ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಈ ಬಾರಿ ಕಣದಲ್ಲಿ ಹಾಲಿ ಸಂಸದ, ಗೃಹ ಸಚಿವ ರಾಜನಾಥ್ ಸಿಂಗ್ ಇದ್ದರೆ, ಅವರಿಗೆ ಎದುರಾಳಿಯಾಗಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದಿಂದ ಸಂಸದ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ(ಎಸ್‌ಪಿ) ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಹುರಿಯಾಳಾಗಿ ಆಚಾರ್ಯ ಪ್ರಮೋದ್ ಕೃಷ್ಣಂ ಇದ್ದಾರೆ.
ಲಕ್ನೋ ಕ್ಷೇತ್ರ ರಾಜಕೀಯವಾಗಿ ಬಹಳ ಪ್ರಸಿದ್ಧವಾದದ್ದು. ದಶಕಗಳಿಂದಲೂ ದೇಶವಾಸಿಗಳ ಬಾಯಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಈ ಸ್ಥಳದ ಹೆಸರು ಪ್ರಸ್ತಾಪವಾಗುತ್ತಲೇ ಬಂದಿದೆ. 1951ರಿಂದ 1967ರವರೆಗೆ ಕಾಂಗ್ರೆಸ್, 1967-1971ರ ಅವಧಿಯಲ್ಲಿ ಸ್ವತಂತ್ರ ಅಭ್ಯರ್ಥಿ ಆನಂದ ನಾರಾಯಣ್ ಮುಲ್ಲಾ, 1971-77ರ ಅವಧಿಯಲ್ಲಿ ಕಾಂಗ್ರೆಸ್‌ನ ಶೀಲಾ ಕೌಲ್, 1977-80ರ ಅವಧಿಯಲ್ಲಿ ಭಾರತೀಯ ಲೋಕದಳದ ಎಚ್.ಎನ್.ಬಹುಗುಣ, 1980-84, 1984-89ರ ಅವಧಿಯಲ್ಲಿ ಕಾಂಗ್ರೆಸ್‌ನ ಶೀಲಾ ಕೌಲ್ ಗೆದ್ದಿದ್ದರು. 1989-91ರ ಅವಧಿಯಲ್ಲಿ ಜನತಾ ದಳದ ಮಾಂಧಾತ ಸಿಂಗ್ ಚುನಾವಣೆ ಗೆದ್ದಿದ್ದರು. 1991ರ ಚುನಾವಣೆಯಿಂದ 2009ರ ವರೆಗೆ ಬಿಜೆಪಿ ನಾಯಕ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಗೆದ್ದಿದ್ದರು. ಐದು ಬಾರಿ ವಾಜಪೇಯಿ ಈ ಕ್ಷೇತ್ರದ ಸಂಸದರಾಗಿದ್ದರು. 2009-2014ರ ಅವಧಿಗೆ ಬಿಜೆಪಿ ನಾಯಕ ಲಾಲ್‌ಜಿ ಟಂಡನ್ ಸಂಸದರಾಗಿದ್ದರು.
ಸದ್ಯ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 2014ರ ಚುನಾವಣೆಯಲ್ಲಿ ಗೆದ್ದಿದ್ದರು. ಹಿಂದಿನ ಬಾರಿ ಸದ್ಯ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿರುವ ಪ್ರೊ.ರೀಟಾ ಬಹುಗುಣ ಜೋಶಿ ಅವರನ್ನು ಸೋಲಿಸಿದ್ದರು. ಸಿಂಗ್ ಅವರಿಗೆ 5,61,106 ಮತಗಳು ಪ್ರಾಪ್ತಿಯಾಗಿದ್ದವು.
ಇನ್ನು ಈ ಬಾರಿ ಕಾಂಗ್ರೆಸ್ ವತಿಯಿಂದ ಕಣದಲ್ಲಿ ಇರುವವರೆಂದರೆ ಆಚಾರ್ಯ ಪ್ರಮೋದ್ ಕೃಷ್ಣಂ ಅವರು. ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಆಚಾರ್ಯ ಪ್ರಮೋದ್, ಕಲ್ಕಿ ಫೌಂಡೇಷನ್‌ನ ಸ್ಥಾಪಕರು. 2014ರ ಚುನಾವಣೆಯಲ್ಲಿ ಸಂಭಾಲ್‌ನಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪ್ರಚಾರ ನಡೆಸಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಆಚಾರ್ಯ ಪ್ರಮೋದ್ ಅವರು “ಬಿಜೆಪಿಯು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮರೆತಿದೆ. ಒಂದು ವೇಳೆ ನಾನು ಗೆದ್ದರೆ ಲಕ್ನೋದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ದೊಡ್ಡ ಪ್ರತಿಮೆ ಸ್ಥಾಪಿಸುತ್ತೇನೆ’ ಎಂದು ಹೇಳಿದ್ದಾರೆ. ಇನ್ನು ಮೈತ್ರಿಕೂಟದ ಅಭ್ಯರ್ಥಿ ಪೂನಂ ಸಿನ್ಹಾ ಅವರು “ನಾನು ಚುನಾವಣೆಯಲ್ಲಿ ಸೋತರೂ ಗೆದ್ದರೂ ರಾಜಕೀಯ ತೊರೆಯುವುದಿಲ್ಲ’ ಎನ್ನುತ್ತಿದ್ದಾರೆ.
ನವಾಬರ ನಗರ ಎಂದು ಹೆಗ್ಗಳಿಕೆ ಪಡೆದಿರುವ ಲಕ್ನೋದಲ್ಲಿ ಬಿಜೆಪಿಯು ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ. ಎಸ್‌ಪಿ ಹುರಿಯಾಳು ಪೂನಂ ಸಿನ್ಹಾ ಯಾವ ರೀತಿಯ ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯು ಐದು ವರ್ಷಗಳ ಅವಧಿಯಲ್ಲಿ 25 ಸಾವಿರ ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎನ್ನುತ್ತಿದೆ.
ಇಲ್ಲಿ ಇರುವ ಶಿಯಾ ಸಮುದಾಯದ ಮುಸ್ಲಿಮರೂ ಕೂಡ ವಾಜಪೇಯಿಗೆ ಬೆಂಬಲ ನೀಡಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಾದಿತ ಹೇಳಿಕೆ ನೀಡಿದ್ದು ಕೊಂಚ ಆತಂಕಕಾರಿ ಎನ್ನುತ್ತಾರೆ ಸಮುದಾಯದ ನಾಯಕರು.
ಜಾತಿ ಲೆಕ್ಕಾಚಾರ: ಕ್ಷೇತ್ರದ ಮತದಾರರ ಪೈಕಿ ನಾಲ್ಕು ಲಕ್ಷ ಮಂದಿ ಕಾಯಸ್ಥ ಸಮುದಾಯ, 1.3 ಲಕ್ಷ ಮಂದಿ ಸಿಂಧಿ ಸಮುದಾಯ, 3.5 ಲಕ್ಷ ಮಂದಿ ಮುಸ್ಲಿಂ ಸಮುದಾಯದವರ ಸಂಖ್ಯೆ ಇದೆ. ಎಸ್‌ಪಿ ಹುರಿಯಾಳು ಸಿಂಧಿ ಸಮುದಾಯಕ್ಕೆ ಸೇರಿದವರು.