ಮುಂಬಯಿ: ಬಿಗ್ ಬಾಸ್ ಖ್ಯಾತಿ, ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.
ಮಂಗಳವಾರ(ಮೇ.14 ರಂದು) ಅವರು ಮುಂಬಯಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
‘ಗಂಭೀರ ಹೃದಯ ಸಮಸ್ಯೆ’ಯಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು, ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಮುಂದಿನ 5-6 ದಿನಗಳ ಕಾಲ ವಿಶ್ರಾಂತಿ ಪಡೆಯಲು ನನಗೆ ಸೂಚಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಯಿದೆ. ಈ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನನಗೆ ಸ್ವಲ್ಪ ಸಮಯಬೇಕಿದೆ” ಎಂದು ರಾಖಿ ವೆಬ್ ಪೋರ್ಟಲ್ ವೊಂದಕ್ಕೆ ಹೇಳಿದ್ದಾರೆ ಎಂದು ವರದಿ ಆಗಿದೆ.
ಸೋಮವಾರವಷ್ಟೇ ರಾಖಿ ಆರೋಗ್ಯವಾಗಿದ್ದರು, ಪಾಪಾರಾಜಿಗಳ ಕ್ಯಾಮರಾಕ್ಕೆ ಪೋಸ್ ನೀಡಿದ್ದರು. ಸದಾ ಲವಲವಿಕೆ ಇರುತ್ತಿದ್ದ ರಾಖಿ ಏಕಾಏಕಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ.
ಇತ್ತೀಚೆಗಷ್ಟೇ ರಾಖಿ ಮಾಜಿ ಅದಿಲ್ ವಿಚಾರದಲ್ಲಿ ಸುದ್ದಿಯಾಗಿದ್ದರು. ಸದ್ಯ ಅದಿಲ್ ರಾಖಿಯಿಂದ ದೂರವಾಗಿದ್ದು, ವಿಚ್ಛೇದನ ಪಡೆದು ಬೇರೆ ಮದುವೆಯಾಗಿದ್ದಾರೆ.