ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿವಾದ ಇದೀಗ ಹೈಕೋರ್ಟ್ ಅಂಗಳಕ್ಕೆ ತಲುಪಿದ್ದು, ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ, ಉದ್ಯಮಿಗಳಾದ ಕೆ.ಪ್ರಕಾಶ್ ಶೆಟ್ಟಿ ಹಾಗೂ ಡಾ.ವಿಜಯ್ ಸಂಕೇಶ್ವರ್ ಅವರನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಈ ಕುರಿತು ಬೆಂಗಳೂರಿನ ವಿಜಯನಗರ ಮೂಲದ ಸಾಮಾಜಿಕ ಕಾರ್ಯಕರ್ತ ಕೇಶವ ಗೋಪಾಲ್ ತಕರಾರು ಅರ್ಜಿ ಸಲ್ಲಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಶಸ್ತಿ ಪರಿಶೀಲನಾ ಸಮಿತಿ ಸದಸ್ಯರಾಗಿದ್ದ ನಿರುಪಮಾ ರಾಜೇಂದ್ರನ್, ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಮತ್ತು ಉದ್ಯಮಿಗಳಾದ ಕೆ.ಪ್ರಕಾಶ್ ಶೆಟ್ಟಿ ಮತ್ತು ಡಾ.ವಿಜಯ ಸಂಕೇಶ್ವರ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಅರ್ಜಿದಾರರು ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದರು. ಆದರೆ, ಅವರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿಲ್ಲ. ಇನ್ನು ಪ್ರಸಕ್ತ ಸಾಲಿನ ರಾಜ್ಯೊತ್ಸವ ಪ್ರಶಸ್ತಿ ಆಯ್ಕೆ ಪರಿಶೀಲನಾ ಸಮಿತಿಯಲ್ಲಿದ್ದ ಬಹುತೇಕ ಸದಸ್ಯರು ಆಡಳಿತಾರೂಢ ಬಿಜೆಪಿಗೆ ಸೇರಿದವರಾಗಿದ್ದರು. ಪ್ರಶಸ್ತಿ ಆಯ್ಕೆಯಲ್ಲಿ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಲ್ಲದೆ, ಪ್ರಶಸ್ತಿ ಪರಿಶೀಲನಾ ಸಮಿತಿ ಸದಸ್ಯರಾಗಿದ್ದ ನಿರುಪಮಾ ರಾಜೇಂದ್ರನ್ ಅವರು, ತಾವು ಸ್ಥಾಪಿಸಿದ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್‌ಗೆ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಈ ಕುರಿತು ಅವರೇ ನೀಡಿರುವ ಹೇಳಿಕೆಗಳ ಕುರಿತ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇನ್ನು ಉದ್ಯಮಿಯಾದ ಕೆ.ಪ್ರಕಾಶ್ ಶೆಟ್ಟಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಆಪ್ತರಾಗಿದ್ದಾರೆ. ಡಾ.ವಿಜಯ ಸಂಕೇಶ್ವರ್ ಅವರು ಬಿಜೆಪಿಗೆ ಸೇರಿದವರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆದ್ದರಿಂದ ಉದ್ಯಮಿಗಳಾದ ಕೆ.ಪ್ರಕಾಶ್ ಶೆಟ್ಟಿ, ಡಾ.ವಿಜಯ್ ಸಂಕೇಶ್ವರ್ ಮತ್ತು ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಗೆ ಪ್ರಸ್ತಕ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವುದನ್ನು ತಡೆ ಹಿಡಿಯಬೇಕು. ರಾಜಕೀಯ ಪಕ್ಷಕ್ಕೆ ಸೇರಿದವರನ್ನು ರಾಜ್ಯೋತ್ಸವ ಪ್ರಶಸ್ತಿ ಪರಿಶೀಲನಾ ಸಮಿತಿಯ ಸದಸ್ಯರನ್ನಾಗಿ ನಿಯೋಜಿಸಬಾರದು. ಜತೆಗೆ, ಅರ್ಜಿದಾರರ ಹೆಸರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.