ಹೊಸದಿಲ್ಲಿ: ಮಾಜಿ ಕಾನೂನು ಸಚಿವ, ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಾಮ್ ಜೇಠ್ಮಲಾನಿ ಅವರಿಗೆ 96 ವರ್ಷ ವಯಸ್ಸಾಗಿತ್ತು. ಹೊಸದೆಹಲಿಯ ಮನೆಯಲ್ಲಿ ಅವರು ಕೊನೆಯುಸಿರೆಳೆದರು.
ಸಿಂಧ್ ಪ್ರಾಂತ್ಯದ ಶಿಕಾರ್ಪುರದಲ್ಲಿ ಸೆಪ್ಟೆಂಬರ್ 14 1923ರಲ್ಲಿ ರಾಮ್ ಬೂಲ್ ಚಂದ್ ಜೇಠ್ಮಲಾನಿ ಜನಿಸಿದರು. ತನ್ನ 13ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಅವರು 17ನೇ ವರ್ಷಕ್ಕೆ ಕಾನೂನು ಪದವಿ ಪಡೆದಿದ್ದರು.
ಹಲವು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ವಾದಿಸಿದ್ದ ಜೇಠ್ಮಲಾನಿ ಒಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸುಪ್ರೀಂ ಕೋರ್ಟ್ ವಕೀಲರಾಗಿದ್ದರು.
ಭಾರತೀಯ ಜನತಾ ಪಕ್ಷದಿಂದ ಮುಂಬೈನಲ್ಲಿ ಚುನಾವಣೆ ಎದುರಿಸಿದ್ದ ರಾಮ್ ಜೇಠ್ಮಲಾನಿ ಎರಡು ಬಾರಿ ಸಂಸದರಾಗಿದ್ದರು. ಕಾನೂನು ಸಚಿವ ಮತ್ತು ನಗರಾಭಿವೃದ್ದಿ ಸಚಿವರಾಗಿ ಕೆಲಸ ಮಾಡಿದ್ದ ಅವರು 2010ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು.