Advertisement
ಸೋದರ-ಸೋದರಿಯರ ನಡುವಿನ ನಂಬಿಕೆ, ಭರವಸೆ, ಭ್ರಾತೃ ಪ್ರೇಮ ಉಜ್ವಲಗೊಳಿಸುವ ‘ರಕ್ಷಾ ಬಂಧನ ಹಬ್ಬ’ವು ಪ್ರಮುಖವಾದುದು. ಅವನಿಗೆ ಅವಳ ಬಗೆಗಿರುವ ಕಾಳಜಿ, ಅವಳಿಗೆ ಅವನ ಬಗ್ಗೆ ಇರುವ ಅಕ್ಕರೆ, ನವಿರಾದ ಬಾಂಧವ್ಯವೇ ಸೋದರ – ಸೋದರಿಯರ ಸಂಬಂಧ. ಮೊಗೆದಷ್ಟು ಬರಿದಾಗದ ನಿಷ್ಕಲ್ಮಶ ಪ್ರೀತಿಯ ದ್ಯೋತಕವೇ ಈ ರಾಖಿ. ಸೋದರಿಯ ಬಗ್ಗೆ ಸದಾ ಕಾಳಜಿ ವಹಿಸುವ ಸೋದರನ ಬಾಳು ಸುಖ, ಸಮೃದ್ಧವಾಗಿರಲಿ. ಆತನಿಗೆ ಶ್ರೇಯಸ್ಸನ್ನು ಕೋರಿ, ನೈತಿಕ ಬೆಂಬಲ ಸೂಚಕವಾಗಿ ರಾಖಿ ಕಟ್ಟುವುದು ಹಬ್ಬದ ಆಶಯ.
ಅಕ್ಕ – ತಂಗಿಯರು ತಮ್ಮ ಅಣ್ಣ – ತಮ್ಮಂದಿರುಗಳ ಕೈಗೆ ಕಟ್ಟುವ ನೂಲಿಗೆ ರಕ್ಷಾ ಬಂಧನ ಎನ್ನುತ್ತಾರೆ. ಪ್ರತಿ ವರ್ಷ ನೂಲ ಹುಣ್ಣಿಮೆಯಂದು ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ತವರಿಗೆ ಬಂದು ತಮ್ಮ ಅಣ್ಣ- ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ಹಳ್ಳಿ ಸಂಪ್ರದಾಯದಂತೆ ಮರದ ಮಣೆಯ ಮೇಲೆ ಸಹೋದರರನ್ನು ಕುಳ್ಳಿರಿಸಿ, ಅನಂತರ ಅವರ ಹಣೆಗೆ ವಿಭೂತಿ, ಕುಂಕುಮದ ತಿಲಕ ಇಡುತ್ತಾರೆ. ಬಲಗೈಗೆ ರಾಖಿ ಕಟ್ಟಿ, ಆರತಿ ಬೆಳಗುತ್ತಾರೆ. ನಮ್ಮ ಕಷ್ಟದಲ್ಲಿ ಪೊರೆಯುತ್ತಾ ಬಂದ ಸಹೋದರರ ಬಾಳೆಲ್ಲಾ ಸುಖಕರವಾಗಿರಲಿ ಎಂದು ಹಾರೈಸುತ್ತಾ ಬಾಯಿಗೆ ಸಿಹಿ ನೀಡುತ್ತಾರೆ.
Related Articles
Advertisement
ಇಂದು ಕೆಲವು ವಿದ್ಯಾರ್ಥಿನಿಯರು ಹುಡುಗರ ಕಾಟದಿಂದ ತಪ್ಪಿಸಿಕೊಳ್ಳಲು ರಾಖೀ ಕಟ್ಟಿದರೆ, ಕೆಲವು ಹುಡುಗರು ಹುಡುಗಿಯ ಹತ್ತಿರ ಮಾತನಾಡಲು ರಾಖೀ ಕಟ್ಟಿಸಿಕೊಳ್ಳುವವರಿದ್ದಾರೆ. ಈ ರೀತಿಯಾಗಿ ಒಂದು ದಿನದ ಮಟ್ಟಿಗೆ ಮಾತ್ರ ರಾಖೀ ಸಹೋದರ – ಸಹೋದರಿಯರಾಗುವ ಈಗಿನ ಆಚರಣೆ ವಿಪರ್ಯಾಸ.
