Advertisement

ಡಿಕೆಶಿ ಬಂಧನ ವಿರೋಧಿಸಿ ಇಂದು ರ್ಯಾಲಿ

11:24 PM Sep 10, 2019 | Team Udayavani |

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ರಾಜ್ಯ ಒಕ್ಕಲಿಗರ ಸಂಘಟನೆಗಳ ಒಕ್ಕೂಟ ಬುಧವಾರ ಪ್ರತಿಭಟನೆ ಹಮ್ಮಿಕೊಂಡಿದೆ. ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದ್ದು, ನಂತರ ಅಲ್ಲಿಂದ ಫ್ರೀಡಂ ಪಾರ್ಕ್‌ ವರೆಗೂ ಶಾಂತಿಯುತ ಮೆರವಣಿಗೆ ಆಯೋಜಿಸಲಾಗಿದೆ. ಪ್ರತಿಭಟನೆ ಹಾಗೂ ಮೆರವಣಿಗೆಗೆ ಕಾಂಗ್ರೆಸ್‌ ಬೆಂಬಲ ವ್ಯಕ್ತಪಡಿಸಿದೆ.

Advertisement

ಪ್ರತಿಭಟನೆ ನಡೆಸುವ ಕುರಿತು ಬೆಂಗಳೂರಿನ ಪಕ್ಷದ ಮೂರು ಜಿಲ್ಲಾ ಘಟಕಗಳ ಪದಾಧಿಕಾರಿಗಳೊಂದಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆಗೆ ಕಾಂಗ್ರೆಸ್‌ ಕೂಡ ಬೆಂಬಲ ನೀಡಲಿದೆ ಎಂದು ತಿಳಿಸಿದರು. ದೆಹಲಿಯಲ್ಲಿ ಸುನಿಲ್‌ ಶರ್ಮಾ ಎನ್ನುವವರು 8.5 ಕೋಟಿ ರೂ. ದೊರೆತಿರುವುದು ತಮ್ಮದು ಎಂದು ಒಪ್ಪಿಕೊಂಡಿದ್ದರೂ, ಡಿ.ಕೆ.ಶಿವಕುಮಾರ್‌ ಅವರನ್ನು ನಿಮ್ಮದೇ ಎಂದು ಒಪ್ಪಿಕೊಳ್ಳಿ ಎಂದು ಇ.ಡಿ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಗೆ ಡಿ.ಕೆ.ಶಿವಕುಮಾರ್‌ ಅಭಿಮಾನಿ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕೇಶವ ರಾಜಣ್ಣ ತಿಳಿಸಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳುವುದು ಬೇಡ: ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ಬುಧವಾರ ಹಮ್ಮಿಕೊಂಡಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಶಾಂತಿಯುತವಾಗಿ ಕಾರ್ಯಕ್ರಮ ನಡೆಸಿ ತಮ್ಮ ಭಾವನೆ, ಕಾಳಜಿ ವ್ಯಕ್ತಪಡಿಸಲಿ. ಕಾನೂನು ಕೈಗೆತ್ತಿಕೊಳ್ಳುವುದು ಬೇಡ ಎಂದು ಹೇಳಿದರು. ದೇಶದ ಸಂವಿಧಾನವನ್ನು ಗೌರವಿಸುವ ಮೂಲಕ ಅದಕ್ಕೆ ಬದ್ಧವಾಗಿರಬೇಕು. ಕಾನೂನು ಪಾಲಿಸಬೇಕು. ಬದಲಿಗೆ ಭಾವನಾತ್ಮಕವಾಗಿ ವಿರೋಧಿಸುವ ಕೆಲಸಕ್ಕೆ ಮುಂದಾಗ ಬಾರದು. ತಮಗೆ ಕಾನೂನಿನ ಮೇಲೆ ವಿಶ್ವಾಸವಿದೆ. ಕಾನೂನನ್ನು ಗೌರವಿಸುತ್ತೇನೆ, ಎಲ್ಲವನ್ನು ಎದುರಿಸುತ್ತೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ವತಃ ಡಿ.ಕೆ.ಶಿವಕುಮಾರ್‌ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.

ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ – ಡಿಕೆಶಿ ಟ್ವೀಟ್‌: ಸಮಾಜದ ನಾನಾ ಕ್ಷೇತ್ರಗಳ ಮುಖಂಡರು, ಸ್ನೇಹಿತರು, ಹಿತೈಷಿಗಳು ನನ್ನನ್ನು ಬೆಂಬಲಿಸಿ ಬೆಂಗಳೂರಿ ನಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸುತ್ತಿರುವುದು ಕೇಳಿ ನನ್ನ ಮನಸ್ಸು ಮತ್ತು ಕಣ್ಣು ತುಂಬಿ ಬಂದಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿ. ಜಾಥಾ, ಸಭೆ ಸಂಪೂರ್ಣ ಶಾಂತಿಯುತವಾಗಿರಲಿ, ಯಾವುದೇ ಕಾರಣಕ್ಕೂ ಶಾಂತಿ ಭಂಗಕ್ಕೆ ಅವಕಾಶ ನೀಡಬೇಡಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಬೇಡಿ. ಈ ಸಂದರ್ಭ ದುರ್ಬಳಕೆ ಮಾಡಿಕೊಳ್ಳಲು ಎದುರಾಳಿ ಗಳಿಗೆ ಅವಕಾಶ ಮಾಡಿಕೊಡಬೇಡಿ. ಇದು ನನ್ನ ಕಳಕಳಿಯ ಮನವಿ. ನಾನು ಮತ್ತೂಮ್ಮೆ ಹೇಳುತ್ತಿದ್ದೇನೆ, ನಿಮ್ಮ ಗೌರವ-ಘನತೆಗೆ ಧಕ್ಕೆ ತರುವಂತಹ ಯಾವುದೇ ಕೆಲಸ ನಾನು ಮಾಡಿಲ್ಲ. ಮಾಡುವುದೂ ಇಲ್ಲ. ನನ್ನ ಮೇಲೆ ನೀವಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಬದ್ಧನಾಗಿದ್ದೇನೆ. ನನಗೆ ದೇವರು, ಈ ನೆಲದ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ.

