Advertisement

ರಾಮನೆಂದರೆ ಭಾರತೀಯರ ಭಾವಸೇತು, ಮಂದಿರ ಅದರ ವಿಶ್ವರೂಪ

12:30 AM Nov 25, 2018 | |

ರಾಮನಿಗಾಗಿ ಭಾರತ ಮತ್ತೆ ಎದ್ದು ನಿಂತಿದೆ. ಅದು ರಾಮ ಜನ್ಮಭೂಮಿ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವನ್ನು ಪುನರ್‌ ನಿರ್ಮಿಸುವ ಸಂಕಲ್ಪದೊಂದಿಗೆ. ಸಾವಿರಾರು ವರ್ಷಗಳ ಪುರಾತನ ಸಂಸ್ಕೃತಿಯ ತವರಾದ ಭಾರತದಲ್ಲಿ ರಾಮನೆಂದರೆ ಕಳೆದುಹೋದ ಅವತಾರವಷ್ಟೇ ಅಲ್ಲ, ನಿತ್ಯನೂತನ ಆದರ್ಶ. ವ್ಯಕ್ತಿಯ ಬದುಕಿನಿಂದ ಹಿಡಿದು ರಾಜ್ಯಾಡಳಿತದವರೆಗೂ ರಾಮನೆಂದರೆ ಏರಬೇಕಾದ ಆದರ್ಶ. ಮರ್ಯಾದಾ ಪುರುಷೋತ್ತಮ, ರಾಮ ರಾಜ್ಯಕ್ಕೆ ನಾಂದಿ. 

Advertisement

ಭಾರತದ ಸಮೃದ್ಧ ಸಂಪತ್ತು, ವಿಶಾಲ ಭೂಮಿ ಜತೆಗೆ ಮತೀಯವಾಗಿ ಜಯಿಸಬೇಕಾಗಿದ್ದ ಹೊಸ ಸೀಮೆಯಂತೆ ಕಂಡು ವಿದೇಶೀ ಮತೀಯ ಅತಿಕ್ರಮಣಕಾರರು ಭಾರತದೊಳಗೆ ದಾಳಿ ಮಾಡಿದ್ದು ಹಾಗೂ ದಾಳಿಯ ಮೂಲಕ ಮತೀಯ ಸಾಮ್ರಾಜ್ಯವನ್ನು ಕಟ್ಟಲು ನಡೆಸಿದ ಕುತಂತ್ರಗಳೆಲ್ಲಾ ಈಗ ಇತಿಹಾಸದ ಪುಟಸೇರಿದ ಸತ್ಯಗಳು. ಆದರೆ ಸತ್ಯದ ಒಡಲನ್ನು ಬಗೆದು ನೋಡಿದರೆ ಇಂತಹ ದಬ್ಟಾಳಿಕೆಗಳ ಸಾಲು ಸಾಲು ಚಿತ್ರಗಳು ಹುದುಗಿ ಕುಳಿತಿವೆ. ವಿಚಿತ್ರವೆಂದರೆ, ದಾಳಿ ದಬ್ಟಾಳಿಕೆಗಳ ಮೂಲಕ ಕಟ್ಟಿದ ಪರಕೀಯ ಸಾಮ್ರಾಜ್ಯವನ್ನು ಹೊಡೆದೋಡಿಸಿ ಸ್ವತಂತ್ರ ಸ್ವರಾಜ್ಯವನ್ನು ಕಟ್ಟಿಕೊಂಡ ಮೇಲೂ ನಮ್ಮ ಮೇಲೆ ಹೇರಿದ ಪರಕೀಯತೆಯ, ಅತಿಕ್ರಮಣಕಾರರ ಪರಾಕ್ರಮದ ಕುರುಹುಗಳಾದ, ನಮ್ಮ ಅಪಮಾನದ ಸಂಕೇತಗಳಿಂದ ನಾವಿನ್ನೂ ಕಳಚಿಕೊಳ್ಳದ್ದು!