‘ಒಂದೇ ಒಂದೇ ನಾವೆಲ್ಲರೂ ಒಂದೇಈ ದೇಶದೊಳೆಲ್ಲಿದ್ದರು ಭಾರತ ನಮಗೊಂದೆ…’ ಎಂಬ ಹಾಡಿನಲ್ಲಿ ಡಾ| ಜಿ.ಎಸ್. ಶಿವರುದ್ರಪ್ಪ ಅವರು ಭಾರತದಲ್ಲಿ ಹಲವಾರು ಭಿನ್ನತೆಗಳು ಇದ್ದರೂ ನಾವೆಲ್ಲರೂ ಒಂದೇ ಎಂದು ಸಾರಿದ್ದಾರೆ. ‘ಎಲೆಗಳು ನೂರಾರು ಭಾವದ ಎಲೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು…’ ಎಂಬ ಕವನದಲ್ಲಿ ಎಚ್.ಎಸ್. ವೆಂಕಟೇಶ ಮೂರ್ತಿಗಳು ಭಾವನೆಗಳನ್ನು ಹೊಂದಿರುವ ಮನಸ್ಸುಗಳು ನೂರಾರು. ಆದರೆ ಭಾವನೆ ಮಾತ್ರ ಒಂದೇ. ಅದುವೇ ನಾವೆಲ್ಲರೂ ಒಂದೇ. ನಾವು ಭಾರತೀಯರು. ಅದೇ ರೀತಿಯಲ್ಲಿ ರಾಖಿಯಲ್ಲಿ ಎಳೆಗಳು ಹಲವು. ಅವುಗಳನ್ನು ಒಂದೇ ದಾರದಿಂದ ಬಂಧಿಸಲಾಗುತ್ತದೆ. ಇದು ರಾಷ್ಟ್ರೀಯ ಭಾವನೆಯ ಸಂಕೇತ. ‘ವೇಷ ಬೇರೆ ಭಾಷೆ ಬೇರೆ ದೇಶವೊಂದೆ ಭಾರತ’ ಎಂಬಂತೆ ಭಾರತದ ನಾನಾ ಭಾಗಗಳಲ್ಲಿ ವಾಸಿಸುವ ಜನರ ವೇಷ ಭೂಷಣ, ಭಾಷೆ, ಜೀವನ ವಿಧಾನ ಇತ್ಯಾದಿ ಬೇರೆ ಬೇರೆಯಾದರೂ ಈ ಭಿನ್ನತೆಯನ್ನು ರಾಷ್ಟ್ರೀಯತೆ ಎಂಬ ಏಕ ಸೂತ್ರದಲ್ಲಿ ಕಟ್ಟಲಾಗಿದೆ. ಅಂತೆಯೇ ರಾಖಿಯ ಬಣ್ಣ, ಆಕಾರ, ಕಟ್ಟುವ ವಿಧಾನ, ಗಾತ್ರದಲ್ಲಿ ವ್ಯತ್ಯಾಸ ಇದ್ದರೂ ಅವುಗಳು ಸಾರುವ ಸಂದೇಶ ಒಂದೇ. ಬಂಧನವು ನಮಗೆ ಬೇಡ, ನಾವು ಮುಕ್ತರಾಗೋಣ ಎಂಬ ಆಕಾಂಕ್ಷೆಯು ಸಹಜವೇ. ಆದರೆ ರಕ್ಷಾ ಬಂಧನವು ಇನ್ನೊಬ್ಬರು ನಮ್ಮ ಮೇಲೆ ಹೇರಿದ ಬಂಧನವಲ್ಲ, ದಾಸ್ಯದ ಸಂಕೋಲೆಯೂ ಅಲ್ಲ. ನಮ್ಮ ಪವಿತ್ರ ಮಾತೃಭೂಮಿ ನಮಗೆ ನೀಡಿರುವ ಮಧುರ ಬಾಂಧವ್ಯ, ಭ್ರಾತೃತ್ವದ ಸಂಕೇತ. ಹಿನ್ನೆಲೆ
