Advertisement

ಪಿ. ರಾಮದಾಸ್‌, ಡಾ|ಎ.ಎ. ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರಧಾನ

11:31 AM Dec 03, 2018 | Team Udayavani |

ಮಂಗಳೂರು: ಕೈಗಾರಿಕಾ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ಮೂಡುಬಿದಿರೆ ಪುತ್ತಿಗೆಯ ಕೈಗಾರಿಕೋದ್ಯಮಿ ಪಿ. ರಾಮದಾಸ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇತ್ತೀಚೆಗೆ ಬೆಂಗಳೂರಿನಲ್ಲಿ ನೆರವೇರಿತು. ವೆಂಕಟರಮಣ ಎಂ.- ಪದ್ಮಾವತಿ ಅವರ ಪುತ್ರ ಪಿ. ರಾಮದಾಸ್‌, ಸುರತ್ಕಲ್‌ಕೆಆರ್‌ಇಸಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಪದವಿ ಪಡೆದವರು. ಐಐಟಿ ಮದ್ರಾಸ್‌ನಲ್ಲಿ ಉನ್ನತ ಪದವಿ ಪಡೆದು, ಎಚ್‌ಎಂಟಿಯಲ್ಲಿ 13 ವರ್ಷ ವೃತ್ತಿ ಜೀವನ ನಡೆಸಿದರು. ಬಳಿಕ ಕೋಲ್ಕತಾದ ಎಂಎಂಸಿಯಲ್ಲಿ ಮುಖ್ಯ ಡಿಸೈನ್‌ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿ, 1984ರಲ್ಲಿ ಬೆಂಗಳೂರಿನ ವಿಡಿಯಾ ಇಂಡಿಯಾ ಲಿ.ನಲ್ಲಿ ಸ್ಪೆಷಲ್‌ ಪರ್ಪಸ್‌ ಮೆಷಿನ್‌ ಟೂಲ್ಸ್‌ ಘಟಕ ಪ್ರಾರಂಭಿಸಿದರು. 1990ರಲ್ಲಿ ಹರಿಹರದ ಮೈಸೂರು ಕಿರ್ಲೋಸ್ಕರ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನಂತರ ಬೆಂಗಳೂರಿನಲ್ಲಿ ‘ಏಸ್‌ ಮ್ಯಾನುಫ್ಯಾಕ್ಚರಿಂಗ್‌ ಸಿಸ್ಟಮ್ಸ್‌ ಲಿ.’ (ಎಎಂಎಸ್‌) ಸಂಸ್ಥೆ ಸ್ಥಾಪಿಸಿದರು.

Advertisement


ಪ್ರಸ್ತುತ ಈ ಸಂಸ್ಥೆ ದೇಶದಲ್ಲಿಯೇ ಅತೀದೊಡ್ಡ ಯಂತ್ರೋಪಕರಣಗಳ ತಯಾರಕನಾಗಿ ವಿಶ್ವಮಟ್ಟದ ವ್ಯವಹಾರ ಹೊಂದಿದೆ. ದೇಶೀ/ವಿದೇಶೀ ಕಂಪೆನಿಗಳ ವಾಹನ, ಅಟೋ ಮೊಬೈಲ್‌, ಡೆಂಟಲ್‌ ಸೇರಿದಂತೆ ಎಲ್ಲ ಬಗೆಯ ಉತ್ಪನ್ನಗಳ ತಯಾರಿ ಮಾಡುವ ಯಂತ್ರಗಳನ್ನು ‘ಮೇಕ್‌ ಇನ್‌ ಇಂಡಿಯಾ’ ಮಾದರಿಯಲ್ಲಿ ಎಎಂಎಸ್‌ ಸಂಸ್ಥೆಯು ಉತ್ಪಾದಿಸುತ್ತಿದೆ. ಸಂಸ್ಥೆಯು ಪ್ರಸ್ತುತ ವರ್ಷಕ್ಕೆ 1,500ಕ್ಕೂ ಮಿಕ್ಕಿ ಯಂತ್ರಗಳನ್ನು ಉತ್ಪಾದಿಸುವ ಮೂಲಕ ಜಾಗತಿಕ ಸಂಸ್ಥೆಯಾಗಿ ಮೂಡಿಬಂದಿದೆ. 700ರಷ್ಟು ಜನರಿಗೆ ಉದ್ಯೋಗ ಕಲ್ಪಿಸಿರುವ ಸಂಸ್ಥೆಯು 2017-18ರಲ್ಲಿ 510 ಕೋ.ರೂ.ಗಳ ವ್ಯವಹಾರವನ್ನು ದಾಖಲಿಸಿದೆ. ಜತೆಗೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ ಅವರು ತಮ್ಮ ಸಂಸ್ಥೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿದ್ದಾರೆ.


