Advertisement

ರಾಜ್ಯೋತ್ಸವ: ಕೆಂಪು, ಹಳದಿ ಬಣ್ಣದ ವಸ್ತುಗಳಿಗೆ ಬೇಡಿಕೆ

12:15 AM Nov 01, 2019 | mahesh |

ಕರ್ನಾಟಕ ರಾಜ್ಯೋತ್ಸವವು ಕನ್ನಡಿಗರ ಪಾಲಿಗೆ ಸಂಭ್ರಮದ ಆಚರಣೆ. ಈ ದಿನ ಕನ್ನಡ ನಾಡು-ನುಡಿಯ ಬಗ್ಗೆ ಪ್ರೀತಿ, ಕಾಳಜಿ, ಅಭಿಮಾನ ತೋರುವುದು ಸರ್ವ ಸಾಮಾನ್ಯ. ಈ ನಿಟ್ಟಿನಲ್ಲಿ ಕನ್ನಡದ ಅಭಿಮಾನ ಸಾರುವ ಸೀರೆ, ಟೀ-ಶರ್ಟ್‌ ತೊಟ್ಟು ಸಂಭ್ರಮಿಸುತ್ತಾರೆ. ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಾರುಕಟ್ಟೆಯ ವಿಶೇಷತೆಯ ಬಗ್ಗೆ ಈ ಲೇಖನ ತಿಳಿಸುತ್ತದೆ.

Advertisement

ಭಾರತೀಯರ ಪಾಲಿಗೆ ಹಬ್ಬ, ವಿಶೇಷ ದಿನಗಳು ಆಗಾಗ ಬಂದು ಹೋಗುತ್ತಲೇ ಇರುತ್ತವೆ. ಬಹುತೇಕ ಹಬ್ಬಗಳನ್ನು ದೇಶೀಯರೆಲ್ಲರೂ ಸೇರಿ ಆಚರಿಸಿದರೆ, ರಾಜ್ಯಗಳಿಗೂ ಅದರದ್ದೇ ಆದ ಆಚರಣೆ, ಉತ್ಸವ, ವಿಶೇಷ ದಿನಗಳಿರುತ್ತವೆ. ಕನ್ನಡಿಗರ ಪಾಲಿಗೆ ಕರ್ನಾಟಕ ರಾಜ್ಯೋತ್ಸವವೊಂದು ವಿಶೇಷ.

ನವೆಂಬರ್‌ ಬಂತೆಂದರೆ ಸಾಕು. ಕನ್ನಡಿಗರ ಪಾಲಿಗೆ ಹೊಸ ಹಬ್ಬ. ಎಲ್ಲೆಡೆಯೂ ಕೆಂಪು-ಹಳದಿ ಬಣ್ಣಗಳ ಕಲರವ. ವಿಶೇಷ ದಿನಗಳ ಮಹತ್ವ ಸಾರುವ ಬಣ್ಣಗಳ ದಿರಿಸನ್ನು ಹಾಕಿ ಮೆರೆಯುವುದೇ ಸಂಭ್ರಮ. ಕರ್ನಾಟಕ ರಾಜ್ಯೋತ್ಸವದಲ್ಲಿಯೂ ಈ ದಿರಿಸಿನ ಆಯ್ಕೆ ಜೋರಾಗಿರುತ್ತದೆ.

ದಿರಿಸಿನ ಧಿಮಾಕು
ರಾಜ್ಯೋತ್ಸವ ಆಚರಣೆಗೆ ಶಾಲೆಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಇದಕ್ಕಾಗಿಯೇ ಕನ್ನಡ ಬಾವುಟದ ಬಣ್ಣವಾದ ಕೆಂಪು, ಹಳದಿ ಬಣ್ಣದ ದಿರಿಸುಗಳನ್ನು ಧರಿಸಿ, ಅದೇ ಬಣ್ಣದ ಆಲಂಕಾರಿಕ ವಸ್ತುಗಳನ್ನು ಧರಿಸಿ ವಿದ್ಯಾರ್ಥಿಗಳು, ಕನ್ನಡ ಪರ ಕೆಲಸ ಮಾಡುವ ಸಂಘ ಸಂಸ್ಥೆಗಳ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಅದಕ್ಕಾಗಿಯೇ ಮಾರುಕಟ್ಟೆಗಳಲ್ಲಿ ರಾಜ್ಯೋತ್ಸವ ದಿರಿಸಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ.

ಧ್ವಜಗಳಿಗೂ ಬೇಡಿಕೆ
ರಾಜ್ಯೋತ್ಸವ ದಿನದಂದು ಮಕ್ಕಳಿಗೆ ಖುಷಿಯೋ ಖುಷಿ. ಶಾಲಾ ಕಾಲೇಜಿನಲ್ಲಿಯೂ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕಾರ್ಯಕ್ರಮ ನಡೆಸುವುದರಿಂದ ತಕ್ಕ ದಿರಿಸಿನ ಆಯ್ಕೆ ವಾರದಿಂದಲೇ ಶುರುವಾಗುತ್ತದೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕೆಂಪು, ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸದ್ಯ ಟ್ರೆಂಡ್‌ ಆಗಿದೆ. ಕನ್ನಡ ನಾಡು ನುಡಿಯ ಕುರಿತು ನಾಟಕ, ನೃತ್ಯ, ಗಾಯನ ಎಲ್ಲವೂ ಈ ಎರಡು ಬಣ್ಣಗಳ ನಡುವೆ ಶೋಭಿಸುತ್ತದೆ.

