Advertisement
ಕಿರು ಪರಿಚಯಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ 8-6-1938 ರಂದು ಜಂಗಮ ಸಮಾಜದ ರುದ್ರಯ್ಯಾ ಮತ್ತು ಶಿವಗಂಗಾ ಸಾಲಿಮಠ ದಂಪತಿಗಳ ಮಗನಾಗಿ ಜನಿಸಿದ ರಾಚಯ್ಯ ಅವರು ಕಲಿತದ್ದು ಕೇವಲ 7ನೇ ತರಗತಿವರೆಗೆ ಮಾತ್ರ. ಶಾಲಾ ದಿನಗಳಲ್ಲಿಯೇ ನಾಟಕ ಕಲೆ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ರಾಚಯ್ಯ ಸಾಲಿಮಠ ಅವರು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಮನಸ್ಸಿಲ್ಲದ ಮದುವೆ, ಬ್ಲಾಕ್ ಮಾರ್ಕೇಟ್, ವಶಿಷ್ಠ ವಿಶ್ವಾಮಿತ್ರರ ಸಂವಾದ ಎಂಬ ಏಕಾಂತ ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ ದೇಶಭಕ್ತಿ ಗೀತೆ, ಜಾನಪದ ಗೀತೆಗಳನ್ನು ಹಾಡಿ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿ ಹಲವಾರು ಬಹುಮಾನ ಪಡೆದುಕೊಂಡಿದ್ದರು.
ನಂತರ ಸಾಲಿಮಠ ಅವರು ನಾಟಕ ಕಲೆಯ ಜೊತೆಗೆ ಭಜನೆ ಮತ್ತು ಪ್ರವಚನ ಕಾರ್ಯಕ್ರಮ ನೀಡುತ್ತಾ ಸಮಾಜದ ಪ್ರಗತಿಗೆ ಶ್ರಮಿಸಿದವರು. 1968 ರಿಂದ ಹಳ್ಳಿಯಿಂದ ದಿಲ್ಲಿವರಗೆ ಎಂಬ ಕ್ರಾಂತಿಕಾರಕ ಬೈಲಾಟ ನಾಟಕದಲ್ಲಿ ಕುತ್ಬುದ್ದಿನ ಹಂಡೆವಾಲೆ ಎಂಬ ಮುಸ್ಲಿಂ ಯುವಕನ ಹಾಸ್ಯ ಪಾತ್ರದ ಮೂಲಕ ಎಲ್ಲರನ್ನು ನಗಿಸುತ್ತಾ ರಾಜ್ಯದ ಮನೆಮಾತಾದವರು. ಇವರು ಜನ್ಮತಹ: ಜಂಗಮರಾಗಿದ್ದರು ಸಹ ಕಲೆ, ಕಲಾವಿದರಿಗೆ ಜಾತಿ ಇಲ್ಲ ಎಂಬಂತೆ ಹಳ್ಳಿಯಿಂದ ದಿಲ್ಲಿವರೆಗೆ ನಾಟಕದಲ್ಲಿ ಮುಸ್ಲಿಂ ಯುವಕ ಪಾತ್ರವನ್ನು ನಿರ್ವಹಿಸಿ ಎಲ್ಲರ ಮನಗೆದ್ದವರು ಎಂಬುವದು ವಿಶೇಷ.ಮುಂದೆ ರನ್ನಬೆಳಗಲಿಯ ಮಹಾಲಿಂಗೇಶ್ವರ ನಾಟ್ಯ ಸಂಘದ ರುವಾರಿಗಳಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ತುಂಬಾ ನಾಟಕವನ್ನು ಪ್ರದರ್ಶಿಸಿ, ಅನೇಕ ಸಂಘ ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
Related Articles
ಇವರ ಹಾಸ್ಯ ಕಲೆಯನ್ನು ಮೆಚ್ಚಿ ಬೆಂಗಳೂರಿನ ಅಶ್ವೀನಿ ಕ್ಯಾಸೆಟ್ ಕಂಪನಿಯವರು ಇವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಹಳ್ಳಿಯಿಂದ ದಿಲ್ಲಿವರೆಗೆ ಇವರ ನಾಟಕವನ್ನು ಧ್ವನಿಸುರಳಿ ಮಾಡಿಸಿಕೊಂಡು, ಇವರಿಗೆ ಹಾಸ್ಯರತ್ನ ಮತ್ತು ಹಾಸ್ಯ ಸಾಗರ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. ಕನಾಟಕದ ಮೂಲೆ ಮೂಲೆಗಳಲ್ಲಿ ಇವರ ನಾಟಕದ ಧ್ವನಿ ಸುರಳಿಗಳು ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ.
Advertisement
ಕಲಾ ಮಾರ್ಗದರ್ಶನಇವರು ರನ್ನಬೆಳಗಲಿ ಪಟ್ಟಣದಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸಿ ನಾಟಕ ಪ್ರದರ್ಶನ ಮಾಡಿದ್ದಾರೆ. ತಮ್ಮ ಶಿಷ್ಯ ಬಳಗಕ್ಕೆ ಕಲೆಯ ಕುರಿತು ಮಾರ್ಗದರ್ಶನ ನೀಡಿದ್ದಾರೆ. ತಮ್ಮ ೮೪ರ ಇಳಿಯ ವಯಸ್ಸಿನಲ್ಲಿಯೂ ಇಂದಿಗೂ ಕಲಾಪ್ರದರ್ಶನ ನೀಡುತ್ತಿರುವದು ರಾಚಯ್ಯ ಸಾಲಿಮಠ ಅವರ ಕಲಾನೈಪುಣ್ಯತೆಗೆ ಸಾಕ್ಷಿಯಾಗಿದೆ. 60 ವರ್ಷಗಳ ಸಾರ್ಥಕ ಸೇವೆ
ನಾಟಕ ನಿರ್ದೇಶನ, ಅಭಿನಯ, ಭಜನಾ ಹಾಡು, ಪ್ರವಚನ, ನಾಟಕಗಳ ಧ್ವನಿ ಸುರಳಿ ಕಲಾವಿದರು ಸೇರಿದಂತೆ ಬಹುಮುಖ ಪ್ರತಿಭೆಯುಳ್ಳ ರಾಚಯ್ಯ ಸಾಲಿಮಠ ಅವರು ಹಳ್ಳಿಯಿಂದ ದಿಲ್ಲಿವರೆಗೆ ಬೈಲಾಟ ನಾಟಕದ ಕುತ್ಬುದ್ದಿನ ಹಂಡೆವಾಲೆ ಪಾತ್ರದ ಮೂಲಕ ಕುಟುಂಬ ಯೋಜನೆ, ಸಾಕ್ಷರತಾ ಪ್ರಚಾರ, ಭಾವೈಕ್ಯತೆ, ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ.
ಇಂತಹ ಅಪ್ಪಟ ಗ್ರಾಮೀಣ ಭಾಗದ ಹಿರಿಯ ಕಲಾವಿದ ರಾಚಯ್ಯ ರುದ್ರಯ್ಯ ಸಾಲಿಮಠ ಅವರಿಗೆ ಇವರ 60ಕ್ಕೂ ಅಧಿಕ ವರ್ಷಗಳ ಸಾರ್ಥಕ ಕಲಾಸೇವೆಗೆ ಇಂದು ರಾಜ್ಯ ಸರ್ಕಾರದ 67ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಒಲಿದು ಬಂದಿದ್ದು ಐತಿಹಾಸಿಕ ರನ್ನನನಾಡು, ರನ್ನಬೆಳಗಲಿ ಪಟ್ಟಣಕ್ಕೆ ಸಂದ ಗೌರವವಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಖುಷಿ ತಂದಿದೆ
ನನ್ನ ಇಳಿಯ ವಯಸ್ಸು(84)ನಲ್ಲಿಯಾದರೂ ರಾಜ್ಯ ಸರ್ಕಾರವು ಕಳೆದ 60 ವರ್ಷಗಳಿಂದ ನಾನು ಕಲಾರಂಗದಲ್ಲಿ ಸಲ್ಲಿಸಿದ ಕಲಾಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. ಇದು ನನ್ನ ಕಲಾಜೀವನದ ಸಾರ್ಥಕ ಕ್ಷಣವಾಗಿದೆ.
—–ರಾಚಯ್ಯ ರುದ್ರಯ್ಯಾ ಸಾಲಿಮಠ ವರದಿ: ಚಂದ್ರಶೇಖರ ಮೋರೆ.