ಕುಂದಾಪುರ: ಚುನಾವಣೆ ಅನಂತರ ಕ್ಷೇತ್ರ ಬಿಟ್ಟು ಹೋಗುವುದಿಲ್ಲ. ಜೀವಿತಾವಧಿ ಪೂರ್ಣ ಕುಂದಾಪುರದವನಾಗಿಯೇ ಇರುತ್ತೇನೆ. ಇಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸುತ್ತೇನೆ ಎಂದು ಕುಂದಾಪುರ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಹೇಳಿದ್ದಾರೆ.
ಅವರು ಸ್ಪರ್ಧೆಗೆ ಟಿಕೆಟ್ ಖಚಿತಗೊಂಡ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಕುಂದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಮಲ್ಲಿ ಪರವೂರಿನವರು, ಚುನಾವಣೆ ಅನಂತರ ಊರಿಗೆ ಮರಳುತ್ತಾರೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಇದು ಅಪ್ಪಟ ಸುಳ್ಳು ಎಂದರು. ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ದು, ಆಸ್ಕರ್ ಫೆರ್ನಾಂಡಿಸ್ ಹಾಗೂ ಪ್ರತಾಪಚಂದ್ರ ಶೆಟ್ಟರ ಮಾರ್ಗದರ್ಶನ ಇದೆ. ಕುಂದಾಪುರದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುವುದು ನನ್ನ ಸ್ಪರ್ಧೆಯ ಉದ್ದೇಶ ಎಂದರು.
ಪಕ್ಷದಲ್ಲಿ ನನ್ನ ಸ್ಪರ್ಧೆಯ ಕುರಿತು ವೈಮನಸ್ಸಿಲ್ಲ. ಎರಡು ಬ್ಲಾಕ್‌ಗಳ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಶಂಕರ ಕುಂದರ್ ಮತ್ತು ಇತರ ನಾಯಕರು ಪೂರ್ಣ ಬೆಂಬಲ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಮತ ಕೊಡಿ ಎಂದು ಜನತೆಯ ಬಳಿ ಕೇಳುತ್ತೇನೆ. ಈಗಿನ ಶಾಸಕರು ಸತತ 19 ವರ್ಷಗಳಿಂದ ಇದ್ದರೂ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ಹಿನ್ನೀರು ಸಮಸ್ಯೆ ಕೂಡ ಇದೆ. ಶಾಸಕರು ಕಚೇರಿಗಳಿಗೆ ಭೇಟಿ ನೀಡುವುದಿಲ್ಲ. ಆದ್ದರಿಂದ ಕುಂದಾಪುರದ ಅಭಿವೃದ್ಧಿಯ ಕುರಿತು ಒಂದಷ್ಟು ಹೊಸ ಭರವಸೆಗಳೊಂದಿಗೆ ಕಣಕ್ಕಿಳಿದಿದ್ದೇನೆ. ಆರೋಗ್ಯ ಸೇವೆ ವಿಸ್ತರಣೆ, ಕಾರ್ಮಿಕರ ಕಲ್ಯಾಣಕ್ಕೆ ಕ್ರಮಗಳು, ಪರಿಸರ ಸ್ನೇಹಿ ಕಾರ್ಖಾನೆಗಳಿಗೆ ಆದ್ಯತೆ ನೀಡುವ ಮೂಲಕ ಯುವ ಜನತೆಗೆ ಉದ್ಯೋಗದ ಭರವಸೆ ನಮ್ಮದಾಗಿದೆ. ಕ್ರೀಡಾಳುಗಳಿಗೆ ಸ್ಫೂರ್ತಿ ನೀಡುತ್ತೇನೆ. ಶೈಕ್ಷಣಿಕ ಕ್ಷೇತ್ರದಲ್ಲೂ ಸುಧಾರಣೆ ತರಬೇಕೆಂದಿದೆ.
ಕುಂದೇಶ್ವರನ ಸನ್ನಿಧಿಯಲ್ಲಿ ಪೂಜೆ ಮಾಡಿ ಚುನಾವಣೆಯ ಅಧಿಕೃತ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ದಿನ ಇನ್ನೂ ನಿಗದಿಯಾಗಿಲ್ಲ. ಯಾವೆಲ್ಲ ನಾಯಕರು ಪಕ್ಷದ ಪ್ರಚಾರಕ್ಕೆ ಬರಲಿದ್ದಾರೆ ಎಂದು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದರು.
ವಿನುತಾ ಆರ್. ಮಲ್ಲಿ, ಕಾಂಗ್ರೆಸ್ ಮುಖಂಡರಾದ ಮಾಣಿಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಜ್ಯೋತಿ ಪುತ್ರನ್, ಗೀತಾ ಶಂಭು ಪೂಜಾರಿ, ಚಂದ್ರ ಅಮೀನ್, ಅಚ್ಯುತ ಪೂಜಾರಿ, ವಿಜಯ್ ಪುತ್ರನ್, ಕಿಶೋರ್ ಶೆಟ್ಟಿ ಮಂದರ್ತಿ, ಸತೀಶ್ ಗಾಣಿಗ, ರಮೇಶ್ ಶೆಟ್ಟಿ, ಸತೀಶ್ ಪೂಜಾರಿ ಇದ್ದರು.