Advertisement

ಜಾಯಿಂಟ್‌ ಥಿಯೇಟರ್‌ ಕಮಾಂಡ್‌ ಶೀಘ್ರ ಅಸ್ತಿತ್ವಕ್ಕೆ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಣೆ

10:02 PM Jul 24, 2022 | Team Udayavani |

ಜಮ್ಮು:  ಭಾರತೀಯ ಸೇನಾ ಪಡೆಗಳ ನಡುವಿನ ಉತ್ತಮ ಸಮನ್ವಯತೆ ಹಾಗೂ ಸಂವಹನಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಮೂರು ಪಡೆಗಳು ಸೇರಿದ ಜಾಯಿಂಟ್‌ ಥಿಯೇಟರ್‌ ಕಮಾಂಡ್‌ ರಚಿಸುವುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.

Advertisement

“ಕಾರ್ಗಿಲ್‌ ವಿಜಯ್‌ ದಿವಸ್‌’ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಆಯೋಜಿಸಲಾಗಿದ್ದ ಭಾರತೀಯ ಪಡೆಗಳ ಹುತಾತ್ಮ ಯೋಧರ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಮೂರು ಪಡೆಗಳ ಜಂಟಿ ಕಾರ್ಯಾಚರಣೆಯಡಿ ಈ ಹಿಂದೆ ಆಪರೇಷನ್‌ ವಿಜಯ್‌ (ಕಾರ್ಗಿಲ್‌ ಯುದ್ಧ) ಸೇರಿದಂತೆ ಅನೇಕ ಯುದ್ಧಗಳನ್ನು ನಡೆಸಲಾಗಿತ್ತು. ಅಂಥ ಸಂದರ್ಭಗಳು ಮುಂದೆಯೂ ಬಂದಾಗ ಮೂರು ಪಡೆಗಳಾದ ನೌಕಾಪಡೆ, ಭೂಸೇನೆ ಹಾಗೂ ವಾಯುಪಡೆಗಳ ನಡುವೆ ಉತ್ತಮ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಜಾಯಿಂಟ್‌ ಥಿಯೇಟರ್‌ ಕಮಾಂಡ್‌ ರಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪಿಒಕೆ ಪಡೆದೇ ತೀರುತ್ತೇವೆ:

ಪಾಕ್‌ ಆಕ್ರಮಿತ ಕಾಶ್ಮೀರವು (ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಒತ್ತಿ ಹೇಳಿದ ಅವರು, ಪಿಒಕೆ ಪ್ರಾಂತ್ಯವನ್ನು ನಾವು ಪುನಃ ಮರಳಿ ಪಡೆದೇ ತೀರುತ್ತೇನೆ ಎಂದು ಘೋಷಿಸಿದರು.  ಅಮರನಾಥ ದೇವರ ಆವಾಸ ಸ್ಥಾನ ನಮ್ಮಲ್ಲಿದ್ದು, ಶಾರದಾ ಮಾತೆಯ ಶಕ್ತಿಪೀಠ (ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಶಕ್ತಿ ಪೀಠಗಳಲ್ಲೊಂದು) ಎಲ್‌ಒಸಿ ಬಳಿಯಿದೆ. ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಶ್ರೀ ಶಂಕರಾರ್ಯರು ಕರ್ನಾಟಕದ ಶೃಂಗೇರಿ ಸೇರಿದಂತೆ ಭಾರತದ ನಾಲ್ಕು ದಿಕ್ಕುಗಳಲ್ಲಿ ಶಾರದಾ ಮಾತೆಯ ಶಕ್ತಿಪೀಠಗಳನ್ನು ಸ್ಥಾಪಿಸಿದ್ದಾರೆ. ಮೂರು ಪೀಠಗಳು ಭಾರತದಲ್ಲೇ ಇದ್ದರೆ, ಉತ್ತರ ಭಾಗದಲ್ಲಿ ನಿರ್ಮಿಸಿರುವ ಶಕ್ತಿಪೀಠವು, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದು, ಶಿಥಿಲಾವಸ್ಥೆಯಲ್ಲಿದೆ.

Advertisement

“ಭಾರತವು ಶಕ್ತಿಶಾಲಿ ರಾಷ್ಟ್ರವಾಗಿದೆ. ಯಾವುದೇ ವಿದೇಶಿ ಶಕ್ತಿ ಭಾರತದ ಮೇಲೆ ಕೆಟ್ಟ ಕಣ್ಣು ಬಿಟ್ಟರೆ, ನಾವು ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಹೊಂದಿದ್ದೇನೆ. ಹಾಗೊಂದು ವೇಳೆ ಯುದ್ಧ ಸಂಭವಿಸಿದರೆ, ನಾವು ಗೆಲ್ಲುವುದು ಶತಸಿದ್ಧ” ಎಂದು ಅವರು ವಿವರಿಸಿದರು.

ನೆಹರೂ ವಿರುದ್ಧ ವಾಗ್ಧಾಳಿ:

ಚೀನಾ ಸೇನೆಯು 1962ರಲ್ಲಿ ಲಡಾಖ್‌ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ, ಪಂಡಿತ್‌ ನೆಹರೂ ಅವರು ನಮ್ಮ ದೇಶದ ಪ್ರಧಾನಿಯಾಗಿದ್ದರು. ಆಗ ಚೀನಾ ಮಾಡಿದ ಅತಿಕ್ರಮಣವನ್ನು ತಡೆಯಲು ಸಾಧ್ಯವಾಗಲಿಲ್ಲ. ಭಾರತ ಇಂದು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ಹುತಾತ್ಮರ ಸ್ಮರಣೆ :

ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾರ್ಗಿಲ್‌ ಹುತಾತ್ಮ ಯೋಧರ ಕುಟುಂಬದವರನ್ನು ರಾಜನಾಥ್‌ ಸಿಂಗ್‌ ವೈಯಕ್ತಿಕವಾಗಿ ಮಾತನಾಡಿಸಿದರು. ನಮ್ಮ ಯೋಧರು ಭಾರತಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟು ಹೋರಾಡಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುತ್ತಾ ನಾನು ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ರಾಜನಾಥ್‌ಸಿಂಗ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next