ಎಚ್.ಡಿ.ಕೋಟೆ: ವ್ಯವಸಾಯಕ್ಕೆ ಅಡ್ಡಿಯಾಗುತ್ತಿದ್ದ ಕಲ್ಲೊಂದನ್ನು ಜಮೀನಿನ ಮಾಲಕರು ತೆಗೆಯಲು ಯತ್ನಿಸುತ್ತಾರೆ. ಈಗ ಅದೇ ಕಲ್ಲು ಶ್ರೀರಾಮಚಂದ್ರನಾಗಿ ಜಗತ್ತಿನೆದುರು ಕಾಣಿಸಲಿದ್ದಾನೆ.
ಎಚ್.ಡಿ.ಕೋಟೆ ತಾಲೂಕಿನ ಹನುಮಯ್ಯ ಅವರ ಮಗ ಎಚ್.ರಾಮದಾಸ್ ಅವರ ಜಮೀನಿನ ಮಧ್ಯೆ ಬೃಹದಾಕಾರದ ಕಲ್ಲೊಂದು ಇತ್ತು. ವ್ಯವಸಾಯಕ್ಕೆ ಅಡ್ಡಿಯಾಗುತ್ತಿದೆ ಎಂದು ಭಾವಿಸಿ ಜೆಸಿಬಿ ಯಂತ್ರದ ಮೂಲಕ ಅದನ್ನು ತೆರವುಗೊಳಿಸಲು ಮುಂದಾದರು. ಆಗಲೇ ತಿಳಿದದ್ದು ಅದು ಬರೆ ಕಲ್ಲಲ್ಲ; ಹೆಬ್ಬಂಡೆ ಎಂದು. ಹೇಗಾದರೂ ಮಾಡಿ ಕಲ್ಲನ್ನು ತೆಗೆದುಕೊಡಿ ಎಂದು ಜೆಸಿಬಿ ಮಾಲಕ ಶ್ರೀನಿವಾಸ್ ಅವರಿಗೆ ರಾಮದಾಸ್ ಅವರಿಗೆ ಮನವಿ ಮಾಡುತ್ತಾರೆ.
ಈ ಹಂತದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಕೆತ್ತನೆಗೆ ಆಯ್ಕೆಯಾಗಿದ್ದ ಮೈಸೂರಿನ ಶಿಲ್ಪಿ ಅರುಣ್ ಅವರು ಮೂರ್ತಿ ಕೆತ್ತನೆಗೆ ಬೇಕಾದ ಕಲ್ಲನ್ನು ಹುಡುಕುತ್ತಿರುತ್ತಾರೆ. ಈ ವಿಷಯ ಜೆಸಿಬಿ ಮಾಲಕ ಶ್ರೀನಿವಾಸ್ ಅವರ ಕಿವಿಗೆ ಬೀಳುತ್ತದೆ. ಈ ಕಲ್ಲಿನ ವಿಷಯದ ಕುರಿತು ಅರುಣ್ ಅವರಿಗೆ ಶ್ರೀನಿವಾಸ್ ಹೇಳುತ್ತಾರೆ.
ಶಿಲ್ಪಿ ಅರುಣ್ ಅವರ ಸಹೋದರ ಸೂರ್ಯಪ್ರಕಾಶ್ ಅವರೊಂದಿಗೆ ತೆರಳಿ ನೋಡಿದಾಗ ಇದು ಅತ್ಯಂತ ವಿಶೇಷವಾದ ಕೃಷ್ಣಶಿಲೆ ಎಂದು ಗೊತ್ತಾಗುತ್ತದೆ. ಈ ಕುರಿತು ಅಯೋಧ್ಯೆ ಟ್ರಸ್ಟ್‌ನ ಶಿಲಾತಜ್ಞರಿಗೆ ಮಾಹಿತಿ ರವಾನೆಯಾಗುತ್ತದೆ. ಅವರು ಬಂದು ಪರಿಶೀಲಿಸಿ ನೋಡಿ, ಮೂರ್ತಿ ಕೆತ್ತಲು ಪ್ರಶಸ್ತ ಎಂದು ಸರ್ಟಿಫಿಕೆಟ್ ನೀಡುತ್ತಾರೆ. ಹೀಗಾಗಿ ಆರು ತಿಂಗಳ ಹಿಂದೆ ಎರಡು ಕಲ್ಲುಗಳನ್ನು ಗುಪ್ತವಾಗಿ ಅಯೋಧ್ಯೆಗೆ ಕಳುಹಿಸಲಾಗುತ್ತದೆ. ಅಯೋಧ್ಯೆ ರಾಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಯಾಗುತ್ತಿರುವ ರಾಮಲಲ್ಲಾ (ಬಾಲರಾಮ)ನ ಕೆತ್ತನೆಗೆ ಮೊದಲು ಶಿಲ್ಪಿ ಅರುಣ್ ಮತ್ತು ಅಯೋಧ್ಯೆ ಟ್ರಸ್ಟ್‌ನ ಗುರುಗಳು ರೈತ ರಾಮದಾಸ್ ಅವರ ಜಮೀನಿನಿಂದ ಮೊದಲು ಎರಡು ಕಲ್ಲನ್ನು ತೆಗೆದುಕೊಂಡು ಹೋಗಲಾಯಿತು. ಅನಂತರ ಬಾಲರಾಮನ ಮೂರ್ತಿ ಜತೆಗೆ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ದೇವರ ಮೂರ್ತಿ ಕೆತ್ತನೆಗಾಗಿ ಮತ್ತೆ ಮೂರು ಕಲ್ಲನ್ನು ಅಯೋಧ್ಯೆ ಟ್ರಸ್ಟ್‌ನ ವರು 6 ತಿಂಗಳ ಹಿಂದೆಯೇ ತೆಗೆದುಕೊಂಡು ಹೋಗಿರುವುದಾಗಿ ರೈತ ಎಚ್.ರಾಮದಾಸ್ ಅವರ ಪುತ್ರ ರವಿ ಅವರು ಉದಯವಾಣಿಗೆ ತಿಳಿಸಿದ್ದಾರೆ.
ನಮ್ಮ ಪೂರ್ವ ಜನ್ಮದ ಪುಣ್ಯ:
ಬಾಲ ರಾಮನ ಮೂರ್ತಿ ಕೆತ್ತನೆ ಬಳಕೆಯಾದ ಕಲ್ಲು ನಮ್ಮ ಜಮೀನಿನಲ್ಲಿ ದೊರೆತದ್ದು ನಮ್ಮ ಪೂರ್ವ ಜನ್ಮದ ಪುಣ್ಯ. ಅಯೋಧ್ಯೆ ಟ್ರಸ್ಟ್‌ನವರಿಗೆ ಕಲ್ಲನ್ನು ದಾನವಾಗಿ ಕೊಟ್ಟಿದ್ದೇನೆ. ಯಾವುದೇ ಹಣ ಪಡೆದಿಲ್ಲ, ಈಗ ಇದೆ ಕಲ್ಲಿನಿಂದ ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದ ರಾಚಪ್ಪಾಜಿ ದೇವರ ಮೂರ್ತಿ ಕೆತ್ತನೆಗೂ ಕೇಳಿದ್ದಾರೆ. ಅಲ್ಲಿಗೆ ನಾನೇ ಮೂರ್ತಿ ಕೆತ್ತನೆ ಮಾಡಿಸಿಕೊಡುವುದಾಗಿ ರೈತ ರಾಮದಾಸ್ ತಿಳಿಸಿದ್ದಾರೆ.
– ಬಿ.ನಿಂಗಣ್ಣಕೋಟೆ