ಬನಹಟ್ಟಿ: ಇಲ್ಲಿಯ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಮೃಗ ಚಿತ್ರ ಕಲಾವಿದ ಜಯವಂತ ಮುನ್ನೋಳ್ಳಿ ಅವರಿಗೆ ಈ ವರ್ಷದ ಹೊರನಾಡ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕುಂಚದಿಂದ ಕಲೆ ಅರಳುವ ಕಲೆ ಕರಗತ ಮಾಡಿಕೊಂಡಿರುವ ಕಲಾವಿದ ಜಯವಂತ ಮುನ್ನೋಳ್ಳಿ ಮುಂಬೈ ನಿವಾಸಿಯಾದರೂ ಅಪ್ಪಟ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡುತ್ತಾರೆ. ಸದ್ಯ ಅವರು ಹೊರನಾಡು ಕನ್ನಡಿಗರಾಗಿ ಮುಂಬೈನಲ್ಲಿ ಜೀವನ ಸಾಗಿಸುತ್ತಿದ್ದಾರೆ.
1940ರಲ್ಲಿ ಬನಹಟ್ಟಿಯಲ್ಲಿ ಜನಿಸಿದ ಜಯವಂತರಿಗೆ ಚಿತ್ರಕಲೆ ಬಗ್ಗೆ ಆಸಕ್ತಿ ಬಾಲ್ಯದಿಂದಲೇ ಇತ್ತು. ಹ್ಯಾಂಡ ಲೂಮ್ ಟೆಕ್ಸ್‌ಟೈಲ್‌ನಲ್ಲಿ ಡಿಪ್ಲೋಮಾ ಪದವಿ. ಆದರೆ ಚಿತ್ರಕಲೆಯನ್ನು ಹವ್ಯಾಸವಾಗಿ ತೆಗೆದುಕೊಂಡಿದ್ದರು. ಭಾರತ ಸರಕಾರದ ನೇಕಾರರ ಸೇವಾ ಕೇಂದ್ರದ ಸಹಾಯಕ ನಿರ್ದೇಶಕರ ವೃತ್ತಿಯಿಂದ ನಿವೃತ್ತಿಯಾದ ನಂತರ ಚಿತ್ರಕಲೆ ಮುಂದುವರಿಸಿಕೊಂಡು ಬಂದಿದ್ದಾರೆ. ಕ್ಯಾನವಸ್, ಕುಂಚ ಮತ್ತು ಬಣ್ಣಗಳ ಮೂಲಕ ವನ್ಯಮೃಗಗಳಿಗೆ ಜೀವಂತಿಕೆ ತುಂಬಿದ್ದಾರೆ.
ಮುನ್ನೋಳ್ಳಿ ಅದ್ಬುತ ಚಿತ್ರಕಾರ ಎನ್ನುವುದಕ್ಕೆ ವಿಶ್ವದ ತುಂಬ ತಮ್ಮ ಚಿತ್ರಕಲೆ ಪ್ರದರ್ಶನ ಮಾಡಿರುವುದು ಸಾಕ್ಷಿ. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ 15 ಬಾರಿ, ತಾಜ್ ಆರ್ಟ್ ಗ್ಯಾಲರಿಯಲ್ಲಿ ಎರಡು ಬಾರಿ, ಆರ್ಟ್ ದೇಶದಲ್ಲಿ ಒಂದು ಸಲ್, ಮುಂಬೈ ಆರ್ಟ್ ಗ್ಯಾಲರಿಯಲ್ಲಿ ಒಂದು, 4 ಬಾರಿ ಬಜಾಜ್ ಆರ್ಟ್ ಗ್ಯಾಲರಿ, ಮುಂಬೈನ ನ್ಯಾಚುರಲ್ ಹಿಸ್ಟರಿ ಸೊಸೈಟಿ, ಬೆಂಗಳೂರಿನ ಲಲಿತ ಕಲಾ ಅಕಾಡೆಮಿ ಹಾಗೂ ಮುಂಬೈನ ಲೀಲಾ ಗ್ಯಾಲರಿಯಲ್ಲಿ ತಲಾ ಒಂದು ಬಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕೈಗೊಂಡಿದ್ದಾರೆ. ಒಟ್ಟು 40ಕ್ಕೂ ಹೆಚ್ಚು ಚಿತ್ರಕಲಾ ಪ್ರದರ್ಶನದಲ್ಲಿ ತಮ್ಮ ವನ್ಯಮೃಗ ಚಿತ್ರಕಲೆ ಪ್ರದರ್ಶನ ಮಾಡಿದ್ದಾರೆ.
ತಾಂಝೇನಿಯಾ, ಇಂಗ್ಲೆಂಡ್, ಇಟಲಿ, ಆಸ್ಟ್ರೇಲಿಯಾ, ಕೆನಡಾದ ಟೋರಾಂಟೋ, ಶ್ರೀಲಂಕಾ,ಹಾಲಂಡ್, ಡೆನ್ಮಾರ್ಕ್, ಜಪಾನ, ಅಮೆರಿಕಾದ ನ್ಯೂಯಾಕ್, ಸೌತ್ ಕೋರಿಯಾ, ಹಾಂಕಾಂಗ್, ಜರ್ಮನಿಯಂತಹ ದೇಶಗಳಲ್ಲಿ ಅವರ ಚಿತ್ರಕಲೆ ಸಂಗ್ರಹಿಸಲ್ಪಟ್ಟಿವೆ. ದೇಶದ ವಿವಿಧ ಕಡೆಗಳಲ್ಲಿ ಕಲಾಕೃತಿ ಪ್ರದರ್ಶನ ಮಾಡಿದ್ದಾರೆ.
ವನ್ಯಮೃಗಗಳ ಸ್ವರ್ಗ ಎಂದೇ ಕರೆಯಿಸಿಕೊಳ್ಳುವ ದಕ್ಷಿಣ ಆಫ್ರಿಕಾದ ಬಹುತೇಕ ರಾಷ್ಟ್ರೀಯ ವನ್ಯಮೃಗಗಳ ತಾಣಗಳಿಗೆ ಹೋಗಿ ಅಲ್ಲಿ ಸಾಕಷ್ಟು ತಮ್ಮ ಸಮಯ ವ್ಯಯಮಾಡಿ ಪ್ರಾಣಿಗಳ ಚಲನವಲನಗಳ ಅಭ್ಯಾಸ ಮಾಡಿಕೊಂಡು ಬಂದು ತಮ್ಮ ಚಿತ್ರಕಲೆಯಲ್ಲಿ ತುಂಬಿದ್ದಾರೆ.
ನನ್ನ ಕಲೆ ಬೆಳಕಿಗೆ ಬರಲು ಮೊದಲ ಕಾರಣ ನಾನು ಕಲಿಯುತ್ತಿದ್ದ ಬನಹಟ್ಟಿಯ ಎಸ್‌ಆರ್‌ಎ ಶಾಲೆಯ ಗುರುಗಳಾದ ವಿ. ಬಿ. ರಾವಳ ಅವರ ಪ್ರೇರಣೆ ನನ್ನ ಜೀವನಕ್ಕೆ ಹೊಸ ಆಯಾಮ ನೀಡಿತು. ನನ್ನ ಬದುಕಿಗೆ ತಿರುವು ಕೊಟ್ಟಿದ್ದು ದಕ್ಷಿಣ ಆಫ್ರಿಕಾದ ತಾಂಜೇನಿಯಾದ ಸೆರೆನ್‌ಗೆಟೆ ಕಾಡು ಮತ್ತು ಧಾರ ಏ- ಸಲಾಮದ ಪ್ರಕೃತಿ ಸೌಂದರ್ಯ. ವಿವಿಧ ದೇಶಗಳಲ್ಲಿ ಚಿತ್ರಕಲೆ ಮಾರಾಟವಾಗಿವೆ. ಪ್ರಶಸ್ತಿ ದೊರೆತಿರುವುದು ಸಂತಸದ ವಿಷಯ.-
ಜಯವಂತ ಮುನ್ನೋಳ್ಳಿ, ವನ್ಯಮೃಗ ಚಿತ್ರ ಕಲಾವಿದ
-ಕಿರಣ ಶ್ರೀಶೈಲ ಆಳಗಿ