ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಬುಧವಾರ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಪ್ರಕರಣ ಕಾವೇರುವಂತೆ ಮಾಡಿತು. ಮುಂಬರುವ ಗುಜರಾತ್ ಚುನಾವಣೆಯಲ್ಲಿ ಇವಿಎಂ ಬೇಡವೆ ಬೇಡ ಎಂದು ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಹಿಡಿದರೆ, ಆಡಳಿತಾರೂಢ ಬಿಜೆಪಿ ಚುನಾವಣಾ ಆಯೋಗದ ಕಡೆ ಬೊಟ್ಟು ಮಾಡಿತು. ಈ ನಡುವೆಯೂ ನಡೆದ ಪ್ರತಿಪಕ್ಷಗಳ ಆಕ್ರೋಶ ಕೆಲ ಕಾಲ ಕಲಾಪಕ್ಕೆ ಅಡ್ಡಿಯುಂಟು ಮಾಡಿತು.
ತೀವ್ರ ಚರ್ಚೆಗೆ ಕಾರಣವಾದ ಇವಿಎಂ ವಿಚಾರವಾಗಿ ಕೇಂದ್ರ ಸರಕಾರ ಜಾಗರೂಕತೆಯಿಂದ ನಿಲುವು ಪ್ರತಿಪಾದಿಸಿದರೆ, ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಜತೆಯಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಕೇಂದ್ರ ಸರಕಾರ ತಿರುಚಲಾಗಿರುವ ಮತಯಂತ್ರ ಬಳಸಿ ಮತದಾರನಿಗೆ ಮೋಸವೆಸಗಿದೆ ಎಂದು ಕಾಂಗ್ರೆಸ್ ಗದ್ದಲ ಎಬ್ಬಿಸಿದ್ದರಿಂದಾಗಿ ಉಪಸಭಾಪತಿ ಪಿ.ಜೆ. ಕುರಿಯನ್ ಕಲಾಪ ಮುಂದೂಡಿದರು.
ಅಲ್ಲದೇ 267ರ ನಿಯಮದಂತೆ ಚರ್ಚೆಗೆ ಅವಕಾಶ ಕೊಡಬೇಕೆನ್ನುವ ಪ್ರತಿಪಕ್ಷಗಳ ಒತ್ತಾಯಕ್ಕೆ ಕುರಿಯನ್ “ಸಾಧ್ಯವೇ ಇಲ್ಲ’. ಚರ್ಚಿಸಲು ಬೇರೆ ಮಾರ್ಗಗಳಿವೆ ಎಂದು ಉತ್ತರಿಸಿದರು.
ಪ್ರತಿಪಕ್ಷಗಳ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ ಆಡಳಿತಾರೂಢ ಪಕ್ಷದ ಸದಸ್ಯರು ಇವಿಎಂ ಯಂತ್ರಕ್ಕೆ ಸಂಬಂಧಿಸಿ ತಮ್ಮ ಮೇಲೆ ಮಾಡಲಾಗುತ್ತಿರುವ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿತು. ಅಲ್ಲದೆ, ಇವಿಎಂನಲ್ಲಿ ಸಮಸ್ಯೆ ಇದೆ ಎನ್ನುವುದು ಯಾರಿಗಾದರೂ ಅನಿಸಿದರೆ ಅವರು ಚುನಾವಣಾ ಆಯೋಗದ ಬಳಿ ಕೇಳಿ ಉತ್ತರ ಪಡೆದುಕೊಳ್ಳಬಹುದು. ಸ್ಪಷ್ಟನೆ ನೀಡಲು ಸಂಸತ್ ವೇದಿಕೆಯಲ್ಲ ಎನ್ನುವ ಸಂದೇಶ ಬಿಜೆಪಿ ಸದಸ್ಯರಿಂದ ಬಂತು.
ಸಿಟ್ಟಾದ ಗುಲಾಂ: ತಾರಕಕ್ಕೇರಿದ ಚರ್ಚೆಯಲ್ಲಿ ಸಚಿವ ನಕ್ವಿ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಕೂಡ ತುಸು ಹೊತ್ತು ಗರಂ ಆಗಿಯೇ ಮಾತನಾಡಿದರು. 2004, 2009 ಮತ್ತು ಬಿಹಾರ ವಿಧಾನಸಭೆ ಚುನಾವಣೆಯಲ್ಲಿಯೂ ಇವಿಎಂ ಬಳಸಲಾಗಿತ್ತು. ಆಗ ಬಿಜೆಪಿ ಸೋಲನುಭವಿಸಿತ್ತು. ಆದರೆ ಕಾಂಗ್ರೆಸ್‌ಗೆ ಅಂದು ಕಾಣದ ಇವಿಎಂ ಸಮಸ್ಯೆ ಇಂದು ಬಿಜೆಪಿ ಜಯಭೇರಿ ಭಾರಿಸಿದಾಗ ಕಾಣಿಸುತ್ತಿದೆ ಎಂದು ನಕ್ವಿ ಲೇವಡಿ ಮಾಡಿದರು. ಇದಕ್ಕೆ ತೀಕ್ಷವಾಗಿಯೇ ಉತ್ತರಿಸಿದ ಆಜಾದ್, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಇವಿಎಂನಲ್ಲಿ ಈ ಪರಿ ತಿರುಚಲಾಗಿರಲಿಲ್ಲ. ಗುಜರಾತ್ ಚುನಾವಣೆಯಲ್ಲಿ ಇವಿಎಂ ಬಳಕೆಯೇ ಬೇಡ ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡ ಇದಕ್ಕೆ ಧ್ವನಿಗೂಡಿಸಿದರು.
ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್, ಚುನಾವಣಾ ಆಯೋಗ ಈಗಾಗಲೇ ಮತಯಂತ್ರ ತಿರುಚಿದ್ದಾರೆನ್ನುವ ಆರೋಪವನ್ನು ತಳ್ಳಿಹಾಕಿದೆ. ಯಾವುದೇ ಸಮಸ್ಯೆ ಇರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆದಾಗ್ಯೂ ವಿಪಕ್ಷಗಳಿಗೆ ಅನುಮಾನವಿದ್ದರೆ ಸಂಸತ್‌ನಲ್ಲಿ ಕಾಲಹರಣ ಮಾಡದೇ ಚುನಾವಣಾ ಆಯೋಗದ ಬಳಿ ಹೋಗಿ ಉತ್ತರ ಪಡೆದುಕೊಳ್ಳಲಿ ಎಂದು ಹೇಳಿದರು.
“ಮತ್ತೆ 2000 ರೂ. ಬದಲಾಯಿಸಲ್ಲ’
ಅಪನಗದೀಕರಣ ಪ್ರಕ್ರಿಯೆಯಲ್ಲಿ ಬದಲಾಯಿಸಲಾದ 2000 ರೂ. ಮುಖಬೆಲೆಯ ಹೊಸ ನೋಟನ್ನು ಮತ್ತೆ ಬದಲಾಯಿಸುವ ಪ್ರಮೇಯವೇ ಇಲ್ಲ. ಈ ಕುರಿತಾದ ಸುದ್ದಿಗಳೆಲ್ಲವೂ ಆಧಾರ ರಹಿತವಾದುದು ಎಂದು ಸರಕಾರ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ಇಂಥ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.