Advertisement
ರಕ್ಷಣ ಸಚಿವ ರಾಜನಾಥ್ ಸಿಂಗ್ ಶತ್ರು ದೇಶಗಳಿಗೆ ರವಾನಿಸಿದ ಸ್ಪಷ್ಟ ಸಂದೇಶ ಇದು. “ಏರೋ ಇಂಡಿಯಾ ಶೋ-2021’ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಿಂಗ್ ತಮ್ಮ ಭಾಷಣದಲ್ಲಿ ಯಾವುದೇ ರಾಷ್ಟ್ರದ ಹೆಸರು ಉಲ್ಲೇಖೀಸದೆ, ಗಡಿಯಲ್ಲಿ ಕಾಲು ಕೆರೆಯುವವರಿಗೆ ತಿರುಗೇಟು ನೀಡುವ ಸ್ಪಷ್ಟ ಸಂದೇಶವನ್ನು ರವಾನಿಸಿದರು.
130 ಶತಕೋಟಿ ಡಾಲರ್ ವೆಚ್ಚದಲ್ಲಿ ಸೇನೆಯ ಆಧುನೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಎಚ್‌ಎಎಲ್‌ಗೆ 48 ಸಾವಿರ ಕೋ.ರೂ. ಮೊತ್ತದಲ್ಲಿ 83 ಲಘು ಯುದ್ಧ ವಿಮಾನ (ಎಲ್‌ಸಿಎ)ಗಳ ಪೂರೈಕೆಗೆ ಗುತ್ತಿಗೆ ನೀಡಲಾಗಿದ್ದು, ಇದು “ಮೇಕ್ ಇನ್ ಇಂಡಿಯಾ’ದ ಅತೀ ದೊಡ್ಡ ಟೆಂಡರ್. 2024ರ ವೇಳೆಗೆ ರಕ್ಷಣ ಕ್ಷೇತ್ರದಲ್ಲಿ 1.75 ಲಕ್ಷ ಕೋ.ರೂ. ವಹಿವಾಟು ನಡೆಸುವ ಗುರಿ ಇದ್ದು, ಇದರಲ್ಲಿ 35 ಸಾವಿರ ಕೋಟಿ ರೂ. ಮೊತ್ತದ ವೈಮಾನಿಕ ಮತ್ತು ರಕ್ಷಣ ಉಪಕರಣಗಳ ರಫ್ತು ಸೇರಿದೆ. ಶೇ. 74ರಷ್ಟು ಸ್ವಯಂಪ್ರೇರಿತ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಸರಕಾರದ ಮೂಲಕ ಶೇ. 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಹುದಾಗಿದೆ ಎಂದರು.
Related Articles
Advertisement
ದೇಶವು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ. ಜಾಗತಿಕ ವೈಮಾನಿಕ ಉದ್ದಿಮೆಗಳು ಇಲ್ಲಿ ಹೂಡಿಕೆ ಮಾಡಬೇಕು. ಇದಕ್ಕೆ ಸರಕಾರ ಎಲ್ಲ ಅಗತ್ಯ ಸಹಕಾರ ನೀಡಲು ಬದ್ಧ ಎಂದು ಮುಕ್ತ ಆಹ್ವಾನ ನೀಡಿದರು.
ಏರೋ ಇಂಡಿಯಾ ಸಂದರ್ಭ ಹಿಂದೂ ಮಹಾಸಾಗರ ಪ್ರದೇಶದ ರಾಷ್ಟ್ರಗಳ ರಕ್ಷಣ ಸಚಿವರ ಸಮಾವೇಶ ನಡೆಯಲಿದೆ. ಚೀಫ್ ಆಫ್ ಏರ್ ಸ್ಟಾಫ್ಗಳ ಸಮಾವೇಶ ಕೂಡ ಏರ್ಪಾಡಾಗಿದೆ ಎಂದರು.
ಇದಕ್ಕೆ ಮುನ್ನ ಸಚಿವ ರಾಜನಾಥ್ ಸಿಂಗ್, 83 ಎಲ್‌ಸಿಎ ಪೂರೈಕೆಗೆ ಸಂಬಂಧಿಸಿದ ಒಪ್ಪಂದ ಪ್ರಮಾಣಪತ್ರವನ್ನು ಎಚ್‌ಎಎಲ್ ಅಧ್ಯಕ್ಷ ಮತ್ತು ಎಂಡಿ ಮಾಧವನ್ ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ:ದಲಿತ ಮಕ್ಕಳಿಗೆ ನಾಲ್ಕು ಸೈನಿಕ ಶಾಲೆ: ಗೋವಿಂದ ಕಾರಜೋಳ
ಉದ್ಯಮಿಗಳಿಗೆ ಸಹಕಾರ
ಸಿಎಂ ಯಡಿಯೂರಪ್ಪ ಮಾತನಾಡಿ, ಬೆಂಗಳೂರು ವಿಶ್ವದ ವೈಮಾನಿಕ ಕ್ಷೇತ್ರದ ಹೂಡಿಕೆಯಲ್ಲಿ 3ನೇ ಅತೀ ದೊಡ್ಡ ನಗರ ಆಗಿದೆ. ಇದಕ್ಕೆ ಕಾರಣ ಇಲ್ಲಿರುವ ಕೈಗಾರಿಕೆಗೆ ಪೂರಕವಾದ ವಾತಾವರಣ. ಹೆಚ್ಚುವರಿ ವಿದ್ಯುತ್, ವೈಮಾನಿಕ ಕ್ಷೇತ್ರದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ನೀತಿ ಸಹಿತ ಅನೇಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕೊರೊನಾ ಹಾವಳಿ ನಡುವೆಯೂ 14 ರಾಷ್ಟ್ರಗಳು ಈ ಬಾರಿಯ ಪ್ರದ ರ್ಶನಕ್ಕೆ ಸಾಕ್ಷಿಯಾಗಿರುವುದು ರಾಜ್ಯ ಸರಕಾರದ ಆಡಳಿತದ ಮೇಲಿನ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಉದ್ಯಮಿಗಳ ಹೂಡಿಕೆಗೆ ಅಗತ್ಯ ಸಹಕಾರ ನೀಡಲು ಸರಕಾರ ಸಿದ್ಧ ಎಂದರು.