Advertisement
ಭಾರತೀಯ ಸಂವಿಧಾನದ 19ನೆಯ ವಿಧಿಯನ್ವಯ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸದಂತೆ ಯಾರನ್ನೂ ತಡೆಯುವಂತಿಲ್ಲ. ಹಾಗೆಂದೇ ನಮ್ಮಲ್ಲಿ ನೂರಾರು ರಾಜಕೀಯ ಪಕ್ಷಗಳಿವೆ, ರಾಜಕೀಯ ಪಕ್ಷವೆಂಬ ಹೆಸರಿನ ಪಂಗಡಗಳಿವೆ. ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ನೂರಾರು “ಸೇನೆ’ಗಳು ಹಾಗೂ “ವೇದಿಕೆ’ಗಳು ಆಸ್ತಿತ್ವಕ್ಕೆ ಬಂದಿವೆ. ಇದು ಇನ್ನೊಂದು ಪ್ರತ್ಯೇಕ ಕತೆ.ರಾಜಕೀಯ ಪಕ್ಷಗಳ ಸಾಲಿಗೆ ಈಗ ಇನ್ನೊಂದು ಸೇರ್ಪಡೆ ಯಾಗಿದೆ. ಕರ್ನಾಟಕ ಮೂಲದ, ತಮಿಳಿನ ಸೂಪರ್‌ಸ್ಟಾರ್ ರಜನೀಕಾಂತ್ ತಾನು ರಾಜಕೀಯ ಪ್ರವೇಶಿಸುವುದಾಗಿ, ತನ್ನದೇ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ತಮಿಳುನಾಡಿನ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ತಮ್ಮದೇ ಬಲದಿಂದ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಲಿದ್ದಾರೆ. ಬಹುಶಃ ಯಾವ ಪಕ್ಷದೊಂದಿಗೂ ಮೈತ್ರಿ ಏರ್ಪಡಿಸಿಕೊಳ್ಳುವ ಗೋಜಿಗೆ ಅವರು ಹೋಗಲಾರರು. ತಮಿಳು ನಾಡಿನಲ್ಲಿಂದು ರಾಜಕೀಯವೆಂಬುದು ಸ್ಥಿತ್ಯಂತರದ ಹಂತದಲ್ಲಿದೆ. ಆಡಳಿತಾರೂಢ ಎಐಎಡಿಎಂಕೆ ತನ್ನ ಶಾಸಕರ ಗಣವನ್ನು ಹೇಗೆ ರಕ್ಷಿಸಿಕೊಳ್ಳು ವುದೆಂಬುದನ್ನು, ಡಿಎಂಕೆಯ ಹಾಗೂ ಎಐಎಡಿಎಂಕೆಯ ಶಶಿಕಲಾ ಬಣದ ಜಂಟಿ ಸವಾಲನ್ನು ಹೇಗೆ ಎದುರಿಸುತ್ತದೆಂಬುದನ್ನು ಕಾದು ನೋಡಬೇಕಾಗಿದೆ. ಆ ರಾಜ್ಯದ ವಿಧಾನಸಭೆಯ ಅವಧಿ 2021ರ ವರೆಗಿದೆ. ಆದರೆ ಅಲ್ಲಿನ ಚುನಾವಣೆ ಅವಧಿಗಿಂತ ಮುನ್ನವೇ ನಡೆಯುವ ಎಲ್ಲ ಸಾಧ್ಯತೆಗಳೂ ಇವೆ.