ಮಂಗಳೂರು :
ಕರಾವಳಿ ಮೂಲದ, ಲಂಡನ್‌ ನಿವಾಸಿ ಖ್ಯಾತ ಎಲುಬು ಮತ್ತು ಮೂಳೆ ಹಾಗೂ ಕ್ಯಾನ್ಸರ್‌ ಸರ್ಜನ್‌ ಡಾ| ಎ.ಎ. ಶೆಟ್ಟಿ ಅವರನ್ನು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸರಕಾರವು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಡಾ| ಎ.ಎ. ಶೆಟ್ಟಿ ಅವರನ್ನು ವೈದ್ಯಕೀಯ ಕ್ಷೇತ್ರದಲ್ಲಿ ‘ಸರ್ಜನರ ಸರ್ಜನ್‌’ ಎಂದು ಸಂಬೋಧಿಸಲಾಗುತ್ತದೆ. ಅವರ ‘ಟೆಕ್ನಿಕ್ಸ್‌ ಇನ್‌ ಕಾರ್ಟ್ರಿಜ್‌ ರಿಪೇರ್‌ ಸರ್ಜರಿ’ ಎಂಬ ಪುಸ್ತಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಆಕರ ಗ್ರಂಥ. ಇವರು ಹುಟ್ಟು ಹಾಕಿದ ಎಸ್‌ಕೆಆರ್‌ಎಫ್‌-(ಶೆಟ್ಟಿ ಕಿಮ್‌ ರಿಸರ್ಚ್‌ ಫೌಂಡೇಶನ್‌) ಸಂಸ್ಥೆಯು ಸರ್ಜರಿಯ ಕುರಿತು ತರಬೇತಿ ನೀಡುವ ಕೆಲಸ ಮಾಡುತ್ತಿದ್ದು, ಜಾಗತಿಕ ಮನ್ನಣೆ ಪಡೆದಿದೆ. ಡಾ| ಶೆಟ್ಟಿ ಅವರಿಗೆ ಕಳೆದ ವ‌ರ್ಷ ‘ಹಂಟೇರಿಯನ್‌ ಮೆಡಲ್‌’ ಲಭಿಸಿದೆ.

ಭಾರತದಲ್ಲಿ ಮೊದಲ ಕಾರ್ಟ್ರಿಜ್‌ ಟ್ರಾನ್ಸ್‌ ಪ್ಲಾಂಟ್‌ ಶಸ್ತ್ರಕ್ರಿಯೆ ನಡೆಸಿದ ಹೆಗ್ಗಳಿಕೆ ಇವರದು. ಕ್ಯಾನ್ಸರ್‌ ಹಾಗೂ ತಲಸ್ಸೇಮಿಯ ರೋಗಗಳ ನಿರ್ಮೂಲನೆಗೆ ಸಹಾಯವಾಗುವ ಔಷಧ ತಯಾರಿಕೆ ಮತ್ತು ಅದರ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಬಹುತೇಕ ಸಫಲರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕುರಿತಾದ ಬೃಹತ್‌ ಯೋಜನೆಯೊಂದನ್ನು ಜಪಾನ್‌ ಮತ್ತು ಕೊರಿಯಾ ದೇಶಗಳ ಹಾಗೂ ಸ್ಥಳೀಯರ ಸಹಭಾಗಿತ್ವದಲ್ಲಿ ರೂಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಂಸ್ಥೆಗಳಲ್ಲಿ, ಧಾರವಾಡದ ವೈದ್ಯಕೀಯ ಕಾಲೇಜು ಹಾಗೂ ನಿಟ್ಟೆ ವಿವಿಯ ಸ್ಟೆಮ್‌ಸೆಲ್‌ ರಿಸರ್ಚ್‌ ವಿಭಾಗದ ಜತೆಗೆ ಡಾ| ಎ.ಎ. ಶೆಟ್ಟಿ ಗುರುತಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next