Advertisement
ದೇಶದ ಇತಿಹಾಸದಲ್ಲಿ ಅನಿರೀಕ್ಷಿತ ಪರಿವರ್ತನೆಗೆ , ದೇಶದ ಸಂಸ್ಕಾರ ವಿಶ್ವ ಸಹೋದರತೆಯ ಎತ್ತರಕ್ಕೆ ಏರುವುದಕ್ಕೆ “ರಾಖಿ” ಕಾರಣವಾಗುವುದು ಒಂದು ಅದ್ಭುತ ಮನೋಧರ್ಮದ ದರ್ಶನ. ಅದೇ ಭಾರತೀಯ ಜೀವನ ವಿಧಾನದ ವೈಶಾಲ್ಯತೆ . ಇದೇ ‘ಭ್ರಾತೃ – ಭಗಿನಿ ಬಾಂಧವ್ಯ ಬಂಧನ’.
Related Articles
Advertisement
ಸಹೋದರ ಭಾವದ ವೈಶಾಲ್ಯತೆ
ಒಡಹುಟ್ಟಿದವರೊಂದಿಗೆ ಸಮಾಜದ ‘ಸ್ತ್ರೀ’ಯರೆಲ್ಲ ತನ್ನ ಸೋದರಿಯರು ಎಂಬ ಉದಾತ್ತ ಭಾವದೊಂದಿಗೆ ಚಿತ್ತಶುದ್ಧಿಯ ಜೀವನಕ್ಕೆ “ರಾಖೀಬಂಧನ” ಇಂಬು ಕೊಡುತ್ತದೆ. ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ತ್ರೀಯ ಮಾನ – ಪ್ರಾಣಗಳ ರಕ್ಷಣೆಗೆ ಪ್ರಾಣಾರ್ಪಣೆಗೂ ಸಿದ್ಧನಾಗುವ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ರಕ್ಷಾ ಬಂಧನ – ರಾಖೀ ಬಂಧನ ಆಚರಿಸಲ್ಪಡುತ್ತದೆ .
‘ರಕ್ಷಾಬಂಧನ’ಕ್ಕೆ ಮೀಸಲಾದ ದಿನ ಶ್ರಾವಣದ ಹುಣ್ಣಿಮೆ. ಪ್ರತಿ ಹುಣ್ಣಿಮೆಯೂ ಚಂದ್ರ ಪೂರ್ಣ ವೃದ್ಧಿಯೊಂದಿಗೆ ರಾರಾಜಿಸುವ ದಿನ. ಚಂದ್ರ ಮನಃಕಾರಕನಾದುದರಿಂದ, ಹುಣ್ಣಿಮೆಯೇ ಮನಸ್ಸಿನ ಮೇಲೆ ಪೂರ್ಣ ಪ್ರಮಾಣದ ಪರಿಣಾಮ ಬೀರುವ ಕಾಲವಾಗಿರುವುದರಿಂದ ಮನಸ್ಸಿನ ಭಾವ ಸಂಬಂಧಿಯಾದ ನಿರ್ಧಾರಕ್ಕೆ ಸಕಾಲವೆಂದು ತಿಳಿಯಬಹುದಲ್ಲ.
ಶ್ರಾವಣ ಮಾಸವೂ ಒಂದು ಪ್ರೇರಣೆ ಸಹಜವಾಗಿ ಒದಗುವ ಶ್ರಾಯ. ನಾಡಿಗೆ ,ಬೀಡಿಗೆ ಬರುವ ಶ್ರಾವಣ ಮನಸ್ಸಿಗೆ ಬಾರದೆ ಇದ್ದೀತೆ ?, ಅದೇ ಶ್ರಾವಣದ ಕವಿ ಬೇಂದ್ರೆಯವರ “ಬಂತು ಶ್ರಾವಣ…” ಲವಲವಿಕೆ ತುಂಬಿದ ಉದ್ಗಾರ. ಇದೇ ಭಾವಗಳು ಬಿರಿಯುವ, ಸುಗಂಧ ಬೀರುವ ಸುಸಮಯ.
ರಾಖೀ ಎಷ್ಟೇ ವೈವಿಧ್ಯದ್ದಾದರೂ, ರಂಗುರಂಗಿನದ್ದಾದರೂ ಇದರ ಬಂಧನ ಪ್ರಕ್ರಿಯೆ ದಾರದ ಮೂಲಕ ತಾನೇ? ಈ ದಾರ ಒಂದು ಕರ್ತವ್ಯಕ್ಕೆ, ಜವಾಬ್ದಾರಿಗೆ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ.
ವ್ರತ, ಪೂಜೆ, ಮಹೋತ್ಸವ, ಮಹಾಯಾಗ, ಮದುವೆ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ ‘ಕಂಕಣಬಂಧ’ದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ದೇಶದಲ್ಲಿ ರೂಢಿಯಲ್ಲಿದೆ .ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ ‘ನಾಂದೀ’ . ಸತ್ಕಾರ್ಯ ಆರಂಭದಿಂದ ಸಮಾರೋಪ ಪರ್ಯಂತ ಕಂಕಣಬಂಧ ಕಟ್ಟಿಸಿಕೊಳ್ಳುವವರು ದೀಕ್ಷಾಬದ್ಧರೆಂದು ಅರ್ಥ. ಅನ್ಯ ಕಾರ್ಯಗಳ ಬಗ್ಗೆ ಆಲೋಚಿಸದೆ ಸಂಪೂರ್ಣ ಸಂಕಲ್ಪಿತ ಸತ್ಕಾರ್ಯದಲ್ಲೇ ನಿರತರಾಗಿಬೇಕೆಂಬುದು ರಕ್ಷಾ ಬಂಧನದ ಮುಖ್ಯ ಉದ್ದೇಶವಾಗಿದೆ.
ಕೆ.ಎಲ್.ಕುಂಡಂತಾಯ