ಅಂತಹ ಗುಲಾಮಿತನದ ಕುರುಹುಗಳಲ್ಲೊಂದು ಆಯೋಧ್ಯೆಯ ರಾಮ ಮಂದಿರವನ್ನು ಕೆಡಹಿ ಕಟ್ಟಿದ ಕಟ್ಟಡ. ರಾಮನನ್ನು ಆರಾಧಿಸುವ ಕೇಂದ್ರವನ್ನೇ ಕೆಡಹುವುದೆಂದರೆ ದೇಶದ ಕೋಟ್ಯಂತರ ಹಿಂದುಗಳ ಅಸ್ಮಿತೆಯನ್ನೇ ಕೆಡಹಿದಂತೆ. ಅಲ್ಲಿ ಉರುಳಿ ಬಿದ್ದದ್ದು ಮಂದಿರವಷ್ಟೇ ಅಲ್ಲ. ಅದು ಸಾವಿರಾರು ವರ್ಷಗಳ ಕಾಲ ಅನೂಚಾನವಾಗಿ ಹರಿದುಬಂದ ಶ್ರೇಷ್ಠ ನಾಗರಿಕತೆಯ ಸ್ಮತಿಯನ್ನೇ ಭಂಗಗೊಳಿಸಿದಂತೆ. 

ಒಂದು ದೇಶವನ್ನು, ಒಂದು ನಾಗರಿಕತೆಯನ್ನು ನಾಶಗೊಳಿಸುವ ಸುಲಭದ ದಾರಿಯೆಂದರೆ ಆ ದೇಶದ ನಾಗರಿಕತೆಯ ನೆನಪುಗಳನ್ನು ನಾಶಮಾಡುವುದು. ನಮ್ಮ ದೇಶದ ಮೇಲೆ ದಾಳಿ ಮಾಡಿದ ಮೊಘಲರಿಂದ ಬ್ರಿಟಿಷರವರೆಗೆ ಪ್ರತಿಯೊಬ್ಬರೂ ಮಾಡಿದ್ದು ಇದನ್ನೇ. ಅದಕ್ಕಾಗಿ ನಮ್ಮ ದೇಗುಲಗಳನ್ನು ಕೆಡಹಿದರು, ಮೂರ್ತಿಗಳನ್ನು ಭಗ್ನಗೊಳಿಸಿದರು, ವಿದ್ಯಾಪೀಠಗಳನ್ನು ಸುಟ್ಟುಹಾಕಿದರು, ಊರು-ಪಟ್ಟಣಗಳ ಹೆಸರನ್ನು ಬದಲಿಸಿದರು, ಕೊನೆಗೆ ಪಂಡಿತರನ್ನು ಕತ್ತರಿಸಿ ಜ್ಞಾನದ ಕೊಂಡಿಗಳನ್ನೂ ಕಳಚಿಹಾಕಿದರು. ಇಂದಿಗೂ ನಮ್ಮ ಸ್ಮತಿಯನ್ನು ಪೂರ್ಣಪ್ರಮಾಣದಲ್ಲಿ ಗಳಿಸಿಕೊಳ್ಳಲಾಗದ ನತದೃಷ್ಟ ಸಮಾಜ ನಮ್ಮದು. ಅಂತಹ ಸ್ಮತಿಗಳನ್ನು ದಕ್ಕಿಸಿಕೊಳ್ಳುವ ಸಣ್ಣ ಸಣ್ಣ ಪ್ರಯತ್ನಗಳನ್ನೂ ಕೂಡ ರಾಜಕೀಯ ಕಾರಣಗಳಿಂದ ಮತೀಯ ಬಣ್ಣ ಬಳಿದು ವಿಫ‌ಲಗೊಳಿಸುವ ಮಾನಸಿಕತೆ ಇನ್ನೂ ಹೇಯವಾದುದು.