Related Articles
Advertisement
ರಜನೀಕಾಂತ್ ಅವರ ರಾಜಕೀಯ ಪ್ರವೇಶದಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿರುವವರು ಈ ಹಿಂದೆ ಇನ್ನೊಬ್ಬ ತಮಿಳು ಚಿತ್ರತಾರೆ ವಿಜಯಕಾಂತ್ ಅವರಿಗೆ ಯಾವ ಗತಿ ಬಂತೆಂಬುದನ್ನು ನೆನಪಿಸಿಕೊಳ್ಳಬೇಕು. ವಿಜಯಕಾಂತ್ ಕೂಡ (“ದೇಸೀಯ ಮುರುಕೊಪ್ಪು ದ್ರಾವಿಡ ಕಳಗಂ’ ಎಂಬ) ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದರು. ಈ ಪಕ್ಷ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜತೆಗೆ ಮೈತ್ರಿ ಏರ್ಪಡಿಸಿಕೊಂಡು ತಮಿಳುನಾಡು ವಿಧಾನಸಭೆಯ 29 ಸ್ಥಾನ ಗಳನ್ನು ಬಗಲಿಗೆ ಹಾಕಿಕೊಂಡಿತ್ತು. ಮುಂದೆ ವಿಜಯಕಾಂತ್ ಅವರು ಜಯಲಲಿತಾರ ಜತೆಗಿನ ಮೈತ್ರಿಗೆ ಎಳ್ಳುನೀರು ಬಿಟ್ಟು ಸದನದಲ್ಲಿ ವಿರೋಧ ಪಕ್ಷದ ನಾಯಕರಾದರು. ಇವರ ಪಕ್ಷ ಮುಂದೆ 2016ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೆ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ. ಜನ ಸಾಮಾನ್ಯರು ಚಿತ್ರ ತಾರೆಯರ ವರ್ಚಸ್ಸಿನಿಂದ ಹೆಚ್ಚು ಕಾಲ ಹುಚ್ಚು ಹಿಡಿಸಿಕೊಳ್ಳಲಾರರು ಎಂಬುದಕ್ಕೆ ಇದೇ ಉದಾಹರಣೆ.
ಇಂದು ರಾಜಕೀಯ ಪಕ್ಷಗಳ ಸಂಖ್ಯೆ ಮಿತಿ ಮೀರಿದೆ. ಇಂಥ ಸನ್ನಿವೇಶದಲ್ಲಿ ಜನ ಮರುಳು (ಪಾಪ್ಯುಲಿಸ್ಟ್) ಕಾರ್ಯಕ್ರಮಗಳ ರಾಜಕೀಯಕ್ಕೆ ಹೆಚ್ಚಿನ ಪ್ರೋತ್ಸಾಹ. ಹೊಸದಾಗಿ ಅವತರಿಸುವ ಪಕ್ಷಗಳು ಆ ಚಂದ್ರನನ್ನೇ ತಂದು ನಿಮ್ಮ ಅಂಗೈಯಲ್ಲಿಡುತ್ತೇವೆ ಎಂಬಂಥ ಭರವಸೆ ನೀಡಿ ಮೇಲೆ ಬರುತ್ತವೆ. ಹೇಳಲೇಬೇಕಾದ ಮಾತೆಂದರೆ ತಮಿಳುನಾಡಿನ ಮತದಾರರು ಉಚಿತ ಕೊಡುಗೆಗಳ ರಾಜಕೀಯದಿಂದ ಭ್ರಷ್ಟಗೊಂಡಿದ್ದಾರೆ. ತಮಿಳು ನಾಡಿನ ಆರ್.ಕೆ. ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಂದೂಡಲ್ಪಟ್ಟದ್ದು, ಮತದಾರರಿಗೆ ಹಣ ಹಂಚಲಾಯಿತೆಂಬ ಕಾರಣಕ್ಕಾಗಿ. ಈ ಬಾರಿ ಎಐಎಡಿಎಂಕೆಯ ಬಂಡಾಯ ಅಭ್ಯರ್ಥಿ ದಿವಾಕರನ್ ಅವರು ಗೆದ್ದಿದ್ದಾರಾದರೂ, ಅವರ ಆಯ್ಕೆಯೂ ಮತದಾರರಿಗೆ ಹಣ ತಿನ್ನಿಸಿದ್ದರಿಂದಲೇ ಆಗಿದೆ ಎಂಬಂಥ ಆರೋಪಗಳು ಕೇಳಿ ಬಂದಿವೆ.
