ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಲೋಕಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಬೆಂಬಲ ಪಡೆದಿದ್ದು, ಇಂದು ರಾಜ್ಯಸಭೆಯಲ್ಲಿ ಮಂಡಿಸಲಿದೆ.
ಬುಧವಾರ ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಮೇಲ್ಮನೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಲೋಕಸಭೆಯಂತೆ ರಾಜ್ಯಸಭೆಯಲ್ಲೂ ಭಾರಿ ಚರ್ಚೆಯಾಗುವ ನಿರೀಕ್ಷೆಯಿದೆ. ಸದ್ಯ ರಾಜ್ಯಸಭೆಯ ಸಂಖ್ಯಾಬಲ 238 ಆಗಿದ್ದು, ಎನ್ ಡಿಎ 105 ಸದಸ್ಯರನ್ನು ಹೊಂದಿದೆ.
ಇದರ ಜೊತೆಗೆ ಎಐಎಡಿಎಂಕೆ (11), ಬಿಜೆಡಿ (7) ವೈಎಸ್ ಆರ್ ಕಾಂಗ್ರೆಸ್ (2) ಮತ್ತು ಟಿಡಿಪಿ (2) ಸದಸ್ಯರ ಬೆಂಬಲ ಪಡೆಯುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ಇವರೆಲ್ಲರ ಬೆಂಬಲ ಪಡೆದರೆ ಎನ್ ಡಿಎ ಗೆ 127 ಸದಸ್ಯರ ಬಲ ಸಿಕ್ಕಿ, ಮಸೂದೆ ಸುಲಭದಲ್ಲಿಅಂಗೀಕಾರಗೊಳ್ಳಲಿದೆ.
ಲೋಕಸಭೆಯಲ್ಲಿ ಬೆಂಬಲ ನೀಡಿದ್ದ ಶಿವಸೇನೆ ರಾಜ್ಯಸಭೆಯಲ್ಲಿ ಬೆಂಬಲ ನೀಡಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ಸೂಚಿಸಿದ್ದ ನಿತೀಶ್ ಕುಮಾರ್ ನೇತೃತ್ವದ ಬಿಜೆಡಿಯಲ್ಲಿ ಈಗ ಅಪಸ್ವರ ಎದ್ದಿದೆ. ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್, ಪ್ರಧಾನ ಕಾರ್ಯದರ್ಶಿ ಪವನ್ ವರ್ಮಾ ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೆಡಿಯುನ ಇಂದಿನ ನಡೆಯ ಬಗ್ಗೆ ಕಾದು ನೋಡಬೇಕಾಗಿದೆ.