Advertisement

ರಕ್ಷಾ ಬಂಧನ ಜ್ಯಾತ್ಯತೀತ ಆಚರಣೆಯಾಗಲಿ

11:58 AM Aug 08, 2017 | Team Udayavani |

ಬೆಂಗಳೂರು: ರಕ್ಷಾಬಂಧನ ಕೇವಲ ಒಡಹುಟ್ಟಿದವರ ನಡುವಿನ ಆಚರಣೆಗೆ ಸೀಮಿತವಾಗದೆ, ಸುತ್ತಲಿನ ಪರಿಸರದವರನ್ನು ಪ್ರೀತಿಯಿಂದ ನೋಡಿಕೊಳ್ಳುವ ಹಬ್ಬವಾಗಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಶ್ರೀರಾಮಪುರದಲ್ಲಿರುವ ಭಾರತೀಯ ವಿದ್ಯಾಭವನ ಬಿಬಿಎಂಪಿ ಶಾಲೆಯಲ್ಲಿ ಸೋಮವಾರ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಾ ಬಂಧನು ಜಾತಿ, ಮತ, ಧರ್ಮ ಭೇದವಿಲ್ಲದ ಆಚರಣೆಯಾಗಬೇಕು. ಸಮಾಜದಲ್ಲಿರುವ ಎಲ್ಲರೂ ಅಣ್ಣ ತಮ್ಮಂದಿರಾಗಿ ಒಂದು ಕುಟುಂಬದ ರೀತಿಯಲ್ಲಿ ಬದುಕು ನೆಡೆಸಲು ಈ ಹಬ್ಬ ಪ್ರೇರಣೆಯಾಗಲಿ ಎಂದರು.

ಅಣ್ಣ , ತಂಗಿಯನ್ನು ಸದಾ ಕಾಪಾಡುತ್ತಾನೆ ಎಂಬ ಸಂದೇಶವನ್ನು ರಕ್ಷಾಬಂಧನ ಸಾರುತ್ತದೆ. ವರ್ಷಕ್ಕೊಮ್ಮೆ ತಂಗಿ, ಅಣ್ಣನಿದ್ದಲ್ಲಿ ತೆರಳಿ ಬಾಂಧವ್ಯ ಪುನಃಚೇತನಗೊಳಿಸುವ ರಕ್ಷಾ ಬಂಧನದ ಆಚರಣೆ ನಾಡಿನುದ್ದಕ್ಕೂ ನಡೆಯಬೇಕು. ಉತ್ತರ ಭಾರತದಲ್ಲಿ ರಕ್ಷಾಬಂಧನವನ್ನು ಪ್ರಮುಖ ಹಬ್ಬದ ರೀತಿಯಲ್ಲಿ ಪ್ರತಿ ಮನೆಯಲ್ಲೂ ಆಚರಿಸುತ್ತಾರೆ. ಇತ್ತೀಚಿನ ವರ್ಷದಲ್ಲಿ ದಕ್ಷಿಣ ಭಾರತಕ್ಕೂ ಇದು ವ್ಯಾಪಿಸಿರುವುದು ಉತ್ತಮ ಬೆಳವಣಿಗೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಸಮುದಾಯದವರು ಆಚರಿಸುವ ಪ್ರತಿಯೊಂದು ಹಬ್ಬದಲ್ಲೂ ಒಂದೊಂದು ವಿಶೇಷ ಸಂದೇಶ ಇದ್ದೇ ಇರುತ್ತದೆ. ಹಾಗೆಯೇ ಒಳ್ಳೆಯ ವಿಚಾರವು ತುಂಬಿಕೊಂಡಿದೆ. ಪ್ರತಿಯೊಬ್ಬರೂ ಉತ್ತಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸಾಗಬೇಕು ಎಂಬ ಸಲಹೆ ನೀಡಿದರು.

ನಿವೃತ್ತ ರಾಜ್ಯಪಾಲ ಎಂ.ರಾಮಾಜೋಯಿಸ್‌ ಮಾತನಾಡಿ, ರಕ್ಷಾಬಂಧನವು ಮತ ನಿರಪೇಕ್ಷ ಹಬ್ಬವಾಗಿದೆ. ಜಾತಿ, ಧರ್ಮ, ಪಂಥ, ಪಂಗಡ ಮೀರಿ ಎಲ್ಲರೂ ನಮ್ಮವರು ಎಂಬ ಭಾವನೆಯನ್ನು ಸಾರುತ್ತಿದೆ. ಭಾರತ ಮಾತೆಯು ದೇಶದ 130 ಕೋಟಿ ಮಕ್ಕಳನ್ನು ಪರಸ್ಪರ ಸಮಾನತೆಯಿಂದ ಕಾಣುವಂತೆ ನಾವೆಲ್ಲರೂ ಅದೇ ಭಾವದೊಂದಿಗೆ ಸಾಮರಸ್ಯದಿಂದ ಬದುಕಬೇಕು. ನಾವೆಲ್ಲರೂ ಒಂದು ಎಂಬ ಸಹೋದರತ್ವದ ಗುಣ ರೂಢಿಸಿಕೊಳ್ಳಬೇಕು ಎಂದರು.

Advertisement

ಸಮಾಜದಲ್ಲಿ ಸದ್ಯ ನಡೆಯುತ್ತಿರುವ ನೀರಿನ ಜಗಳ, ಭಾಷಾ ಜಗಳ, ಜಾತಿ ನಿಂದನೆ, ಅಸಮಾನತೆ ಮೊದಲಾದ ವಿಚಾರಗಳನ್ನು ನಿವಾರಿಸಲು ರಕ್ಷಾಬಂಧನ ರಾಮಬಾಣವಾಗಿದೆ. ಆತ್ಮೀಯತೆಯಿಂದ ರಕ್ಷೆ ಕಟ್ಟಿ ಬಂಧುತ್ವ ಭಾವನೆ ಬೆಳೆಸಿಕೊಳ್ಳಬೇಕು. ನಮ್ಮ ಸ್ವಯಂ ಕೃತ ಅಪರಾಧವನ್ನು ಕಡಿಮೆ ಮಾಡುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿಗಳು ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡರು. ಹಾಗೆಯೇ ಅತಿಥಿಗಳಿಗೂ ರಕ್ಷೆ ಕಟ್ಟಲಾಯಿತು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌, ಭಾರತೀಯ ವಿಕಾಸ ಪರಿಷದ್‌ ಅಧ್ಯಕ್ಷ ಬಿ.ಪಿ.ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next