ಬೆಂಗಳೂರು: “ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ಮಾಪಕ ಸುರೇಶ್ ಮೇಲೆ ದಾಖಲಿಸಿದ್ದ ದಾವೆಯನ್ನು ವಾಪಸ್ಸು ಪಡೆಯುವುದಕ್ಕೆ ನಟಿ ಅವಂತಿಕಾ ಶೆಟ್ಟಿ ತೀರ್ಮಾನಿಸಿದ್ದಾರೆ. ಈ ಮೂಲಕ “ರಾಜು ಕನ್ನಡ ಮೀಡಿಯಂ’ ಚಿತ್ರದ ವಿವಾದ ಬಗೆಹರಿದಂತಾಗಿದೆ.
ಇದಕ್ಕೂ ಮುನ್ನ, “ರಾಜು ಕನ್ನಡ ಮೀಡಿಯಂ’ ಚಿತ್ರದಿಂದ ಅವಂತಿಕಾ ಅವರನ್ನು ತೆಗೆದು ಹಾಕಲಾಗಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಅವಂತಿಕಾ, ತಮ್ಮ ಪಾತ್ರಕ್ಕೆ ಮೂರನೇ ವ್ಯಕ್ತಿಯಿಂದ ಡಬ್ಬಿಂಗ್ ಮಾಡಿಸದಂತೆ ಆದೇಶಿಸಬೇಕು ಎಂದು ಕೋರಿದ್ದರು. ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಅವಂತಿಕಾ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸದಂತೆ ನಿರ್ದೇಶಿಸಿತ್ತು.
ಈ ಕುರಿತು ನಿರ್ಮಾಪಕ ಸುರೇಶ್ ಅವರು ಮುಚ್ಚಳಿಕೆ ಪತ್ರ ನೀಡುವಂತೆಯೂ ತಾಕೀತು ಮಾಡಿ, ಮುಂದಿನ ವಿಚಾರಣೆ ಜೂನ್ 21ಕ್ಕೆ ನಿಗದಿಪಡಿಸಿತ್ತು. ಈ ಮಧ್ಯೆ ನಿರ್ಮಾಪಕ ಸುರೇಶ್ ಅವರು, ಅವಂತಿಕಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ಗುರುವಾರ ಮಧ್ಯಾಹ್ನ ಸಂಧಾನ ನಡೆಸಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಚಿತ್ರದ ನಾಯಕಿ ಮತ್ತು ನಿರ್ಮಾಪಕರ ನಡುವೆ ರಾಜಿ ಮಾಡಿಸುವಲ್ಲಿ ಸಫಲರಾದರು. ಈ ಸಂಧಾನದ ಪ್ರಕಾರ, ಚಿತ್ರದ ನಿರ್ಮಾಪಕರ ಮೇಲೆ ಹೂಡಿದ್ದ ದಾವೆಯನ್ನು ಅವಂತಿಕಾ ಶೆಟ್ಟಿ ವಾಪಸ್ಸು ಪಡೆಯಲಿದ್ದಾರೆ. ಇನ್ನು ಚಿತ್ರದಲ್ಲಿ ಅವಂತಿಕಾ ಶೆಟ್ಟಿ ಅವರನ್ನು ಮುಂದುವರೆಸುವುದಕ್ಕೆ ಚಿತ್ರದ ನಿರ್ಮಾಪಕ ಸುರೇಶ್ ಸಮ್ಮತಿಸಿದ್ದಾರೆ.
ಈ ಮಧ್ಯೆ, ನಿರ್ಮಾಪಕ ಸುರೇಶ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪವನ್ನು ಹೊರೆಸಿಲ್ಲ ಮತ್ತು ಅದು ತಪ್ಪಾಗಿ ಸುದ್ದಿಯಾಗಿದೆ ಎಂದು ಅವಂತಿಕಾ ಸ್ಪಷ್ಟಪಡಿಸಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಸಾ.ರಾ. ಗೋವಿಂದು, “ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್, ನಾಯಕಿ ಅವಂತಿಕಾ, ನಾಯಕ ಗುರುನಂದನ್ ಸೇರಿದಂತೆ ಹಲವರು ಭಾಗವಹಿಸಿದ್ದರು.