Advertisement

ಇನ್ನು ಅರ್ಜಿ ಆಹ್ವಾನಿಸದೇ ರಾಜ್ಯೋತ್ಸವ ಪ್ರಶಸ್ತಿ

12:29 AM Feb 06, 2022 | Team Udayavani |

ಮಂಗಳೂರು: ಮುಂದಿನ ವರ್ಷದಿಂದ ಅರ್ಜಿ ಆಹ್ವಾನಿಸದೆ ಆಯ್ಕೆ ಸಮಿತಿಯ ಮೂಲಕವೇ ಸಾಧಕರನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

Advertisement

ಶನಿವಾರ ನಗರದ ಶಾರದಾ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರಗಿದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮಹಾಲಿಂಗ ನಾಯ್ಕ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ಮೂರು ವರ್ಷಗಳಿಂದ ದೇಶದ ಅತ್ಯುನ್ನತ ಪ್ರಶಸ್ತಿಗಳು ಅರ್ಹ ಸಾಧಕರಿಗೆ ದೊರೆಯುತ್ತಿವೆ. ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬಾರದು. ಪ್ರಶಸ್ತಿಯೇ ಹುಡುಕಿಕೊಂಡು ಬರಬೇಕು. ಇದಕ್ಕೆ ಮಹಾಲಿಂಗ ನಾಯ್ಕ ಉತ್ತಮ ಉದಾಹರಣೆ. ಅವರು ಬಾವಿಗಳನ್ನು ತೋಡಿದರೂ ನೀರು ಸಿಗದೇ ಇದ್ದಾಗ ವಿಚಲಿತರಾಗದೆ ಸುರಂಗಗಳನ್ನು ತೋಡಿ ಕಲಿಯುಗದ ಭಗೀರಥನಾದರು. ಅವರು ನೀರಿಗಾಗಿ ನಡೆಸಿದ ಶ್ರಮ, ಮೌನಕ್ರಾಂತಿ ಯುವಪೀಳಿಗೆಗೆ ಪ್ರೇರಣೆ ಎಂದು ಸುನಿಲ್‌ ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌, ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ, ಸುಧಾಕರ ರಾವ್‌ ಪೇಜಾವರ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ದಯಾನಂದ ಕಟೀಲು ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಜಿ. ಸ್ವಾಗತಿಸಿದರು.

Advertisement

ಇದನ್ನೂ ಓದಿ:ಬಡವರಿಗೆ ಸರ್ಕಾರ ಕೊಟ್ಟ ನಿವೇಶನ ನೋಂದಣಿಗೆ ಅವಕಾಶ: ಆರ್‌.ಅಶೋಕ್‌

ಬಂಗಾರಕ್ಕಿಂತಲೂ ನೀರು ತುಟ್ಟಿಯಾದೀತು!
ಸಮ್ಮಾನ ಸ್ವೀಕರಿಸಿದ ಮಹಾಲಿಂಗ ನಾಯ್ಕ ಮಾತನಾಡಿ, 3 ಬಾವಿ ತೋಡಿದರೂ ನೀರು ಸಿಗದೆ ಇದ್ದಾಗ ಕೆಲವರು, ಆ ಗುಡ್ಡದಲ್ಲಿ ನೀರು ಸಿಗುವುದಿಲ್ಲ, ಇನ್ನೂ ಯಾಕೆ ಅಲ್ಲಿಯೇ ಇದ್ದಾನೆ ಎಂದು ಕೇಳುತ್ತಿದ್ದರು. ಆದರೆ ನನಗೆ ನೀರು ಅನಿವಾರ್ಯವಾಗಿತ್ತು. ಛಲ ಬಿಡದೆ ಸುರಂಗ ತೋಡಿದೆ. ರಾತ್ರಿ 12ರ ವರೆಗೂ ಕೆಲಸ ಮಾಡುತ್ತಿದ್ದೆ. ಈಗ ತೋಟಕ್ಕೆ ಬೇಕಾದಷ್ಟು ನೀರು ದೊರೆಯುತ್ತಿದೆ. ಮಳೆ ನೀರನ್ನು ಕೂಡ ಹೊರಗೆ ಹರಿಯಲು ಬಿಡದೆ ಭೂಮಿಯಲ್ಲಿ ಇಂಗಿಸುತ್ತೇನೆ. ಎಲ್ಲರೂ ನೀರಿನ ಮಹತ್ವ ಅರಿತುಕೊಳ್ಳಬೇಕು. ಇಲ್ಲದಿದ್ದರೆ ನೀರಿಗೆ ಮುಂದಿನ 10 ವರ್ಷಗಳಲ್ಲಿ ಬಂಗಾರಕ್ಕಿಂತಲೂ ಹೆಚ್ಚು ಬೆಲೆ ಬರಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next