ಅಯೋಧ್ಯೆಯನ್ನೇ ಉದಾಹರಣೆಯಾಗಿ ಗಮನಿಸಿದರೆ ಈ ಸತ್ಯ ಎದ್ದು ತೋರುತ್ತದೆ. ಹದಿನಾರನೇ ಶತಮಾನದಲ್ಲಿ ಅಯೋಧ್ಯೆಯ ಮೇಲೆ ದಂಡೆತ್ತಿ ಬಂದ ಬಾಬರನು ಸಮಸ್ತ ಹಿಂದೂ ಸಮಾಜದ ಶ್ರದ್ಧೆಯ ಕೇಂದ್ರವಾಗಿದ್ದ ಶ್ರೀರಾಮನ ದೇಗುಲವನ್ನು ಕೆಡಹಿ ಕಟ್ಟಡವನ್ನು ಕಟ್ಟಿದ್ದು, ಆ ಬಳಿಕ ಶತಮಾನಗಳ ಕಾಲ ರಾಮಭಕ್ತ ಹಿಂದೂ ಸಮಾಜ ದೇಗುಲವನ್ನು ಮರಳಿ ಕಟ್ಟಿಕೊಳ್ಳಲು ನಡೆಸಿದ ಪ್ರಯತ್ನ, ಬ್ರಿಟಿಷ್‌ ಆಳ್ವಿಕೆಯ ಕಾಲದವರೆಗೂ ನಡೆದೇ ಇತ್ತು. ಸ್ವತಂತ್ರ ಭಾರತ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವಷ್ಟೇ ಹೆಮ್ಮೆ-ಸ್ವಾಭಿಮಾನದಿಂದ ಅಯೋಧ್ಯೆಯ ಶ್ರೀರಾಮನ ಜನ್ಮಸ್ಥಾನದಲ್ಲಿ ಭವ್ಯ ದೇಗುಲವನ್ನು ನಿರ್ಮಿಸಿ, ಕಳಂಕದ ಕೊಳೆಯನ್ನು ತೊಡೆದುಹಾಕಬೇಕಾಗಿತ್ತು. ಆದರೆ ಓಲೈಕೆಯ ರಾಜಕಾರಣಕ್ಕೆ ಹಿಂದೂ ಸಮಾಜದ ನೋವು ಕಾಣಿಸಲೇ ಇಲ್ಲ. ವಾಸ್ತವದಲ್ಲಿ ಬಾಬರ್‌ ಓರ್ವ ವಿದೇಶಿ ಅತಿಕ್ರಮಣಕಾರ. ಆದರೆ ಗುಲಾಮಿತನದ ಕುರುಹನ್ನು ಧಾರ್ಮಿಕ ಸಂಕೇತವೆಂಬಂತೆ ಉಳಿಸಿಕೊಳ್ಳುವ ಪ್ರಯತ್ನ ನಡೆಯಿತು. ಅದರ ಪರಿಣಾಮವನ್ನು ದೇಶದಲ್ಲಿಂದು ನಾವು ನೋಡುತ್ತಿದ್ದೇವೆ.

Advertisement

ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರಾಮನ ಹೆಸರಿನ ಮಂದಿರಗಳಿಂದಿರ ಬಹುದು. ಆದರೆ ಅದು ಆಯೋಧ್ಯೆಯ ಜನ್ಮಭೂಮಿಯಲ್ಲಿರಬೇಕಾದ ಒಂದು ಮಂದಿರವನ್ನು ಸರಿಗಟ್ಟಲಾರದು. ಯಾಕೆಂದರೆ ಬಾಬರನಿಂದ ನಡೆದದ್ದು ಸಾಂಸ್ಕೃತಿಕ ಅಪಚಾರ. ಭಾರತೀಯರನ್ನು ಭಾರತೀಯ ಸ್ವಾಭಿಮಾನದ ಬೇರುಗಳಿಂದ ತುಂಡರಿಸುವ ಕೆಲಸ. ಇಂದು ನಡೆಯಬೇಕಾದ ಮಂದಿರದ ಮರು ನಿರ್ಮಾಣವೆನ್ನುವುದು ನಮ್ಮ ಕಳಚಿದ ಬೇರುಗಳ ಜತೆಗಿನ ಮರುಜೋಡಣೆೆಯ ಕೆಲಸ. ಕೋಟ್ಯಂತರ ಭಾರತೀಯರಿಗೆ ಆಯೋಧ್ಯೆಯ ಜತೆಗೆ ಇರುವುದು ಭೌಗೋಳಿಕವಾಗಿ ಸ್ಥಾಪಿತವಾದ ರಸ್ತೆ ಸಂಪರ್ಕದ ಸಂಬಂಧವಲ್ಲ. ಅದು ಸಾವಿರಾರು ವರ್ಷಗಳಿಂದ ಅವಿಚ್ಛಿನ್ನವಾಗಿ ಬೆಸೆದ ಸಾಂಸ್ಕೃತಿಕ ಸಂಬಂಧ, ಆಧ್ಯಾತ್ಮಿಕ ಸಂಬಂಧ. ಉತ್ತರ- ದಕ್ಷಿಣ- ಪೂರ್ವ-ಪಶ್ಚಿಮ ಎಂಬ ಬೇಧವಿಲ್ಲದೇ ಸಮಸ್ತ ಭಾರತದ ಮನೋಮಯ ಕೋಶ ವನ್ನು ಬೆಸೆದ ತಂತುವದು. ಮಾನವ ಜಗತ್ತಿಗೆ ಬದುಕಿನ ಶ್ರೇಷ್ಠ ಮಾದರಿಯನ್ನು ಕೊಟ್ಟ ಮರ್ಯಾದಾ ಪುರುಷೋತ್ತಮನ ಮರು ಆವಿಷ್ಕಾರ.