ರಜನೀಕಾಂತ್ ಅವರ ಈ ಹೊಸ ಸಾಹಸಕ್ಕಾಗಿ ನಾವು ಅವರನ್ನು ಖಂಡಿತ ಅಭಿನಂದಿಸೋಣ. ಆದರೆ ಇದೇ ವೇಳೆ ಜನಸೇವೆಯ ಮೂಲಕ, ಆಂದೋಲನ, ಹೋರಾಟ ಹಾಗೂ ಪಕ್ಷದ ಕಾರ್ಯಕರ್ತರ , ನಾಯಕರ ಪ್ರಾಂಜಲ ತ್ಯಾಗದ ಮೂಲಕ, ಅಂತೆಯೇ ಸುಸ್ಪಷ್ಟ ಸಿದ್ಧಾಂತದ ಫಲವಾಗಿ ಅಸ್ತಿತ್ವಕ್ಕೆ ಬರುವ ಪಕ್ಷಗಳು ದೇಶಕ್ಕೆ ಅತ್ಯಗತ್ಯ ಎಂಬುದನ್ನು ಒತ್ತಿ ಹೇಳಬೇಕಾಗಿದೆ. ರಜನೀಕಾಂತ್ ತಮ್ಮಲ್ಲಿರುವ ಹಣಬಲದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಬಹುಶಃ ಕೋಟಿಗಟ್ಟಲೆ ಹಣ ಹಾಗೂ ಬೆಳ್ಳಿತೆರೆಯ ಮೇಲಿನ ತಮ್ಮ ಅತಿರೇಕದ ಅಭಿನಯ ಇವು ತಮಗೆ ಮತಗಳನ್ನು ತಂದುಕೊಡಲಿವೆ ಎಂದವರು ನಂಬಿದಂತಿದೆ. ಅಂದ ಹಾಗೆ ಅವರಿನ್ನೂ ತಮ್ಮ ಪಕ್ಷದ ಧ್ಯೇಯ, ಧೋರಣೆಗಳೇನೆಂಬುದನ್ನು ಪ್ರಕಟಿಸಿಲ್ಲ. ಜಯಲಲಿತಾ ರಂತೆಯೇ ಅವರು ಕೂಡ ತಮ್ಮ “ಕನ್ನಡ ಮೂಲ’ವನ್ನು ನಿರಾಕರಿಸಿ ತಮಿಳರಾಗಿಬಿಟ್ಟಿದ್ದಾರೆ. ಕೆಲವು ದಶಕಗಳಿಂದ ತಮಿಳು ನಾಡಿನಲ್ಲಿ ಪ್ರಾಂತೀಯ ಪಕ್ಷಪಾತ ಹಾಗೂ ಜಾತೀಯತೆಯ ಧೋರಣೆಗಳೇ ಮೇಲುಗೈ ಸಾಧಿಸಿರುವುದರಿಂದ, ಅಲ್ಲಿನವರೆಗೆ ಇವರ “ಕನ್ನಡಿಗ’ ವ್ಯಕ್ತಿತ್ವ ರುಚಿಸಲಾರದೆನ್ನುವುದು ನಿಜ.
ರಾಜಕೀಯ ಪ್ರವೇಶದ ಆಮಿಷಕ್ಕೆ ಒಳಗಾಗದ ದಕ್ಷಿಣ ಭಾರತದ ಚಿತ್ರರಂಗದ ಮೇರುವ್ಯಕ್ತಿ ಒಬ್ಬರಿದ್ದರೆ ಅದು ನಮ್ಮ ರಾಜಕುಮಾರ್. 1978ರಲ್ಲಿ ನಡೆದ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಇಂದಿರಾಗಾಂಧಿಯವರ ವಿರುದ್ಧ ಕಾಂಗ್ರೆಸ್ಸೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅವರ ಮೇಲೆ ಭಾರೀ ಒತ್ತಡ ಬಿದ್ದಿತು. ಆದರೆ ಅವರು ಈ ಪ್ರಸ್ತಾವಕ್ಕೆ ಒಪ್ಪಲಿಲ್ಲ. ತನ್ನ ಹೆಸರನ್ನು ಸೂಚಿಸಿದವರಿಗೆ, “ಇದೆಲ್ಲ ಬೇಡ, ನಿಮಗೆ ಧನ್ಯವಾದಗಳು’ ಎಂದು ಸುಮ್ಮನಾದರು.
