Advertisement

ಶೀಘ್ರ ಆಪರೇಷನ್‌ ಟೆರರ್‌

06:00 AM Jun 21, 2018 | Team Udayavani |

ಶ್ರೀನಗರ/ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಅಧಿಕೃತವಾಗಿ ರಾಜ್ಯಪಾಲರ ಆಳ್ವಿಕೆ ಆರಂಭವಾಗಿದೆ. ಎನ್‌.ಎನ್‌. ವೋಹ್ರಾ ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಶೀಘ್ರದಲ್ಲಿಯೇ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಶುರು ಮಾಡಲಾಗುವುದು ಎಂದು ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಹೇಳಿದ್ದಾರೆ.

Advertisement

ಮಂಗಳವಾರ ಶುರುವಾದ ಕಣಿವೆ ರಾಜ್ಯದ ಅಚ್ಚರಿಯ ರಾಜಕೀಯ ಬೆಳವಣಿಗೆ ಬುಧವಾರ ಮಧ್ಯಾಹ್ನದ ಹೊತ್ತಿಗೆ ತಾರ್ಕಿಕ ಅಂತ್ಯ ಕಂಡಿದೆ. ಮಂಗಳವಾರ ತಡರಾತ್ರಿಯೇ ರಾಜ್ಯ ಪಾಲರು ರಾಷ್ಟ್ರಪತಿ ಆಳ್ವಿಕೆಗಾಗಿ ಶಿಫಾರಸು ಮಾಡಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಿಕೊಟ್ಟಿದ್ದರು. ವಿದೇಶ ಪ್ರವಾಸ ದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಈ ಶಿಫಾರಸಿಗೆ ಸಹಿ ಹಾಕಿ ವಾಪಸ್‌ ಕಳುಹಿಸಿದ್ದಾರೆ. ಆರು ತಿಂಗಳ ವರೆಗೆ ರಾಜ್ಯಪಾಲರ ಆಳ್ವಿಕೆ ಇರಲಿದೆ. ಆದೇಶ ಬರುತ್ತಿದ್ದಂತೆ ಅಧಿಕಾರ ವಹಿಸಿಕೊಂಡಿರುವ ರಾಜ್ಯಪಾಲ ಎನ್‌.ಎನ್‌. ವೋಹ್ರಾ, ಶ್ರೀನಗರದಲ್ಲಿ ಹಿರಿಯ ಅಧಿಕಾರಿಗಳ ಜತೆ ಭದ್ರತಾ ವ್ಯವಸ್ಥೆ ಕುರಿತಂತೆ ಸಭೆ ನಡೆಸಿದರು. 

ಇದರ ಬೆನ್ನಲ್ಲೇ ಛತ್ತೀಸ್‌ಗಡದಲ್ಲಿರುವ ಹಿರಿಯ ಐಎಎಸ್‌ ಅಧಿಕಾರಿ ಬಿ.ವಿ.ಆರ್‌. ಸುಬ್ರಹ್ಮಣ್ಯಂ ಅವರನ್ನು ಕಣಿವೆ ರಾಜ್ಯಕ್ಕೆ ವರ್ಗಾಯಿಸಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಹಾಲಿ ಮುಖ್ಯ ಕಾರ್ಯದರ್ಶಿ ಬಿ.ಬಿ.ವ್ಯಾಸ್‌ ಮತ್ತು ನಿವೃತ್ತ ಐಪಿಎಸ್‌ ಅಧಿಕಾರಿ ವಿಜಯ ಕುಮಾರ್‌ ಅವರನ್ನು ರಾಜ್ಯಪಾಲರ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಸೇನಾ ಕಾರ್ಯಾಚರಣೆಗೆ ತಯಾರಿ: ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸೇನೆ ಕೂಡ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸನ್ನದ್ಧವಾಗುತ್ತಿದೆ. ಶೀಘ್ರದಲ್ಲೇ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ ಎಂದು ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅವರು ಹೇಳಿದ್ದಾರೆ.

ಅಮರನಾಥಕ್ಕೆ ಭಾರೀ ಭದ್ರತೆ: ಇದೇ 28ಕ್ಕೆ ಪವಿತ್ರ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಇದಕ್ಕೆ ಭಾರೀ ಭದ್ರತೆ ಒದಗಿಸಲು ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮೈತ್ರಿ ಧರ್ಮ ಮುರಿದಿಲ್ಲ: ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಅಪವಿತ್ರವೇನಲ್ಲ, ನಾವು ಮೈತ್ರಿ ಧರ್ಮವನ್ನೂ ಮುರಿದಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಹೇಳಿದ್ದಾರೆ.

Advertisement

ಪೊಲೀಸರ ಜತೆಗೆ ಆಪರೇಶನ್‌?
ಸೇನಾ ಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಒಟ್ಟಿಗೆ ಸೇರಿ ಉಗ್ರರ ವಿರುದ್ಧ ಸಮರ ಸಾರುವ ಎಲ್ಲ  ಸಾಧ್ಯತೆಗಳಿವೆ. ಕಾಶ್ಮೀರದ ಪೊಲೀಸ್‌ ಮೂಲಗಳ ಪ್ರಕಾರ, ಈಗಾಗಲೇ ಸಿದ್ಧತೆಯೂ ಆರಂಭವಾಗಿದೆ. ಸ್ಥಳೀಯ ಮಟ್ಟದಲ್ಲಿ ಪೊಲೀಸರಿಗೆ ಸಿಗುವ ಮಾಹಿತಿಯನ್ನು ಇರಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತದೆ. ಅಲ್ಲದೆ, ಪೊಲೀಸರು ನೇರವಾಗಿ ರಾಜ್ಯಪಾಲರ ಮೂಲಕ ಕೇಂದ್ರ ಸರಕಾರದ ಅಡಿಯಲ್ಲಿ ಬರುವುದರಿಂದ ಮಾಹಿತಿ ಹಂಚಿಕೆಗೂ ಸುಲಭವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next