ಅಯೋಧ್ಯೆಯ ಮೂಲಕ ನೂರಾರು ವರ್ಷಗಳ ಕಾಲ ಕೆಡಹಿಬಿದ್ದುದು ಭಾರತೀಯರ ಒಂದು ಮಂದಿರವಷ್ಟೇ ಅಲ್ಲ, ಅದು ಪುರಾತನ ನಾಗರಿಕತೆಯೊಂದರ ಜೀವಂತಿಕೆ, ಆತ್ಮವಿಶ್ವಾಸ, ಐಡೆಂಟಿಟಿ. ಭಾರತವಿಂದು ಮರಳಿ ಪಡೆಯಬೇಕಾದುದು ಇವುಗಳನ್ನೇ. ಭಾರತವನ್ನು ಇಂದಿಗೂ ವಸಾಹತುಶಾಹಿ ಆಳ್ವಿಕೆ ತೊಡಿಸಿದ ಗುಲಾಮೀ ಕನ್ನಡಕದಿಂದ ನೋಡುವವರಿಗೆ, ಭಾರತೀಯರ ಶ್ರದ್ಧಾಬಿಂದುಗಳ ಬಗ್ಗೆ ಯಾವುದೇ ಗೌರವವಿರದ ಮಾರ್ಕ್ಸಿಸ್ಟ್‌ ನಾಸ್ತಿಕರಿಗೆ, ಮತ ಓಲೈಕೆಯ ಸಂಕುಚಿತ ರಾಜಕಾರಣಕ್ಕೆ ಅರ್ಥವಾಗದ ಸಂಗತಿಯಿದು. 

