ಮುದ್ದೇಬಿಹಾಳ: ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಕರ್ತವ್ಯ ಲೋಪ, ಗ್ರಾಪಂ ವ್ಯಾಪ್ತಿಯಡಿ ಬರುವ ಕಪನೂರ ಗ್ರಾಮದ ಡಾ| ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಗೊತ್ತುಪಡಿಸದೇ ಕಾಲಹರಣ ಮಾಡುತ್ತಿರುವುದನ್ನು ಖಂಡಿಸಿ ಕಪನೂರ ಗ್ರಾಮದ ದಲಿತ ಸಮುದಾಯದವರು ಗುರುವಾರ ರಕ್ಕಸಗಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಗ್ರಾಪಂನಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೆ ಕರ್ತವ್ಯ ಪ್ರಜ್ಞೆ ಇಲ್ಲ. ಸಮಯಕ್ಕೆ ಸರಿಯಾಗಿ ಪಂಚಾಯಿತಿಗೆ ಬಾರದೇ ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಊರಲ್ಲೇ ಇದ್ದರೂ ಕಚೇರಿಗೆ ಬರದೇ ಕಾಲಹರಣ ಮಾಡುತ್ತಾರೆ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆದು ತೊಂದರೆಗೀಡಾಗುತ್ತಿದ್ದಾರೆ. ಈ ಬಗ್ಗೆ ಜಿಪಂ ಸಿಇಒ, ತಾಪಂ ಇಒ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು.
ಗ್ರಾಪಂ ವತಿಯಿಂದ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳಿಗೆ, ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಸಿಬ್ಬಂದಿ ಕಚೇರಿಗೆ ಬಂದರೂ ಒಂದೆರಡು ತಾಸು ಮಾತ್ರ ಕಚೇರಿಯಲ್ಲಿದ್ದು ನೆಪ ಹೇಳಿ ಹೊರಗೆ ಹೋಗುತ್ತಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅಖೀಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ಅಧ್ಯಕ್ಷ ಪರಶುರಾಮ ಕಪನೂರ ಎಚ್ಚರಿಸಿದರು.
ದಲಿತರ ಬಗ್ಗೆ ನಿರ್ಲಕ್ಷ್ಯ:
ಕಪನೂರ ಗ್ರಾಮದಲ್ಲಿ ಮಾದಿಗ ಸಮಾಜದವರು ವಾಸಿಸುವ ಪ್ರದೇಶದ ಹಿಂಬದಿಯಲ್ಲಿ ಅನಧಿಕೃತವಾಗಿ ಕೆರೆ ಮಾದರಿಯಲ್ಲಿ ದೊಡ್ಡ ಹೊಂಡ ನಿರ್ಮಿಸಲಾಗಿದೆ. ಇಲ್ಲಿ ಕಪನೂರ, ಬಂಗಾರಗುಂಡ ಗ್ರಾಮಗಳ ಸಮಸ್ತ ಕೊಳಚೆ ನೀರು ಸಂಗ್ರಹಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ಅಂದಾಜು 25 ಕುಟುಂಬಗಳು ವಾಸಿಸುತ್ತಿದ್ದು, ಕೊಳಚೆಯಿಂದ ರೋಗ ಮತ್ತು ಕ್ರಿಮಿಕೀಟಗಳು ಹಾವಳಿ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಮನವಿ ನೀಡಿದರೂ ಪಂಚಾಯಿತಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಪರಶುರಾಮ ದೂರಿದರು.
ಈ ಸಂದರ್ಭದಲ್ಲಿ ಮುತ್ತಪ್ಪ ಕಪನೂರ, ಬಸವರಾಜ ಬಡಕುರಿ, ಮಾದೇವಪ್ಪ ಕನಪನೂರ, ಸಂಗಪ್ಪ ಕಪನೂರ, ಹುಲಗಪ್ಪ ಕಪನೂರ, ದುರ್ಗಪ್ಪ ಬಲದಿನ್ನಿ, ಹನಮಂತ ಕಪನೂರ ಸೇರಿದಂತೆ ಇತರರಿದ್ದರು.