Advertisement

‘ಗ್ಯಾರಂಟಿ’ ಕೈ ಹಿಡಿಯುವ ನಿರೀಕ್ಷೆ ಹುಸಿಯಾಗಿದೆ, ಸೋಲಿನ ಕುರಿತು ವರಿಷ್ಠರಿಗೆ ವರದಿ: ಆಲಗೂರ

06:59 PM Jun 05, 2024 | sudhir |

ವಿಜಯಪುರ : ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಕಾರಣಗಳ ವರದಿ ನೀಡುವಂತೆ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಉಸ್ತುವಾರಿ ರಂದೀಪ ಸುರ್ಜೇವಾಲಾ ಸೂಚಿಸಿದ್ದಾರೆ ಎಂದು ಲೋಕಸಭೆ ಚುನಾವಣೆಯಲ್ಲಿನ ಪರಾಜಿತ ಅಭ್ಯರ್ಥಿ ರಾಜು ಆಲಗೂರ ಹೇಳಿದರು.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರ್ಜೇವಾಲ ಅವರು ಇಂದು ಬೆಳಿಗ್ಗೆ ಕರೆ ಮಾಡಿ ಮಾತನಾಡಿದರು. ಸೋಲಿನ ಕುರಿತು ಮಾಹಿತಿ ಪಡೆದ ಅವರು, ಈ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ. ಶೀಘ್ರವೇ ವಿಜಯಪುರ ಕ್ಷೇತ್ರದಲ್ಲಿನ ಸೋಲಿನ ಕುರಿತು ವರಿಷ್ಠರಿಗೆ ವರದಿ ನೀಡುವುದಾಗಿ ಹೇಳಿದರು.

ವ್ಯವಸ್ಥಿತ ಪ್ರಚಾರದ ಮಧ್ಯೆಯೂ ಸೋಲಾಗಿದ್ದು, ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯುವ ನಿರೀಕ್ಷೆ ಹುಸಿಯಾಗಿದೆ ಎಂದರು.

ಕ್ಷೇತ್ರದಲ್ಲಿನ ಸರ್ಕಾರದ ಸಚಿವರು, ಕಾಂಗ್ರೆಸ್ ಶಾಸಕರು ನನ್ನ ಗೆಲುವಿಗಾಗಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಇದರ ಹೊರತಾಗಿಯೂ ಸಚಿವರು, ಪಕ್ಷದ ಶಾಸಕರಿರುವ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದೆ ಎಂದರು.

ನನ್ನ ಗೆಲುವಿಗಾಗಿ ವಿಜಯಪುರ ಕ್ಷೇತ್ರದ ಎಲ್ಲ 8 ಕ್ಷೇತ್ರಗಳಲ್ಲೂ ಪಕ್ಷದ ಸಚಿವರು, ಶಾಸಕರೂ, ನಮ್ಮ ಪಕ್ಷದ ಶಾಸಕರು ಇಲ್ಲದ ಕೇತ್ರದಗಳಲ್ಲಿ ಅಲ್ಲಿನ ಪರಾಜಿತರ ಸಾರಥ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಪರಿಣಾಮ ನಾನು 6 ಲಕ್ಷ ಮತಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.

Advertisement

ಚುನಾವಣೆಯಲ್ಲಿ ನನಗೆ ಸೋಲಾಗಿದ್ದರೂ ಯಾವ ಶಾಸಕರೂ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ನಂಬಿಕೆ ದ್ರೋಹವಾಗಿದೆ ಎಂದೂ ಅನಿಸುತ್ತಿಲ್ಲ. ಹೀಗಾಗಿ ನನ್ನನ್ನು ಗೆಲ್ಲಿಸುವುದಕ್ಕಾಗಿ ಹಗಲಿರುಳು ಶ್ರಮಿಸಿದರೂ ಸೋಲಾಗಿದೆ.
ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲ ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ.

ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ನಮ್ಮ ಕೈಬಿಡದೇ ಬೆಂಬಲಿಸಿದ್ದಾರೆ. ಒಂದೆಡೆ ನನ್ನ ಸೋಲಾಗಿದ್ದರೂ, ಬಿಜೆಪಿ ಈ ಹಿಂದಿಗಿಂತ ಕಡಿಮೆ ಅಂತರದಲ್ಲಿ ಗೆಲ್ಲುವಂತೆ ಮಾಡಿದ್ದೇವೆ. ಕಡಿಮೆ ಅಂತರದಲ್ಲಿನ ಸೋಲು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ ಎಂಬುದಕ್ಕೆ ಸಾಕ್ಷಿ ಎಂದರು.

ಸೋತರೇನಂತೆ ನಾನಂತೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ, ಪಕ್ಷ ಕೊಡುವ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದ ಪರಾಜಿತ ರಾಜು ಆಲಗೂರ, ಚುನಾವಣೆ ಹಂತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಬದಲಾವಣೆ ಪರಿಣಾಮಕಾರಿ ಆಗಿತ್ತೇ, ಇಲ್ಲವೇ ಎಂಬುದನ್ನು ಅವರೇ ಹೇಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next