ನೂರು ಕೋಟಿ ಶ್ರದ್ಧಾವಂತ ಹಿಂದುಗಳಿರುವ ದೇಶದಲ್ಲಿ ದೇಶದ ಜನರ ಶ್ರದ್ಧೆಯ ರಾಮ ಟೆಂಟ್‌ನೊಳಗಿರುವ ದೌರ್ಭಾಗ್ಯಕ್ಕೆ ಏನೆನ್ನುವುದು?  ಅಯೋಧ್ಯೆಯ ಮೂಲಕ ಭಾರತದ ಸ್ವಾಭಿಮಾನ ತಲೆ ಎತ್ತಬೇಕಾಗಿದೆ. ಮಂದಿರವೆಂದರೆ ಬರಿದೇ ಕಲ್ಲಿನ ಕಟ್ಟಡವಲ್ಲ, ಅದು ಭಾರತೀಯರ ರಾಷ್ಟ್ರೀಯತೆಯ ಸಂಕೇತ. ಶತಮಾನಗಳ ನೋವು, ಅಪಮಾನಗಳಿಗೆ ಮುಕ್ತಿ. ವಿದೇಶೀಯರ ಕತ್ತಿಯ ಕೌರ್ಯಕ್ಕೆ ತಲೆಕೊಟ್ಟು, ಕೋವಿಗೆ ಎದೆಕೊಟ್ಟು ಧರ್ಮ-ಸ್ವಾಭಿಮಾನಗಳನ್ನು ಉಳಿಸಲು ಪರಾಕ್ರಮಿಗಳಾಗಿಯೇ ಹುತಾತ್ಮರಾದವರಿಗೆ ಸಲ್ಲಿಸುವ ಅತ್ಯುನ್ನತ ಗೌರವ. ಭಾರತ ಪರ್ಯಂತ ಊರು-ಹಳ್ಳಿಗಳಲ್ಲಿ, ಕಾಡು-ಬೆಟ್ಟಗಳಲ್ಲಿ, ನದಿ-ಕೆರೆಗಳಲ್ಲಿ ರಾಮನ ಸಂಚಾರದ ನೆನಪುಗಳನ್ನು ಜೀವಂತವಾಗಿರಿಸಿ, ಈ ಸಂಚಾರವೇ ಲೋಕೋದ್ಧಾರಕ್ಕಾಗಿ ಎಂದು ಭಾವಿಸಿದ್ದ ಜನಪದರ ನಂಬಿಕೆಗೆ ಸಲ್ಲುವ ಗೌರವವಿದು. ತನ್ನ ಪೂರ್ವಜರ ಬಗೆಗೆ ಹೆಮ್ಮೆ ಪಡುವಂತೆ ಭಾರತೀಯ ಮನಸುಗಳನ್ನು ಹೊಸೆಯುವ ಕಾರ್ಯವಿದು. ಭವಿಷ್ಯದ ತಲೆಮಾರುಗಳು ಜಗತ್ತಿನೆದುರು ತಾವು ಯಾವ ಪರಂಪರೆಗೆ ಸೇರಿದವರೆನ್ನುವುದನ್ನು ನಾಚಿಕೆಪಡದೆ ಸಾರಿಹೇಳುವ ಸಂಕೇತವಿದು.

 ದೇಶವನ್ನು ಆಳವವರಿಗೆ, ವಿರೋಧ‌ಪಕ್ಷಗಳ ನಾಯಕರಿಗೆ, ನ್ಯಾಯಪೀಠಗಳಿಗೆ ಶ್ರದ್ಧಾವಂತ ಹಿಂದುಗಳ ಒಕ್ಕೊರಳ ಆಗ್ರಹ ಕೇಳಬೇಕು. ಕೇಂದ್ರ ಸರ್ಕಾರ ಸಂಸತ್‌ನ ಅಧಿವೇಶನ ಕರೆದು, ದೇಶದೆಲ್ಲೆಡೆಯಿಂದ ಆಗ್ರಹಪೂರ್ವಕವಾಗಿ ಕೇಳಿಬರುತ್ತಿರುವ ಧ್ವನಿಯನ್ನು ಗೌರವಿಸಿ, ಕಾನೂನು ರಚನೆ ಮಾಡುವ ಮೂಲಕ ಮಂದಿರ ನಿರ್ಮಾಣಕ್ಕೆ ಎದುರಾಗಿರುವ ಎಲ್ಲ$ತೊಡಕುಗಳನ್ನು ನಿವಾರಿಸಬೇಕಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಬಿನ್ನಾಭಿಪ್ರಾಯವನ್ನು ಮರೆತು ಸಮಸ್ಯೆಯನ್ನು ಬಗೆಹರಿಸಬೇಕು. ಯಾಕೆಂದರೆ ರಾಮನೆಂದರೆ ಭಾರತೀಯರನ್ನು ಜಾತಿ, ಪ್ರಾಂತ, ಭಾಷೆಯನ್ನು ಮೀರಿ ಬೆಸೆದ ಭಾವಸೇತು.

ಡಾ. ರೋಹಿಣಾಕ್ಷ ಶಿರ್ಲಾಲು 

Advertisement

Udayavani is now on Telegram. Click here to join our channel and stay updated with the latest news.

Next