ವೃತ್ತಿಪರ ಮೇಳದಿಂದ ನಿವೃತ್ತರಾದ ಮೇಲೆ ಆಸಕ್ತರಿಗೆ ಯಕ್ಷ ಶಿಕ್ಷಣ ನೀಡಿದ ಕಲಾವಿದರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆದರೆ ವೃತ್ತಿಪರ ಮೇಳದ ಬಹುಬೇಡಿಕೆಯ ಕಲಾವಿದನಾಗಿರುವಾಗಲೇ ಹಗಲಿನಲ್ಲಿ ಯಕ್ಷಗಾನ ತರಬೇತಿ ನೀಡಿ ಯಕ್ಷಗುರು ಎನಿಸಿಕೊಂಡವರು ನಮ್ಮಲ್ಲಿ ಬೆರಳೆಣಿಕೆ ಯಷ್ಟು ಮಂದಿ ಮಾತ್ರ. ಇವರಲ್ಲಿ ಹನು ಮಗಿರಿ ಮೇಳದಲ್ಲಿ ಕಲಾವಿದರಾಗಿ ರುವ “ನಾಟ್ಯ ಮಯೂರಿ’ ಖ್ಯಾತಿಯ 33ರ ಹರೆಯದ ರಕ್ಷಿತ್ ಶೆಟ್ಟಿ ಪಡ್ರೆ ಪ್ರಮುಖರು. ಕಳೆದ ಹತ್ತು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯ ಅನೇಕ ಕಡೆ ಯಕ್ಷ ಶಿಕ್ಷಣವನ್ನು ನೀಡುತ್ತಿರುವ ಇವರು ಕಿರಿಯ ಪ್ರಾಯದಲ್ಲೇ ಯಕ್ಷಗುರುವಾಗಿ ಹೆಸರನ್ನು ಪಡೆದಿದ್ದಾರೆ. ಇವರ ಯಕ್ಷ ವಿದ್ಯಾರ್ಥಿಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾತ್ರ.
ವಲ್ಲ, ಪುರುಷ ಹಾಗೂ ಮಹಿಳಾ ಉದ್ಯೋಗಿಗಳೂ, ಗೃಹಿಣಿಯರೂ ಇದ್ದಾರೆ. ನಿಟ್ಟೆ, ಎಸ್.ಡಿ.ಎಂ. ವಿದ್ಯಾ ಸಂಸ್ಥೆಗಳಲ್ಲೂ ಯಕ್ಷ ತರಬೇತಿ ನೀಡಿ ಪ್ರಬುದ್ಧ ಹವ್ಯಾಸಿ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಇವರದಾಗಿದೆ. ಪ್ರತೀ ವರುಷ ತನ್ನ ಶಿಷ್ಯಂದಿರನ್ನು ಒಟ್ಟುಗೂಡಿಸಿ “ಯಕ್ಷ ಸಿದ್ಧಿ ಸಂಭ್ರಮ’ ಎಂಬ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನವನ್ನೂ ಆಯೋಜಿಸುತ್ತಾ ಬಂದಿದ್ದಾರೆ. ತಾನು ಕಲಿಸಿದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಯನ್ನು ಪ್ರದರ್ಶಿಸಲು ಅವಕಾಶ ಅಥವಾ ವೇದಿಕೆಯನ್ನು ಒದಗಿಸುವುದೇ ಈ “ಸಿದ್ಧಿ ಸಂಭ್ರಮ’ ದ ಮುಖ್ಯ ಉದ್ದೇಶ.