Advertisement

ಶಾಂತಿ ಮತ್ತು ಧೈರ್ಯದ ಸಂಕೇತವಾದ ಕೆಂಪು, ಹಳದಿ ಬಣ್ಣದ ಧ್ವಜಗಳಿಗೂ ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆಯಂತೆಯೇ ರಾಜ್ಯೋತ್ಸವ ಧ್ವಜವನ್ನು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ತಮ್ಮ ಶಾಲೆಗಳಲ್ಲಿ ಕನ್ನಡ ಬಾವುಟ ಹಾರಿಸಿ ಖುಷಿಪಡುತ್ತಾರೆ. ಪ್ಲಾಸ್ಟಿಕ್‌ ನಿರ್ಮೂಲನೆಯಾದ ಹಿನ್ನೆಲೆಯಲ್ಲಿ ಬಟ್ಟೆಯ ಧ್ವಜಗಳಿಗೆ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಸ್ಥರು.
ಶಿಕ್ಷಕರು ಸಾಥ್‌

ಶಾಲೆಗಳಲ್ಲಿ ಮಕ್ಕಳೊಂದಿಗೆ ಶಿಕ್ಷಕ, ಶಿಕ್ಷಕಿಯರು, ಖಾಸಗಿ ಕಂಪೆನಿಗಳ ಉದ್ಯೋಗಿಗಳು ರಾಜ್ಯೋತ್ಸವ ಸಂಭ್ರಮವನ್ನು ಸಾರಲು ಕೆಂಪು ಮತ್ತು ಹಳದಿ ಬಟ್ಟದ ಬಟ್ಟೆ ತೊಟ್ಟು ಸಂಭ್ರಮಿಸುವುದೂ ಇದೆ. ಕೆಂಪು ಮತ್ತು ಹಳದಿ ಬಣ್ಣದಿಂದ ಕೂಡಿದ ಸಲ್ವಾರ್‌, ಸೀರೆಯನ್ನು ಧರಿಸಿ, ಅದಕ್ಕೆ ತಕ್ಕುದಾದ ಬಳೆ, ಬಿಂದಿ, ಜುವೆಲರಿಗಳನ್ನು ತೊಟ್ಟುಕೊಂಡು ಸಂಭ್ರಮಿಸುತ್ತಾರೆ. ಬಟ್ಟೆಗಿಂತಲೂ ಹೆಚ್ಚಾಗಿ ಕೆಂಪು, ಹಳದಿ ಆಕ್ಸೆಸರೀಸ್‌ಗಳಿಗೆ ಬೇಡಿಕೆ ಜಾಸ್ತಿ ಇರುತ್ತದೆ.

ಕನ್ನಡಕ್ಕೆ ಸಂಬಂಧಿಸಿದ ವಿವಿಧ ನಾಣ್ನುಡಿಗಳನ್ನು ಟೀ ಶರ್ಟ್‌ಗಳಲ್ಲಿ ಬರೆಸಿ ಅದನ್ನು ಧರಿಸುವುದು, ಬೈಕ್‌ಗಳಲ್ಲಿ ಕನ್ನಡದ ಧ್ವಜವನ್ನು ಇಟ್ಟುಕೊಳ್ಳುವುದು ಸಹ ಮಾಮೂಲಿಯಾಗಿದೆ. ಹೀಗಾಗಿ, ಇಂತಹವರು ಮಾರುಕಟ್ಟೆಯಲ್ಲಿ ಖರೀದಿಸಿ ಖುಷಿ ಪಡುತ್ತಾರೆ.

ಟೀ-ಶರ್ಟ್‌ಗೆ ಬೇಡಿಕೆ ಕಡಿಮೆ
ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಕನ್ನಡ ಪ್ರೇಮಿಗಳು ಕೆಂಪು, ಹಳದಿ ಬಣ್ಣದ ಟೀ ಶರ್ಟ್‌ ಖರೀದಿಸಿ ರಾಜ್ಯೋತ್ಸವದಂದು ಧರಿಸುತ್ತಾರೆ. ಆದರೆ, ಮಂಗಳೂರು ಮಾರುಕಟ್ಟೆಗಳಲ್ಲಿ ಟೀ ಶರ್ಟ್‌ಗೆ ಅಷ್ಟೇನೂ ಬೇಡಿಕೆ ಇಲ್ಲ. ಹಾಗಾಗಿ ಅಗತ್ಯವಿದ್ದಲ್ಲಿ, ಮುಂಗಡವಾಗಿ ತಿಳಿಸಿದ್ದಲ್ಲಿ ಮಾತ್ರ ಬಟ್ಟೆ ಅಂಗಡಿಯವರು ಈ ರೀತಿಯ ಟೀ ಶರ್ಟ್‌ ತರಿಸಿ, ಅದರಲ್ಲಿ ಕನ್ನಡದ ಸಾಲುಗಳನ್ನು ಬರೆಸಿ ಕೊಡುತ್ತಾರೆ.

ಧ್ವಜಗಳಿಗೆ ಬೇಡಿಕೆಯಿದೆ
ಸ್ವಾತಂತ್ರ್ಯ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಧ್ವಜ ಖರೀದಿ ಮಾಡುತ್ತಾರೆ. ಆದರೆ, ಇತರ ಸ್ವಾತಂತ್ರÂ ದಿನಕ್ಕೆ ಹೋಲಿಸಿದರೆ ರಾಜ್ಯೋತ್ಸವಕ್ಕೆ ಖರೀದಿ ಸ್ವಲ್ಪ ಕಡಿಮೆ ಇದೆ. ನಮ್ಮಲ್ಲಿ ಧ್ವಜ, ಆ್ಯಕ್ಸೆಸರೀಸ್‌ಗಳನ್ನು ಮಾರಾಟ ಮಾಡಲಾಗುತ್ತದೆ.
– ನಾರಾಯಣ್‌, ವ್ಯಾಪಾರಿ

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next