ಅಯೋಧ್ಯೆ/ಲಕ್ನೋ:ಶ್ರೀರಾಮ ಎಲ್ಲರಲ್ಲಿಯೂ ಇದ್ದಾನೆ, ಎಲ್ಲೆಡೆಯೂ ಇದ್ದಾನೆ. ಅಯೋಧ್ಯೆಯಲ್ಲಿನ ಭವ್ಯ ಮಂದಿರ ಭಾರತದ ಸಂಸ್ಕೃತಿಯಾಗಿದೆ. ಮಂದಿರ ನಿರ್ಮಾಣ ಪ್ರಕ್ರಿಯೆ ರಾಷ್ಟ್ರ ಒಗ್ಗೂಡಿಸುವ ಪ್ರಕ್ರಿಯೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಬುಧವಾರ (ಆಗಸ್ಟ್ 05-2020) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇಷ್ಟು ವರ್ಷಗಳ ಕಾಲ ಟೆಂಟ್ ನಲ್ಲಿ ನೆಲೆನಿಂತಿದ್ದ ನಮ್ಮ ರಾಮ್ ಲಲ್ಲಾನಿಗಾಗಿ ಅಯೋಧ್ಯೆ ಭೂಮಿಯಲ್ಲಿ ಬೃಹತ್ ಮಂದಿರ ನಿರ್ಮಾಣವಾಗಲಿದೆ. ಇಂದು ಮತ್ತೆ ನಮಗೆ ರಾಮಜನ್ಮಭೂಮಿ ಮರಳಿ ಸಿಕ್ಕಿದೆ, ಮತ್ತೆ ನಾವು ರಾಮಮಂದಿರ ನಿರ್ಮಿಸುವ ಮೂಲಕ ಶತಮಾನಗಳ ಹಿಂದಿನ ಗತವೈಭವವನ್ನು ಜಗಜ್ಜಾಹೀರುಗೊಳಿಸಬೇಕಾಗಿದೆ ಎಂದರು.
ರಾಮಮಂದಿರ ಹೋರಾಟಕ್ಕೆ ಅರ್ಪಣ, ತರ್ಪಣವಿತ್ತು. ಈ ನಿಟ್ಟಿನಲ್ಲಿ 130 ಕೋಟಿ ಭಾರತೀಯರಿಗೆ ತಲೆಬಾಗಿ ನಮಿಸುತ್ತೇನೆ. ಶ್ರೀರಾಮ ಮರ್ಯಾದಾ ಪುರುಷೋತ್ತಮ. ಯಾವುದೇ ಕೆಲಸವಾಗಬೇಕಾದರೂ ಶ್ರೀರಾಮನತ್ತ ನೋಡುತ್ತೇವೆ. ನಾನು ಈ ಕಾರ್ಯ ಮಾಡುವ ಮೊದಲು ರಾಮಭಕ್ತ ಹನುಮಾನ್ ಆಶೀರ್ವಾದ ಪಡೆದು ಬಂದಿದ್ದೇನೆ ಎಂದರು.
ರಾಮಮಂದಿರ ನಮ್ಮ ರಾಷ್ಟ್ರೀಯ ಭಾವನೆಯ ಪ್ರತೀಕವಾಗಲಿದೆ. ಮುಂದಿನ ತಲೆಮಾರಿಗೆ ಭಕ್ತಿ, ಸಂಕಲ್ಪದ ಪ್ರೇರಣೆ ನೀಡಲಿದೆ. ಜಗತ್ತಿನ ಎಲ್ಲಾ ಕಡೆಯಿಂದಲೂ ಜನ ಇಲ್ಲಿಗೆ ಬರುವಂತಾಗಲಿ. ಮಂದಿರ ನಿರ್ಮಾಣದ ಬಳಿಕ ಭಾರತದ ಕೀರ್ತಿ ಹೆಚ್ಚಾಗಲಿದೆ ಎಂದು ತಿಳಿಸಿದರು.
“ಇಂತಹ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಲು ನನ್ನ ಆಹ್ವಾನಿಸಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಕನ್ಯಾಕುಮಾರಿಯಿಂದ ಕ್ಷೀರಭಾವಿ, ಕೋಟೇಶ್ವರದಿಂದ ಕಾಮಾಖ್ಯಾ, ಜಗನ್ನಾಥದಿಂದ ಹಿಡಿದು ಕೇದಾರನಾಥ, ಸೋಮನಾಥದಿಂದ ಹಿಡಿದು ಕಾಶಿ ವಿಶ್ವನಾಥ ಸೇರಿದಂತೆ ಇಂದು ಇಡೀ ದೇಶವೇ ಭಗವಾನ್ ರಾಮನಲ್ಲಿ ತಲ್ಲೀನವಾಗಿವೆ ಎಂದು ಹೇಳಿದರು.
ಜೈ ಶ್ರೀರಾಮ್ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಪ್ರಧಾನಿ, ಈ ಘೋಷಣೆ ಕೇವಲ ಭಗವಾನ್ ರಾಮನ ನಗರವಾಗಿರುವ ಅಯೋಧ್ಯೆಗೆ ಮಾತ್ರ ಪ್ರತಿಧ್ವನಿಸುವುದಲ್ಲ, ಆದರೆ ಇಡೀ ವಿಶ್ವಕ್ಕೆ ಅನುರಣಿಸುವಂತಾಬೇಕು ಎಂದು ತಿಳಿಸಿದರು. ನಾನು ಇಡೀ ದೇಶದ ಜನತೆಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.