ಈ ಬಾರಿ ಇವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರ್ಷಗಳಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಂಗಳೂರಿನ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ “ಯಕ್ಷ ಸಿದ್ಧಿ ಸಂಭ್ರಮ – ಸಿದ್ಧಿ ದಶಯಾನ’ ಕಾರ್ಯಕ್ರಮವನ್ನು ವಿನೂತನವಾಗಿ, ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ಯಕ್ಷ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ, ಯಕ್ಷ ಸಿದ್ಧಿ ಪ್ರಶಸ್ತಿ, ಸಾಧಕರಿಗೆ ಸಮ್ಮಾನ ಕಾರ್ಯ ಕ್ರಮಗಳೂ ನಡೆದವು. ಎರಡೂ ದಿನ ರಕ್ಷಿತ್ ಪಡ್ರೆಯವರ ಮುನ್ನೂರಕ್ಕೂ ಮಿಕ್ಕಿದ ಯಕ್ಷ ವಿದ್ಯಾರ್ಥಿಗಳು ಒಟ್ಟು ಸೇರಿ ವೈವಿಧ್ಯತೆಯಿಂದ ಕೂಡಿದ ಯಕ್ಷಕಲಾ ವೈಭವವನ್ನು ಪ್ರದರ್ಶಿಸಿದರು. ಪರಂಪರೆಯ ಪೂರ್ವ ರಂಗ, ದೇವ ಸೇನಾನಿ, ಲೀಲಾಮಾನುಷ ವಿಗ್ರಹ, ದಶಾವತಾರ, ಪಾದ ಪ್ರತೀಕ್ಷಾ, ಧರ್ಮ ದಂಡನೆ ಮುಂತಾದ ಪ್ರಸಂಗಗಳ ಯಕ್ಷಗಾನ ಪ್ರದರ್ಶನ, ಮಹಿಳಾ ಯಕ್ಷಗಾನ ಪಾವನ ಪಕ್ಷಿ, ತೆಂಕು-ಬಡಗು ಯಕ್ಷಗಾನ ನಾಗ ಶ್ರೀ, ಯಕ್ಷಗಾನ ರೂಪಕ ದಾಶರಥಿ ದರ್ಶನ, ಯಕ್ಷ ನವರಸ ವೈಭವ, ವಿಶಿಷ್ಟ ಪರಿಕಲ್ಪನೆಯ “ನೃತ್ಯ ವಾಚನ -ಚಿತ್ರ ಕಥನ’, ವಿನೂತನ ಪ್ರಯೋಗವಾದ ಹಿಮ್ಮಿಂಚು ಯಕ್ಷಗಾನ, “ನೀನೋ ನಾನೋ’ ಯಕ್ಷಗಾನ ವೈವಿಧ್ಯ ಇವೆಲ್ಲವೂ ಯಕ್ಷ ಪ್ರೇಮಿಗಳಿಗೆ ಯಕ್ಷಗಾನದ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾದವು. ಪುಟಾಣಿ ಹಾಗೂ ಯುವ ಕಲಾವಿದರ ಪೈಪೋಟಿಯ ಕುಣಿತ, ಮಾತು ಪ್ರೇಕ್ಷಕರಿಗೆ ಮುದ ನೀಡಿತು. ಮಕ್ಕಳಿಂದ ತೊಡಗಿ ವಯಸ್ಕರ ವರೆಗೆ ಮಹಿಳೆಯರೂ ಸೇರಿದಂತೆ ಅವರವರ ಆಯ-ಕಾಯಕ್ಕೆ ಒಗ್ಗುವ ಆಕರ್ಷಕ ವೇಷಭೂಷಣಗಳೂ ಕಾರ್ಯ ಕ್ರಮದ ಒಟ್ಟಂದವನ್ನು ಹೆಚ್ಚಿಸಿತು.
ಎಲ್ಲರಿಗೂ ಅವಕಾಶ ಕೊಡುವ ಅನಿವಾರ್ಯತೆಯಿಂದಾಗಿ ಹೆಚ್ಚಿನ ಪಾತ್ರಗಳನ್ನು ಎರಡು ಅಥವಾ ಮೂರು ಮಂದಿಗೆ ಹಂಚಿ ಕೊಟ್ಟದ್ದರಿಂದ ಕಲಾ ರಸಿಕರಿಗೂ ವೀಕ್ಷಣೆಯಲ್ಲಿ ವೈವಿಧ್ಯತೆ ದೊರಕಿತು. ಒಟ್ಟಿನಲ್ಲಿ ಎರಡು ದಿನ ನಡೆದ ಸಿದ್ಧಿ ದಶಮಾನೋತ್ಸವ ಸಂಭ್ರಮದಲ್ಲಿ ಅನುಭವಿ ಹಿಮ್ಮೇಳ ಕಲಾವಿದರ ಸಹಕಾರದೊಂದಿಗೆ ಯಕ್ಷ ವಿದ್ಯಾರ್ಥಿಗಳು ನೀಡಿದ ಅತ್ಯುತ್ತಮ ನಿರ್ವಹಣೆಯ ಹಿಂದೆ ಗುರು ರಕ್ಷಿತ್ ಶೆಟ್ಟಿ ಪಡ್ರೆಯವರ ಬೆಲೆ ಕಟ್ಟಲಾಗದ ಶ್ರಮ ಎದ್ದು ಕಾಣುತ್ತಿತ್ತು. ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡುವುದರ ಮೂಲಕ ಯಕ್ಷಗಾನ ಕಲೆಯನ್ನು ಯುವ ಜನಾಂಗಕ್ಕೆ ಪಸರಿಸಿ, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ರಕ್ಷಿತ್ ಶೆಟ್ಟಿ ಪಡ್ರೆಯವರು ಅಮೂಲ್ಯ ಕೊಡುಗೆಯನ್ನೇ ನೀಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ನರಹರಿ ರಾವ್, ಕೈಕಂಬ