ಎಚ್.ಎಚ್.ಬೇಪಾರಿ
ಅಮೀನಗಡ: ಚಿಂತಕಮಲದಿನ್ನಿ ಗ್ರಾಮದ ಬಿಇ ಪದವೀಧರ 36 ವರ್ಷದ ರಾಜುಗೌಡ್ರ ಟಗರು ಸಾಕಾಣಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದು ಇತರರಿಗೂ ಮಾದರಿಯಾಗಿದ್ದಾನೆ.
ಐಟಿ ಖಾಸಗಿ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ ಈತ 12 ವರ್ಷ ನೌಕರಿ ಮಾಡಿ, ಈಗ ಅದನ್ನು ಬಿಟ್ಟು ಸ್ವ ಗ್ರಾಮ ಚಿಂತಕಮಲದಿನ್ನಿಗೆ ಬಂದು ಟಗರು ಸಾಕಾಣಿಕೆ ಮಾಡಿ ಉತ್ತಮ ಲಾಭ ಪಡೆದು ನೆಮ್ಮದಿ ಜೀವನ ನಡೆಸಿದ್ದಾರೆ.
ಕಡಿಮೆ ಬಂಡವಾಳದ ಶೆಡ್: ರಾಜುಗೌಡ್ರ ತಮ್ಮ ಸ್ವಂತ 6 ಎಕರೆ ಜಮೀನಿನಲ್ಲಿ 80/30 ಅಡಿ ಅಳತೆ ವಿಸ್ತೀರ್ಣದ ಜಾಗದಲ್ಲಿ ಕಡಿಮೆ ಬಂಡವಾಳ ಹಾಕಿ ಅತ್ಯಂತ ಶಿಸ್ತುಬದ್ಧವಾದ ಶೆಡ್ ನಿರ್ಮಿಸಿಕೊಂಡಿದ್ದಾರೆ. ಜಿಲ್ಲೆಯ ಅತ್ಯಂತ ಉತ್ತಮ ಯಳಗ ತಳಿಯ ಬಿಳಿ ಟಗರು ಮರಿಗಳನ್ನು ಅಮೀನಗಡ, ಮುಧೋಳ, ಕೆರೂರನಲ್ಲಿ ನಡೆಯುವ ಕುರಿಸಂತೆಯಲ್ಲಿ ಖರೀದಿಸಿ ತಂದಿದ್ದಾರೆ. ಸುಮಾರು ಒಂದು ವರ್ಷ ಅವುಗಳ ಪಾಲನೆ-ಪೋಷಣೆ ಮಾಡಿ ಒಂದು ವರ್ಷದ ನಂತರ ಅವುಗಳನ್ನು ಮಾರಾಟ ಮಾಡಿ ಉತ್ತಮ ಲಾಭ ಪಡೆಯುತ್ತಿದ್ದಾರೆ.
ಉತ್ತಮವಾಗಿ ಆರೈಕೆ: ಟಗರುಗಳಿಗೆ ತಮ್ಮ ಜಮೀನಿನಲ್ಲಿಯೇ ಬೆಳೆದ ಮೆಕ್ಕೆಜೋಳ, ತೊಗರಿ ಹೊಟ್ಟು,ಸೇಂಗಾ ಹೊಟ್ಟು, ಕಡಲೆ ಹೊಟ್ಟು ಆಹಾರವಾಗಿ ನೀಡಲಾಗುತ್ತಿದೆ. ವಾತಾವರಣಕ್ಕೆ ಅನುಗುಣವಾಗಿ ಡ್ರೈ ಫುಡ್, ಲಸಿಕೆ, ಕುಶಬಿ ಹಿಂಡಿ, ಸೇಂಗಾ ಹಿಂಡಿ ನೀಡಲಾಗುತ್ತಿದೆ. ವಿಶೇಷವಾಗಿ ಶೆಡ್‌ನಲ್ಲಿ ಸ್ವಚ್ಚತೆ ಕಾಪಾಡುವುದರೊಂದಿಗೆ ಹೆಚ್ಚಿನ ಕಾಳಜಿ ವಹಿಸಿ ಆರೈಕೆ ಮಾಡಲಾಗುತ್ತದೆ.
ಬಕ್ರೀದ್‌ನಲ್ಲಿ ಭಾರಿ ಬೇಡಿಕೆ: 6-8 ತಿಂಗಳಿನ ಸುಮಾರು 15ರಿಂದ 20 ಕೆಜಿ ತೂಕವಿರುವ ಟಗರು ಮರಿಗಳನ್ನು ಸುಮಾರು ಒಂದು ವರ್ಷ ಉತ್ತಮವಾಗಿ ಸಾಕಿ ನಂತರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಾರಿ ಲಕ್ಷಾಂತರ ರೂ. ಲಾಭ ಪಡೆಯಲಾಗುತ್ತದೆ ಎನ್ನುತ್ತಾರೆ ಯುವ ರೈತ ರಾಜುಗೌಡ್ರ.
ಲಕ್ಷಾಂತರ ಲಾಭ: ಈ ವರ್ಷ 8ರಿಂದ 9 ಸಾವಿರ ರೂ.ಗಳಿಗೆ 40 ಟಗರು ಮರಿ ಖರೀದಿ ಮಾಡಿ ಅದನ್ನು ಒಂದು ವರ್ಷ ಸಾಕಿ ಎಲ್ಲ ಖರ್ಚು ವೆಚ್ಚಗಳನ್ನು ತೆಗೆದು ಈ ವರ್ಷ 4 ಲಕ್ಷ ರೂ. ಲಾಭ ಪಡೆದಿದ್ದಾರೆ. ಜತೆಗೆ ಆರು ಎಕರೆ ಜಮೀನಿನಲ್ಲಿ ವಿವಿಧ ರೀತಿಯ ಬೆಳೆ ಮತ್ತು ತರಕಾರಿಗಳನ್ನೂ ಬೆಳೆದು ಇತರರಿಗೂ ಮಾದರಿಯಾಗಿದ್ದಾರೆ.