Advertisement

ರಕ್ಷಾಬಂಧನ ಒಂದು ಕೇವಲ ಆಚರಣೆಯಲ್ಲ; ಹೀಗಿದೆ ಅದರರ್ಥ

12:15 PM Aug 03, 2020 | Karthik A |

ಹಬ್ಬಗಳ  ಮಹತ್ವವನ್ನು ಅರಿತು ಆಚರಿಸಿದಾಗ ಅದರ ನೈಜ ಆಶಯ ಅರ್ಥವಾಗುತ್ತದೆ.

Advertisement

ಪ್ರತೀ ಹಬ್ಬದ ಹಿಂದೆ ಅದರದೇ ವೈಶಿಷ್ಟ್ಯಇದೆ. ‘ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎಂಬ ಮಾತಿದೆ.

ಪುರಾಣ, ಚರಿತ್ರೆ ಇತಿಹಾಸವನ್ನು ಓದಿ ಅರ್ಥೈಸಿಕೊಳ್ಳಬೇಕಾಗಿದೆ.  ಇದು ಇಂದಿನ ಅಗತ್ಯತೆಯೂ ಹೌದು.

ಶ್ರೀಕೃಷ್ಣನ ಕೈಗೆ ಗಾಯವಾಗಿ ನೆತ್ತರು ಸುರಿದಾಗ, ತನ್ನ ಸೀರೆಯ ಅಂಚನ್ನು ಹರಿದು ಶ್ರೀಕೃಷ್ಣನ ಕೈಮಣಿಕಟ್ಟಿಗೆ ಪಟ್ಟಿ ಕಟ್ಟಿದ್ದು ದ್ರೌಪದಿ. ಪ್ರತಿಯಾಗಿ ಶ್ರೀಕೃಷ್ಣ ಆಕೆಯ ವಸ್ತ್ರಾಪಹರಣದ ವೇಳೆ ನೆರವಿಗೆ ಬಂದ ಎಂಬ ಉಲ್ಲೇಖ ಮಹಾಭಾರತದಲ್ಲಿದೆ.

ಇತಿಹಾಸದಲ್ಲಿಯೂ ಇಂತಹ ಹಲವಾರು ಉದಾಹರಣೆಗಳು ಸಿಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಎಂದರೆ ಅಲೆಗ್ಸ್ಯಾಂಡರ್ ದಿ ಗ್ರೇಟ್ ಭಾರತದ ಮೇಲೆ ದಂಡೆತ್ತಿ ದಾಳಿ ಮಾಡಲು ಬರುತ್ತಾನೆ. ಅವನನ್ನು ಹಲವು ರಾಜರುಗಳು ಎದುರಿತ್ತಾರೆ. ಅವರ ಪೈಕಿ ಪೋರಸ್ ಎಂಬ ಬಲಿಷ್ಠ ದೊರೆ ಅಲೆಗ್ಸ್ಯಾಂಡರ್ ಗೆ ಪ್ರಬಲ ಎದುರಾಳಿಯಾಗಿದ್ದನು. ‘ಯುದ್ಧದಲ್ಲಿ ತನ್ನ ಗಂಡನ ಕೊಲ್ಲದಿರು’ ಎಬ ಸಂದೇಶದೊಂದಿಗೆ ಪೋರಸ್ ಗೆ ದಾರವೊಂದನ್ನು ಅಲೆಗ್ಗ್ಸಾಂಡರ್ ಪತ್ನಿ ರೋಕ್ಸಾನ ಕಳುಹಿಸಿಕೊಡುತ್ತಾಳೆ.

