Advertisement

Rajya Sabha: ಸಹಕಾರ ಸಂಘಗಳ ಕಾಯ್ದೆಗೆ ಅನುಮೋದನೆ

09:50 PM Aug 01, 2023 | Team Udayavani |

ನವದೆಹಲಿ: ಬಹು-ರಾಜ್ಯ ಸಹಕಾರ ಸಂಘಗಳ(ತಿದ್ದುಪಡಿ) ಕಾಯ್ದೆ 2023ಕ್ಕೆ ರಾಜ್ಯಸಭೆಯಲ್ಲಿ ಮಂಗಳವಾರ ಅನುಮೋದನೆ ನೀಡಲಾಗಿದೆ. ಈ ಕಾಯ್ದೆಯು ಸಹಕಾರಿ ಸಂಘಗಳ ಕಾರ್ಯಾಚರಣೆಯನ್ನು ಹೆಚ್ಚು ಪಾರದರ್ಶಕಗೊಳಿಸುವ ಮೂಲಕ, ನಿಯಮಿತ ಚುನಾವಣೆಗಳನ್ನು ಪರಿಚಯಿಸುವ ಮೂಲಕ ಮತ್ತು ಸಂಬಂಧಿಸಿದ ವ್ಯಕ್ತಿಗಳ ನೇಮಕ ನಿಷೇಧಿಸುವ ಮೂಲಕ ಸಹಕಾರಿ ಸಂಘಗಳನ್ನು ಬಲಪಡಿಸಲಿದೆ ಎಂದು ಸರ್ಕಾರ ತಿಳಿಸಿದೆ.

Advertisement

ಈ ಕುರಿತ ವಿಧೇಯಕವನ್ನು ರಾಜಸಭೆಯಲ್ಲಿ ಕೇಂದ್ರ ಸಹಕಾರ ಖಾತೆಯ ಸಹಾಯಕ ಸಚಿವ ಬಿ.ಎಲ್‌.ವರ್ಮಾ ಮಂಡಿಸಿದರು. ಧ್ವನಿ ಮತದ ಮೂಲಕ ವಿಧೇಯಕ ಅನುಮೋದನೆ ಪಡೆಯಿತು. 2023ರ ಜು.25ರಂದು ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರಗೊಂಡಿತ್ತು.

ವಿಧೇಯಕಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿ.ಎಲ್‌.ವರ್ಮಾ, “ಈ ಕಾಯ್ದೆಯು ಉದ್ಯೋಗಿಗಳ ನೇಮಕದಲ್ಲಿ ನಿಯಮಗಳನ್ನು ತರಲಿದೆ ಮತ್ತು ಸ್ವಜನಪಕ್ಷಪಾತ ತಪ್ಪಿಸಲಿದೆ. ಸಹಕಾರ ಕ್ಷೇತ್ರದ ಪ್ರಗತಿ ಇಲ್ಲದೇ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಹೊಂದುವ ಭಾರತದ ಗುರಿ ತಲುಪಲು ಸಾಧ್ಯವಿಲ್ಲ’ ಎಂದು ಹೇಳಿದರು.
“ಈ ಕಾಯ್ದೆಯು ಸಹಕಾರಿ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ “ಸಹಕಾರ ಚುನಾವಣಾ ಪ್ರಾಧಿಕಾರ’ ಆರಂಭಿಸಲು ಅನುವು ಮಾಡಿಕೊಡಲಿದೆ. ಅಲ್ಲದೇ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಗರಿಷ್ಠ ಮೂವರು ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ’ ಎಂದರು. ಪ್ರಸ್ತುತ ದೇಶದಲ್ಲಿ ಸುಮಾರು 8.6 ಲಕ್ಷ ಸಹಕಾರಿ ಸಂಘಗಳಿವೆ. ಈ ಪೈಕಿ ಕ್ರಿಯಾಶೀಲ ಕೃಷಿ ಸಹಕಾರಿ ಸಂಘಗಳು ಸುಮಾರು 63,000 ಇವೆ.

ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದ್ದ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ, “ಈ ಕಾಯ್ದೆಯಲ್ಲಿ, ಮಾಹಿತಿ ಹಕ್ಕನ್ನು ಸೇರಿಸಲಾಗಿದೆ. ಅಲ್ಲದೇ ಯಾರೂ ತಮ್ಮ ಕುಟುಂಬದವರು ಅಥವಾ ದೂರದ ಸಂಬಂಧಿಕರನ್ನು ಉದ್ಯೋಗಕ್ಕೆ ನೇಮಿಸಲು ಆಗುವುದಿಲ್ಲ. ನಿಯಮಗಳನ್ನು ಪಾಲಿಸದಿದ್ದರೆ ಮಂಡಳಿ ಸದಸ್ಯರ ಅನರ್ಹತೆಗೆ ಕಾರಣವಾಗಬಹುದು’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next