ಎಲ್ಲ ಹಬ್ಬಗಳಂತೆ ರಕ್ಷಾ ಬಂಧನವು ಹಲವಾರು ಕಥೆಗಳನ್ನು ಆಧರಿಸಿವೆ. ಒಮ್ಮೆ ಇಂದ್ರನು ರಾಕ್ಷಸರೊಂದಿಗೆ ಯುದ್ಧದಲ್ಲಿ ಸೋಲುವ ಲಕ್ಷಣ ಕಂಡಾಗ ಬೃಹಸ್ಪತಿಯ ಮೊರೆ ಹೋಗುತ್ತಾನೆ. ಬೃಹಸ್ಪತಿಯ ಸಲಹೆಯಂತೆ ಇಂದ್ರಾಣಿಯು ಶ್ರಾವಣ ಹುಣ್ಣಿಮೆಯಂದು ರೇಷ್ಮೆ ದಾರವನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ಅನಂತರ ಇಂದ್ರನು ರಕ್ಕಸ ರಾಜನನ್ನು ಸೋಲಿಸುತ್ತಾನೆ. ರಜಪೂತರಲ್ಲಿ ಯುದ್ಧಕ್ಕೆ ಹೊರಟ ಗಂಡು ಮಕ್ಕಳಿಗೆ ಕುಂಕುಮದ ತಿಲಕ ಇಟ್ಟು, ರೇಷ್ಮೆ ದಾರ ಕಟ್ಟಿ ಶುಭಹಾರೈಸುತ್ತಿದ್ದ ಬಗ್ಗೆ ಕಥೆಗಳ ಉಲ್ಲೇಖವಿದೆ. ಕುಂತೀ ದೇವಿಯು ವ್ರತ ಮಾಡಿ ತನ್ನ ಮಕ್ಕಳಿಗೆ ಕಟ್ಟಿದ ರಕ್ಷೆ ಅವರಿಗೆ ಶ್ರೀರಕ್ಷೆಯಾಗಿ ಪರಿಣಮಿಸಿದೆ ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಅನೇಕ ಐತಿಹಾಸಿಕ ಘಟನೆಗಳ ಉಲ್ಲೇಖವು ರಾಖಿ ಸಂಬಂಧವಾಗಿ ಕೇಳಿ ಬರುತ್ತವೆ. ಉತ್ತರ ಭಾರತದಲ್ಲಿನ ಈ ಪ್ರಸಿದ್ಧ ಹಬ್ಬ ಈಗ ದಕ್ಷಿಣ ಭಾರತದಲ್ಲೂ ಸಾಕಷ್ಟು ಪ್ರಚಲಿತವಾಗಿದೆ. ರಾಷ್ಟ್ರೀಯತೆಯ ಸಂಕೇತ
ರಾಖಿಯೊಂದರಲ್ಲಿ ಇರುವ ಹಲವಾರು ನೂಲಿನ ಎಳೆಗಳು ಭಾರತದಲ್ಲಿರುವ ಬೇರೆ ಬೇರೆ ಧರ್ಮ, ಜಾತಿ, ಜನಾಂಗ, ಸಂಸ್ಕೃತಿ, ರಾಜ್ಯ, ಭೌಗೋಳಿಕ ಭಿನ್ನತೆ ಮಂತಾದವುಗಳನ್ನು ಪ್ರತಿನಿಧಿಸುತ್ತವೆ. ಅವುಗಳನ್ನು ಒಂದೇ ದಾರದಲ್ಲಿ ಕಟ್ಟಿರುವುದು ರಾಷ್ಟ್ರೀಯತೆ ಎನ್ನುವ ಏಕತತ್ವದಡಿ ಭಾರತೀಯರೆಲ್ಲರೂ ಒಂದೇ ಎಂಬ ಭಾವವನ್ನು ಸೂಚಿಸುವುದು. ಗಣೇಶ ಕುಳಮರ್ವ