅಕ್ಕಿಯನ್ನು ಬಳಸಿಕೊಂಡು ಜನತೆಗೆ ಬಿಜೆಪಿಯವರು ಮಂತ್ರಾಕ್ಷತೆ ಹಂಚುತ್ತಿದ್ದಾರೆ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಇವರ ಅಕ್ಕಿ ಎಂದರೆ ದೊಡ್ಡ ಆಲದಹಳ್ಳಿಯ ಅವರ ತೋಟದಲ್ಲಿ ಬೆಳೆದಿರುವುದಾ ಎಂದು ಪ್ರಶ್ನಿಸಿದರು.

Advertisement

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ರಾಜಕೀಯ ಮಾಡುತ್ತಿರುವುದು ಅವರು. ಇವರು ಅಕ್ಕಿಯನ್ನು ತಮ್ಮ ಸ್ವಗ್ರಾಮ ದೊಡ್ಡ ಆಲದಹಳ್ಳಿಯಲ್ಲಿ ಬೆಳೆದು ಕಳಿಸಿ ಕೊಟ್ಟಿದ್ದಾರೆಯೇ ಎಂದು ಡಿಕೆಶಿ ವಿರುದ್ದ ವಾಗ್ಧಾಳಿ ನಡೆಸಿದರು.

ರಾಮ ಮಂದಿರಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದು ದೂರಿರುವ ಡಿಕೆಶಿ ಆರೋಪದ ಬಗ್ಗೆ ಪ್ರತ್ಯುತ್ತರ ನೀಡಿದ ಅವರು; ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಯಬೇಕಾ ಅವರನ್ನು? ಪ್ರಧಾನಿಗಳು ಈಗಾಗಲೇ ಹೇಳಿದ್ದಾರೆ. ಉದ್ಘಾಟನೆ ದಿನ ಗೊಂದಲ ಆಗುವುದು ಬೇಡ. ಮುಂದೆ ದೇವಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದಾಗ ಎಲ್ಲರೂ ಶ್ರೀರಾಮ ದೇವರ ದರ್ಶನ ಪಡೆಯಬಹುದು. ಆಗ ಯಾರು ಬೇಕಾದರೂ ಹೋಗಬಹುದು. ಅದಕ್ಕೇನು ಪರ್ಮಿಷನ್‌ ಬೇಕಾ? ಎಂದು ಚಾಟಿ ಬೀಸಿದರು.

ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದೇವೇಗೌಡರು ಹೋಗುವ ಬಗ್ಗೆ ಅವರ ಆರೋಗ್ಯದ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಧರಿಸುತ್ತೇವೆ. ದೇವೇಗೌಡರು ಪ್ರಯಾಣ ಮಾಡುವುದಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಏನಿದೆ, ಅದರ ಮೇಲೆ ಹೋಗಬೇಕಾ? ಬೇಡವಾ ಅಂತ ತೀರ್ಮಾನಿಸುತ್ತೇವೆ.
-ಎಚ್‌.ಡಿ.ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿ

ಡಿಕೆಶಿಗೆ ಆರ್‌.ಅಶೋಕ್‌ ತಿರುಗೇಟು
ಬೆಂಗಳೂರು: ಅನ್ನಭಾಗ್ಯ ಅಕ್ಕಿಯಲ್ಲಿ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ ತಯಾರಿಸಿದ್ದಾರೆಂಬ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ತಿರುಗೇಟು ನೀಡಿದ್ದು, ಅನ್ನಭಾಗ್ಯದ ಅಕ್ಕಿಯಲ್ಲಿ ರಾಜ್ಯ ಸರಕಾರದ ಕೊಡುಗೆ ಶೂನ್ಯ ಎಂದು ತಿರುಗೇಟು ನೀಡಿದ್ದಾರೆ.

Advertisement

ಈ ಸಂಬಂಧ ಪಡಿತರ ರಶೀದಿಯನ್ನು ಸಾಮಾಜಿಕ ಜಾಲತಾಣ “ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಅನ್ನಭಾಗ್ಯದ ಅಕ್ಕಿಯಲ್ಲಿ ಶ್ರೀರಾಮನ ಮಂತ್ರಾಕ್ಷತೆ ನೀಡಲಾಗುತ್ತಿದೆ ಎಂದು ಸುಳ್ಳು ಹೇಳುತ್ತೀರಲ್ಲ, ನಿಮ್ಮನ್ನು ಆ ಶ್ರೀರಾಮ ಮೆಚ್ಚುವನೇ? ತಮ್ಮ ಗ್ಯಾರಂಟಿಗಳ ಬಂಡವಾಳ ಬಯಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರಕಾರ ಒಂದು ಕೆಜಿ ಅಕ್ಕಿಯನ್ನೂ ಪುಕ್ಕಟೆಯಾಗಿ ನೀಡಿಲ್ಲ: ಪ್ರಹ್ಲಾದ ಜೋಷಿ
ಬೆಂಗಳೂರು: ಅನ್ನಭಾಗ್ಯದ ಅಕ್ಕಿಯಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ತಯಾರಿಸಲಾಗಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ರಾಜ್ಯ ಸರಕಾರ ಒಂದು ಕೆಜಿ ಅಕ್ಕಿಯನ್ನೂ ಪುಕ್ಕಟೆಯಾಗಿ ನೀಡಿಲ್ಲ ಎಂದಿದ್ದಾರೆ.

ಜತೆಗೆ ಕೇಂದ್ರದ ಜತೆಗೆ ಕರಸಮರಕ್ಕೆ ಮುಂದಾಗಿರುವ ರಾಜ್ಯದ ವಾದಕ್ಕೆ ತಿರುಗೇಟು ನೀಡಿದ್ದಾರೆ. ಸರಕಾರದ ಸಚಿವರಿಗೆ ಸುಳ್ಳು ಹೇಳುವುದು ಮತ್ತು ತುಷ್ಟೀಕರಣದ ರಾಜಕೀಯ ಅತ್ಯಂತ ಸಹಜವಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next