ನವದೆಹಲಿ: ಅಣ್ವಸ್ತ್ರ ನೀತಿಗೆ ಸಂಬಂಧಿಸಿದಂತೆ ನಾವು ಮೊದಲು ದಾಳಿ ನಡೆಸಬಾರದು ಎಂಬ ಧೋರಣೆ ಕೈಬಿಟ್ಟು ಇನ್ಮುಂದೆ ಭಾರತ ಸನ್ನಿವೇಶಕ್ಕೆ ತಕ್ಕಂತೆ ಆಯ್ಕೆಯನ್ನು ಬದಲಾಯಿಸಿಕೊಳ್ಳಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.
ಶುಕ್ರವಾರ ಪರಮಾಣು ಪರೀಕ್ಷೆ ನಡೆಸುವ ರಾಜಸ್ಥಾನದ ಪೋಕ್ರಾನ್ ಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಭವಿಷ್ಯದಲ್ಲಿ ಭಾರತ ಅಣ್ವಸ್ತ್ರ ದಾಳಿಗೆ ಸಂಬಂಧಿಸಿದಂತೆ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಲಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಪೋಕ್ರಾನ್ ನ್ಯೂಕ್ಲಿಯರ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಇದೀಗ ಭಾರತ ಮೊದಲು ಪರಮಾಣು ಉಪಯೋಗಿಸುವುದಿಲ್ಲ ಎಂಬ ಧೋರಣೆ ಕೈಬಿಟ್ಟು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ರಾಜಸ್ಥಾನದ ಪೋಕ್ರಾನ್ ನಲ್ಲಿ ಆರ್ಮಿ ಸ್ಕೌಟ್ ಮಾಸ್ಟರ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ರಾಜ್ ನಾಥ್ ಸಿಂಗ್ ನ್ಯೂಕ್ಲಿಯರ್ ಪರೀಕ್ಷಾರ್ಥ ಸ್ಥಳಕ್ಕೆ ಭೇಟಿ ನೀಡಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಥಮ ಪುಣ್ಯತಿಥಿ ದಿನವಾದ ಶುಕ್ರವಾರ ಗೌರವ ಸಲ್ಲಿಸಿದ್ದ ಸಿಂಗ್ ಪೋಕ್ರಾನ್ ಗೆ ಭೇಟಿ ನೀಡಿ ವಾಜಪೇಯಿ ಅವರ ಸಾಧನೆಯನ್ನು ಸ್ಮರಿಸಿಕೊಂಡರು. 1974ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪೋಕ್ರಾನ್ ನಲ್ಲಿ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದ್ದರು. 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪೋಕ್ರಾನ್ ನಲ್ಲಿ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದ್ದರು.