Advertisement

ಇನ್ನೊಂದು ಉಲ್ಲೇಖದಲ್ಲಿ ಬಹದ್ದೂರ್  ಷಾ ನ ವಿರುದ್ಧ ಹೋರಾಡಲು ಚಿತ್ತೂರಿನ ವಿಧವೆ ರಾಣಿ ಕರ್ಣಾವತಿ ರಕ್ಷೆಯ ದಾರವನ್ನ ಮೊಘಲ್ ಚಕ್ರವರ್ತಿ ಹುಮಾಯೂನನಿಗೆ ಕಳುಹಿಸಿ ಸಹಾಯ ಬೇಡುವ ನಿದರ್ಶನ ಚರಿತ್ರೆಯಲ್ಲಿದೆ. ಇಷ್ಟೇ ಅಲ್ಲದೇ ವೀರತನಕ್ಕೆ ಹೆಸರಾದ ರಜಪೂತರು ಯುದ್ಧಕ್ಕೆ ಹೊರಟಾಗ ಅವರ ಪತ್ನಿಯಿಂದ ರಕ್ಷಾ ದಾರವೊಂದನ್ನ ಕೈಗೆ ಕಟ್ಟಿಸಿಕೊಳ್ಳುವ ವಾಡಿಕೆಯಿತ್ತಂತೆ. ಇವೆಲ್ಲವೂ ಇಂದು ಆಚರಿಸಲಾಗುತ್ತಿರುವ ರಕ್ಷಾ ಬಂಧನದ ಸಾರವನ್ನ ಸಾರುವ ಕಥೆಗಳು.

ದೇಶದೆಲ್ಲೆಡೆ ಸಂಭ್ರಮ ಸಡಗರದಿ ಪವಿತ್ರ ರಾಖಿ ಹಬ್ಬ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ, ಕಜರಿ ಪೌರ್ಣಿಮೆ ಆಚರಣೆ ಪ್ರಸಿದ್ಧಿ. ಗೋಧಿ, ಬಾಲ್ರಿ ಕೃಷಿ ಚಟುವಟಿಕೆಗಳು ಆರಂಭವಾಗುವ ದಿನ ಇದಾಗಿದೆ. ಪಶ್ಚಿಮ ಬಂಗಾಲದಲ್ಲಿ, ಸಮುದ್ರ ರಾಜನಿಗೆ ಈ ಪೌರ್ಣಮಿ ಆಚರಣೆಯಂದು ತೆಂಗಿನಕಾಯಿ ನಾರಿಯಲ್ ಅರ್ಪಿಸಲಾಗುತ್ತದೆ. ನಮ್ಮ ದಕ್ಷಿಣ ಭಾರತದಲ್ಲಿ ಶ್ರಾವಣ ಪೌರ್ಣಮಿಯಂದು ನಡೆಯೋ ಮಹತ್ವಪೂರ್ಣವಾದ ಆಚರಣೆಯೇ ರಕ್ಷಾಬಂಧನ ಹಬ್ಬ.

ಈ ದಿನದಂದು ಸಹೋದರರ ಶ್ರೀರಕ್ಷೆ ತನ್ನ ಮೇಲಿರಲೆಂಬ ಆಶಯದೊಂದಿಗೆ, ಸಹೋದರಿಯು ತನ್ನ ಸಹೋದರರಿಗೆ ಆರತಿ ಮಾಡಿ ಬಲಗೈಗೆ  ರಕ್ಷೆಯ ಪ್ರತೀಕವಾಗಿ ಕೇಸರಿ ದಾರ ಕಟ್ಟಿ, ಸಿಹಿ ತಿನ್ನಿಸುವುದು ಪ್ರತೀತಿ. ಕಟ್ಟುವುದು ಕೇವಲ ಒಂದು  ದಾರ, ಒಂದು ದಿನದ ಆಚರಣೆ ಇರಬಹುದು. ದಾರ ಕೆಲವೇ ದಿನ ಕೈಯಲ್ಲಿರಬಹುದು… ಆದರೆ ಮಲ್ಲಿಗೆಯ ಕಂಪು ಊರೆಲ್ಲ ಪಸರಿಸುವಂತೆ, ಅಣ್ಣ ತಂಗಿಯ ಸಂಬಂಧವನ್ನ  ಜಗತ್ತಿಗೇ ಸಾರುವ, ನವಿರಾದ, ಮಧುರವಾದ ಈ ಪವಿತ್ರ ಬಾಂಧವ್ಯಕ್ಕೆ ಸರಿಸಾಟಿ ಇನ್ಯಾವುದೂ ಇರಲಾರದು. ರಾಖಿ ಕಟ್ಟೋಣ , ಸಿಹಿ ಹಂಚೋಣ, ಇಡೀ ಜಗತ್ತಿಗೆ ಪವಿತ್ರ ಸಂದೇಶ ಸಾರೋಣ.

 ಮಲ್ಲಿಕಾ ಕೆ. ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next