ಡಿಕೆ ಸಹೋದರರಿಗೆ ಕಾಂಗ್ರೆಸ್‌ ಅಭಯ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಹಿಡಿದು ಕೆಪಿಸಿಸಿವರೆಗೆ ನಿಂತಿದೆ. ಈ ಹಿಂದೆ ಯಡಿಯೂರಪ್ಪ ಕಾನೂನು ಬಾಹಿರವಾಗಿ ಹಣ ಪಡೆದ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಕಾಂಗ್ರೆಸ್‌ ನಾಯಕರು ಅವರನ್ನು ಜೈಲಿಗೆ ಹೋಗಿ ಬಂದವರು ಎಂದು ಆರೋಪಿಸುತ್ತಿದ್ದರು. ಆದರೆ, ಈಗ ಅದೇ ರೀತಿಯ ಆರೋಪ ಹೊತ್ತಿ ರುವ ಡಿ.ಕೆ.ಶಿವಕುಮಾರ್‌ ಇಡಿ ವಶದಲ್ಲಿದ್ದು ಕಾಂಗ್ರೆಸ್‌ಗೆ ಮುಜು ಗರ ಉಂಟು ಮಾಡಿದ್ದರೂ, ಅವರ ಬೆನ್ನಿಗೆ ನಿಲ್ಲುವ ಅನಿವಾರ್ಯತೆ ಎದುರಾಗಿದೆ.

Advertisement

ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರ, ಅಥವಾ ಪಕ್ಷದ ಶಾಸಕರು ಸಂಕಷ್ಟದಲ್ಲಿ ಸಿಲುಕಿಕೊಂಡಾಗ ಅವರ ರಕ್ಷಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರನ್ನೇ ನೆಚ್ಚಿಕೊಂಡಿದ್ದು, ಪಕ್ಷದ ಆದೇಶ ಪಾಲಿಸಿ, ಅನೇಕ ಬಾರಿ ಸಂಕಷ್ಟ ದಿಂದ ಪಾರು ಮಾಡುವಲ್ಲಿ ಶಿವಕುಮಾರ್‌ ಯಶಸ್ವಿಯಾಗಿ ದ್ದರು. ಹೀಗಾಗಿ ಕಾಂಗ್ರೆಸ್‌ ಈ ಸಂದರ್ಭದಲ್ಲಿ ಅವರ ಮೇಲಿನ ಗಂಭೀರ ಆರೋಪದ ಹೊರತಾ ಗಿಯೂ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿ ಸಮರ್ಥನೆಗೆ ನಿಲ್ಲುವಂತಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯೇ ಖುದ್ದು ಡಿ.ಕೆ.ಶಿವಕುಮಾರ್‌ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರನ್ನು ಮಂಗಳವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡು ಧೈರ್ಯ ತುಂಬಿದ್ದಾರೆ. ಶಿವಕುಮಾರ್‌ ಜತೆಗೆ ನಾವಿದ್ದೇವೆ. ಇಡೀ ಪಕ್ಷ ಅವರ ಬೆನ್ನಿಗಿದೆ. ರಾಜಕೀಯ ಹೋರಾಟ ಹಾಗೂ ಕಾನೂನು ಹೋರಾಟದಲ್ಲಿ ಅವ ರೊಂದಿಗಿರುವುದಾಗಿ ನೈತಿಕ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಅಕ್ರಮದ ಆರೋಪ ಎದುರಿ ಸುತ್ತಿದ್ದರೂ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೆಪಿಸಿಸಿ ಅವರ ಬೆನ್ನಿಗೆ ನಿಂತು ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದೆ.

ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಚಿದಂಬರಂ, ಕಾರ್ತಿ ಚಿದಂಬರಂ, ಡಿ.ಕೆ. ಶಿವಕುಮಾರ್‌ ಸೇರಿ ಯಾರೇ ಆದರೂ ಇದೇ ಆಗುತ್ತದೆ. ಇದರಲ್ಲಿ ರಾಜಕೀಯ ಇಲ್ಲ. ಇಡಿ, ಸಿಬಿಐ, ಐಟಿ ಎಲ್ಲವೂ ಸ್ವತಂತ್ರ ಸಂಸ್ಥೆಗಳಾಗಿದ್ದು, ಅವು ಕಾನೂನು ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿವೆ.
-ಎನ್‌. ರವಿಕುಮಾರ್‌ ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next