ಮೈಸೂರು: ಅಮಿತ್ ಶಾ, 2016ರಲ್ಲಿ ಹತ್ಯೆಯಾದ ಆರ್‌ಎಸ್‌ಎಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೃತ ರಾಜು ಅವರ ತಾಯಿ ಚಂದ್ರಮ್ಮ, ಅಕ್ಕ ರಾಣಿ, ರಾಜು ಅವರ ಸಹೋದರ ದಿ.ಕುಮಾರ್ ಅವರ ಪತ್ನಿ ಕುಮಾರಿ, ಮಕ್ಕಳಾದ ಧನುಷ್ ಮತ್ತು ಧಾಮಿನಿ ಅವರ ಯೋಗಕ್ಷೇಮವನ್ನು ವಿಚಾರಿಸಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬಿದರು.
ಈ ವೇಳೆ, ಬಿಜೆಪಿ ನಾಯಕರೊಂದಿಗೆ ತಮ್ಮ ಅಳಲು ತೋಡಿಕೊಂಡ ರಾಜು ಅವರ ತಾಯಿ ಚಂದ್ರಮ್ಮ, ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಬೀದ್ ಪಾಷಾ ವಿರುದ್ಧ ಹಲವು ಕೊಲೆ ಪ್ರಕರಣಗಳಿದ್ದರೂ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಹೀಗಾಗಿ ಪ್ರಕರಣದ ಕುರಿತು ಪೊಲೀಸರು ನಡೆಸಿರುವ ತನಿಖೆಯಲ್ಲಿ ವಿಶ್ವಾಸವಿಲ್ಲ. ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕಿದೆ ಎಂದು ಮನವಿ ಮಾಡಿದರು. ಜೊತೆಗೆ, ಮೊಮ್ಮಗನಿಗೆ ಸರ್ಕಾರಿ ನೌಕರಿ ಕೊಡಿಸಬೇಕೆಂದು ಮನವಿ ಮಾಡಿದರು. ಕೇಂದ್ರ ಸಚಿವ ಅನಂತಕುಮಾರ್ ಅವರು ಅಮಿತ್ ಶಾ ಅವರಿಗೆ ಘಟನೆಯನ್ನು ವಿವರಿಸಿದರು.
5 ಲಕ್ಷ ರೂ.ಪರಿಹಾರ ನೀಡಲು ಸೂಚನೆ: ಶಾ ಅವರು ಮೃತನ ಕುಟುಂಬಕ್ಕೆ ರಾಜ್ಯ ಬಿಜೆಪಿ ವತಿಯಿಂದ 5 ಲಕ್ಷ ಪರಿಹಾರ ನೀಡುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಆದರೆ, ಸ್ಥಳದಲ್ಲೇ ಯಾವುದೇ ಪರಿಹಾರ ನೀಡಲಿಲ್ಲ ಎಂದು ಬಿಜೆಪಿ ಮುಖಂಡ ಮೈ.ಕಾ. ಪ್ರೇಮ್ ಕುಮಾರ್ ತಿಳಿಸಿದರು.
ಅಮಿತ್ ಶಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜು ಅವರ ಅತ್ತಿಗೆ ಕುಮಾರಿ, ಅಮಿತ್ ಶಾ ಅವರು 5 ಲಕ್ಷ ರೂ.ಹಣ ನೀಡಿದ್ದಾರೆಂಬ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದರು.