Advertisement

ಲೋಕಸಭೆಯಲ್ಲಿ ಹೈಡ್ರಾಮಾ:ಕಾಂಗ್ರೆಸ್‌- AIADMK ಸದಸ್ಯರ ನಡುವೆ ವಾಗ್ವಾದ

09:05 AM Mar 28, 2018 | Karthik A |

ನವದೆಹಲಿ: ಲೋಕಸಭೆ, ರಾಜ್ಯಸಭೆಯಲ್ಲಿ ಸತತ 16ನೇ ದಿನವಾದ ಮಂಗಳವಾರ ಕೂಡ ಎಐಎಡಿಎಂಕೆ, ವೈಎಸ್ಸಾರ್‌ ಕಾಂಗ್ರೆಸ್‌ನ ಗದ್ದಲದಿಂದಾಗಿ ಕಲಾಪ ಕೊಚ್ಚಿಹೋಯಿತು. ಇದರ ನಡುವೆಯೇ ಲೋಕಸಭೆಯು ಹೈಡ್ರಾಮಾಗೆ ಸಾಕ್ಷಿಯಾಯಿತು. ಕಲಾಪ ಮುಂದೂಡಿಕೆಯಾದ ಬಳಿಕ ಕಾಂಗ್ರೆಸ್‌ ಮತ್ತು ಎಐಎಡಿಎಂಕೆ ಸಂಸದರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಲೋಕಸಭೆಯಲ್ಲಿ ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಚರ್ಚೆ ಮತ್ತು ಕಲಾಪ ನಡೆಯದಂತೆ ಮಾಡಲು ಎಐಎಡಿಎಂಕೆ ಬಿಜೆಪಿ ಜತೆಗೆ ಮ್ಯಾಚ್‌ಫಿಕ್ಸಿಂಗ್‌ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಸಂಸದ ಕೆ.ಸಿ.ವೇಣುಗೋಪಾಲ್‌ ಹೇಳಿದ್ದು, ತಮಿಳುನಾಡಿನ ಪಕ್ಷದ ಕೋಪಕ್ಕೆ ಕಾರಣವಾಯಿತು. ಕೋಪೋದ್ರಿಕ್ತಗೊಂಡ ಸಂಸದರು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್‌ರತ್ತ ಧಾವಿಸಿ ಬಂದರು. ಮೊದಲ ಸಾಲಿನಲ್ಲಿ ಖರ್ಗೆ ಜತೆಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇದ್ದರು. ಎಐಎಡಿಎಂಕೆ ಸದಸ್ಯರು ಖರ್ಗೆಯವರನ್ನು ಎಳೆದಾಡಲು ಮುಂದಾದರಾದರೂ, ಕೂಡಲೇ ಆರ್‌ಜೆಡಿ, ಟಿಎಂಸಿ, ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಕೆಲ ಸಂಸದರು ಅಡ್ಡ ನಿಂತು, ತಡೆಯುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಕಾಂಗ್ರೆಸ್‌ ಮತ್ತು ಎಐಎಡಿಎಂಕೆ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅದೇ ವೇಳೆ ಸೋನಿಯಾ ಮಧ್ಯಪ್ರವೇಶಿಸಿ ವೇಣುಗೋಪಾಲ್‌ ಜತೆ ಮಾತನಾಡಿದರು. 

Advertisement

ಲೋಕಸಭೆಯಿಂದ ಹೊರಗೆ ಬಂದು ಮಾತನಾಡಿದ ಖರ್ಗೆ, ಇದೊಂದು ಕೇಂದ್ರ ಸರ್ಕಾರವೇ ಪ್ರಾಯೋಜಿಸಿದ ಪ್ರತಿಭಟನೆಯಂತಿದೆ. ಎಐಎಡಿಎಂಕೆ ಸದಸ್ಯರನ್ನು ಪ್ರತಿಭಟಿಸಲು ಪ್ರೇರೇಪಣೆ ಮಾಡಿದಂತಿದೆ ಎಂದಿದ್ದಾರೆ. ಇದೇ ವೇಳೆ ಬಿಕ್ಕಟ್ಟು ಪರಿಹರಿಸಲು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸರ್ವಪಕ್ಷಗಳ ಸಭೆ ಕರೆಯಲು ಮುಂದಾಗಿದ್ದಾರೆ.