ಹಿಂದಿ ಚಿತ್ರರಂಗದ ಅಮಿತಾಭ್ ಬಚ್ಚನ್, ಶತ್ರುಘ್ನ ಸಿನ್ಹಾ , ಜಯಾ ಬಾಧುರಿ ಹಾಗೂ ಜಯಪ್ರದಾ ಮುಂತಾದ ತಾರೆಯರು ರಾಜಕೀಯ ಪ್ರವೇಶ ಮಾಡಿ ಅದರಿಂದ ಹೊರ ಬಂದದ್ದಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಂಥ ಬಲಿಷ್ಠ ಪಕ್ಷಗಳನ್ನು ಇವರು ಸೇರಿಕೊಂಡಿದ್ದರು. ಇವರ ಪೈಕಿ ಯಾರೂ ರಜನೀಕಾಂತರಂತೆ ಸ್ವಂತ ಪಕ್ಷ ಕಟ್ಟಲಿಲ್ಲ.
ರಜನೀಕಾಂತರಲ್ಲದೆ, ಎಂ.ಜಿ. ರಾಮಚಂದ್ರನ್ ಅವರು ದ್ರಾವಿಡ ರಾಜಕೀಯ ಆಂದೋಲನದಲ್ಲಿ ದೊಡ್ಡ ರೀತಿಯಲ್ಲಿ ಭಾಗಿಯಾದರು. ಅನೇಕ ವರ್ಷಗಳ ಕಾಲ ರಾಜಕೀಯ ಸೇವೆ ಸಲ್ಲಿಸಿದ ಬಳಿಕ ಅಧಿಕಾರಕ್ಕೆ ಬಂದರು. ಅವರು ದಿನ ಬೆಳಗಾಗುವುದರೊಳಗೆ ಮುಖ್ಯಮಂತ್ರಿಯಾದವರಲ್ಲ. ಆದರೆ ಜಯಲಲಿತಾ, ಎಂಜಿಆರ್ ಅವರ ಪ್ರೋತ್ಸಾಹದಿಂದಲೇ ರಾಜಕೀ ಯಕ್ಕೆ ಬಂದರು. ರಾಜಕೀಯ ರಂಗದಲ್ಲಿ ತಾರಾಪಟ್ಟವನ್ನೂ ಗಳಿಸಿದರು. ಸಿ.ಎನ್. ಅಣ್ಣಾದೊರೆ ಅವರಾಗಲಿ, ಎಂ. ಕರುಣಾನಿಧಿಯವರಾಗಲಿ ದ್ರಾವಿಡಪರ ಆಂದೋಲನದಲ್ಲಿ ಸಾಕಷ್ಟು ಬೆವರು ಹರಿಸಿಯೇ ಆಧಿಕಾರಕ್ಕೆ ಬಂದವರು.
ನಾವೀಗ ರಜನಿಕಾಂತ್ ನಡೆಯನ್ನು ಅನುಮಾನದ ಕಣ್ಣುಗ ಳಿಂದಲೇ ನೋಡಬೇಕಾಗಿದೆ. ತನ್ನ ಹೆಚ್ಚಿನ ಸಿನಿಮಾಗಳು ಭರ್ಜರಿ ವಿಜಯ ಸಾಧಿಸಿದಂತೆ ರಾಜಕೀಯ ಪ್ರವೇಶದಿಂದಲೂ ಅದೃಷ್ಟ ಖುಲಾಯಿಸೀತು ಎಂದು ಅವರು ಅಂದುಕೊಂಡಿದ್ದರೆ, ಅವರದು ಖಂಡಿತಾ ತಪ್ಪು ಲೆಕ್ಕಾಚಾರ. ಸಿನಿಪ್ರಿಯರ ಪೈಕಿ ಹೆಚ್ಚಿನವರು ಅವರ ಚಿತ್ರಗಳನ್ನು ನೆನಪಿಟ್ಟುಕೊಂಡಿರುವುದು, ಅವುಗಳಲ್ಲಿ ಅವರ ಪ್ರದರ್ಶಿಸುವ ಸ್ಟಂಟ್‌ಗಳಿಗಾಗಿ ಹೊರತು ಅದ್ಭುತ ಅಭಿನಯ ಕ್ಕಾಗಲಿ ನಿರ್ದೇಶನದ ಕೌಶಲಕ್ಕಾಗಲಿ ಅಲ್ಲ.
ಅರಕೆರೆ ಜಯರಾಮ್