ಏ.6ಕ್ಕೆ ಮುಕ್ತಾಯ: ಬಜೆಟ್‌ ಅಧಿವೇಶನದ ಎರಡನೇ ಭಾಗ ಏ.6ರಂದು ಪೂರ್ಣಗೊಳ್ಳಲಿದೆ. ಈ ಹಂತದಲ್ಲಿ ಒಟ್ಟು 22 ಸಿಟ್ಟಿಂಗ್‌ಗಳು ನಡೆಯಬೇಕಾಗಿತ್ತು. 

ಮುಂದೂಡಿಕೆ ಬಳಿಕವೂ ಧರಣಿ: ರಾಜ್ಯಸಭೆಯಲ್ಲಿ ಕೇವಲ 20  ನಿಮಿಷಗಳಷ್ಟು ಕಾಲ ಮಾತ್ರ ಸದನ ಸಮಾವೇಶಗೊಂಡಿತ್ತು. ಗದ್ದಲದ ಹಿನ್ನೆಲೆ ಕಲಾಪ ಮುಂದೂಡಲ್ಪಟ್ಟಿತು. ನಂತರವೂ ಪ್ರತಿಪಕ್ಷಗಳ ಸದಸ್ಯರು ಸುಮಾರು ಮುಂಭಾಗದಲ್ಲಿ ಸೇರಿ ಘೋಷಣೆ ಕೂಗುತ್ತಿದ್ದರು. ಸದಸ್ಯತ್ವದ ಅವಧಿ ಪೂರ್ಣಗೊಂಡಿರುವ 40 ಮಂದಿಗೆ ಬೀಳ್ಕೊಡುಗೆಯೂ‌ ಸಾಧ್ಯವಾಗಲಿಲ್ಲ. 

ಪ್ರತಿಪಕ್ಷಗಳ ಹೊಸ ಐಡಿಯಾ: ಕಲಾಪ ನಡೆಯದ ಕಾರಣ ಪ್ರತಿಪಕ್ಷಗಳ ಸದಸ್ಯರು ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಇದೆ ಎಂದು ಪ್ರಕಟಿಸಲು 1ರಿಂದ 80ರ ವರೆಗೆ ಸಂಖ್ಯೆಗಳಿರುವ ಫ‌ಲಕಗಳನ್ನು ಪ್ರದರ್ಶಿಸಿದರು. ಇದರ ಜತೆಗೆ ‘ಅವಿಶ್ವಾಸ ಗೊತ್ತುವಳಿಗಾಗಿ’ ಎಂದೂ ಬರೆದುಕೊಂಡಿದ್ದರು.

Advertisement

ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ಎಲ್ಲರಲ್ಲಿಯೂ ಮನವಿ ಮಾಡುತ್ತಿದ್ದೇನೆ. ಸಂಸತ್‌ನ ಹೊರಗೆ ಮತ್ತು ಒಳಗೆ ನಮಗೆ ಬಹುಮತವಿದೆ. ಕಾಂಗ್ರೆಸ್‌ ಈಗ ಸಣ್ಣ ಪಕ್ಷವಾಗಿ ಮಾರ್ಪಾಡಾಗಿದೆ. ಇತರ ಪಕ್ಷಗಳ ಜತೆಗೆ ಮೈತ್ರಿಗಾಗಿ ನೋಡುತ್ತಿದೆ. ಅವಿಶ್ವಾಸ ಗೊತ್ತುವಳಿಯಲ್ಲಿಯೂ ಅದು ಮೈತ್ರಿಗೆ ಮುಂದಾಗಿದೆ. ಈ ಬಗ್ಗೆ ಖರ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
– ಅನಂತಕುಮಾರ್‌, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next